ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ನೆರವಿಗೆ ‘ವಾಲ್‌ ಆಫ್‌ ಕೈಂಡ್‌ನೆಸ್‌’

Last Updated 7 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ:ಬಡವರು, ನಿರ್ಗತಿಕರ ನೆರವಿಗೆ ಮುಂದಾಗಿರುವ ಇಲ್ಲಿನ ರೋಟರಿ ಕ್ಲಬ್‌, ‘ವಾಲ್‌ ಆಫ್‌ ಕೈಂಡ್‌ನೆಸ್‌’ ಮೂಲಕ ಸಹಾಯಹಸ್ತ ಚಾಚುತ್ತಿದೆ.

ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ, ಡಯಾಲಿಸಿಸ್‌, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಪಠ್ಯಪುಸ್ತಕ, ಶೂ, ಬ್ಯಾಗ್‌ ವಿತರಣೆ, ಮಳೆ ನೀರು ಸಂಗ್ರಹದಂತಹ ಜನಪರ ಕೆಲಸಗಳನ್ನು ಮಾಡುತ್ತಿರುವ ರೋಟರಿ, ಈಗ ಇನ್ನೊಂದು ಹೊಸ ಕೆಲಸಕ್ಕೆ ಕೈ ಹಾಕಿದೆ.

ನಗರದ ಸ್ಟೇಷನ್‌ ರಸ್ತೆಯಲ್ಲಿನ ರೋಟರಿ ಕ್ಲಬ್‌ನ ಪ್ರವೇಶ ದ್ವಾರದಲ್ಲಿ ‘ವಾಲ್‌ ಆಫ್‌ ಕೈಂಡ್‌ನೆಸ್‌’ ಹೆಸರಿನಲ್ಲಿ ಬಾಕ್ಸ್‌ ರೂಪದ ಸೆಲ್ಫ್‌ಗಳನ್ನು ನಿರ್ಮಿಸಿದೆ. ಅದರಲ್ಲಿ ಯಾರು ಬೇಕಾದರೂ ಬಟ್ಟೆ, ಪಾತ್ರೆ ಸಾಮಾನು ಸೇರಿದಂತೆ ಇತರೆ ದೈನಂದಿನ ಉಪಯೋಗದ ವಸ್ತುಗಳನ್ನು ಇಟ್ಟು ಹೋಗಬಹುದು.

ಅಲ್ಲಿ ಸಂಗ್ರಹವಾದ ವಿವಿಧ ಬಗೆಯ ವಸ್ತುಗಳನ್ನು ಅಲ್ಲಿನ ಸಿಬ್ಬಂದಿ ಅವುಗಳನ್ನು ಪ್ರತ್ಯೇಕಿಸಿ, ಸುಸಜ್ಜಿತವಾಗಿ ಬೇರೆ ಕಡೆ ಜೋಡಿಸಿ ಇಡುತ್ತಾರೆ. ನಂತರ ಯಾರಿಗೆ ಅಗತ್ಯವಿದೆಯೋ ಅಂತಹವರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದೆ. ವಾರದ ಹಿಂದೆ ಈ ವಿನೂತನ ಕೆಲಸ ಆರಂಭಿಸಿದ್ದು, ಪ್ರಾರಂಭದಲ್ಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಕೆಲವರು ಹಳೆಯ ಬಟ್ಟೆ, ಪಾತ್ರೆ ಸಾಮಾನು ಸೇರಿದಂತೆ ಇತರೆ ವಸ್ತುಗಳನ್ನು ಬಳಸದೆ ಮನೆಯ ಒಂದು ಕೋಣೆಯಲ್ಲಿ ಹಾಗೆಯೇ ಇಟ್ಟಿರುತ್ತಾರೆ. ಅವುಗಳು ಅಲ್ಲೇ ಧೂಳು ತಿನ್ನುತ್ತ ಹಾಳಾಗುತ್ತಿರುತ್ತವೆ. ಮತ್ತೆ ಕೆಲವರು, ಬಹಳ ಕಡಿಮೆ ಬೆಲೆಗೆ ಗುಜರಿಗೆ ಹಾಕುತ್ತಾರೆ. ಹೀಗೆ ಮಾಡುವ ಬದಲು ಅವುಗಳನ್ನು ‘ವಾಲ್‌ ಆಫ್‌ ಕೈಂಡ್‌ನೆಸ್‌’ ಪೆಟ್ಟಿಗೆಯಲ್ಲಿ ಹಾಕಿ ಹೋದರೆ, ಬಡವರು, ನಿರ್ಗತಿಕರು ಹಾಗೂ ಅನಾಥಾಶ್ರಮದಲ್ಲಿ ಇರುವವರಿಗೆ ತಲುಪಿಸಿ, ಅವರಿಗೆ ನೆರವಿನ ಹಸ್ತ ಚಾಚಲಾಗುವುದು’ ಎಂದು ರೋಟರಿ ಕ್ಲಬ್‌ ಅಧ್ಯಕ್ಷ ಗೊಗ್ಗ ವಿಶ್ವನಾಥ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಇಂತಹದ್ದೊಂದು ಕೆಲಸ ಈಗಾಗಲೇ ಬೆಂಗಳೂರು, ತುಮಕೂರಿನಲ್ಲಿ ಕೆಲವರು ಮಾಡಿದ್ದಾರೆ. ಅದಕ್ಕೆ ಒಳ್ಳೆಯ ಯಶಸ್ಸು ಸಿಕ್ಕಿದೆ. ನಮ್ಮ ಊರಿನಲ್ಲಿ ಮಾಡಿದರೆ ಹೇಗಿರುತ್ತದೆ ಎಂದು ಆರಂಭಿಸಲಾಗಿದ್ದು, ಪ್ರಾರಂಭದಲ್ಲೇ ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಈ ಕುರಿತು ಇನ್ನಷ್ಟೇ ಪ್ರಚಾರ ಕೈಗೊಳ್ಳಬೇಕಿದೆ. ಅಷ್ಟೇ ಅಲ್ಲ, ಸ್ವಾತಂತ್ರ್ಯೋತ್ಸವ ದಿನ ಅಧಿಕೃತವಾಗಿ ಚಾಲನೆ ಕೊಡಲಾಗುವುದು. ಅಷ್ಟರಲ್ಲಾಗಲೇ ಜನ ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಇಟ್ಟು ಹೋಗುತ್ತಿದ್ದಾರೆ’ ಎಂದು ವಿವರಿಸಿದರು.

‘ವಾರದ ಎಲ್ಲ ದಿನ ಬೆಳಿಗ್ಗೆ ಒಂಬತ್ತರಿಂದ ಸಂಜೆ ಏಳು ಗಂಟೆಯ ವರೆಗೆ ಯಾರು ಬೇಕಾದರೂ ಬಂದು ವಸ್ತುಗಳನ್ನು ಇಟ್ಟು ಹೋಗಬಹುದು. ಈ ಸಂಬಂಧ ಕೆಲವು ಅನಾಥಾಶ್ರಮಗಳನ್ನು ಸಂಪರ್ಕಿಸಲಾಗಿದೆ. ನಮ್ಮ ಕ್ಲಬ್‌ ವತಿಯಿಂದಲೂ ಭಿಕ್ಷುಕರು ಸೇರಿದಂತೆ ಕೆಲವರನ್ನು ಗುರುತಿಸಿ, ಅವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

ಅಂದಹಾಗೆ, ಈ ಹೊಸ ಪ್ರಯತ್ನಕ್ಕೆ ರೋಟರಿ ಕ್ಲಬ್‌ ಕಾರ್ಯದರ್ಶಿ ವಿ.ಜಿ. ಶ್ರೀಕಾಂತರಾವ, ಯೋಜನೆಯ ಉಸ್ತುವಾರಿಗಳಾದ ಕೆ. ತಿಪ್ಪೇರುದ್ರ, ಸತ್ಯನಾರಾಯಣ, ಮಾಜಿ ಅಧ್ಯಕ್ಷ ಅಶ್ವಿನ್‌ ಕೋತಂಬ್ರಿ ಕೈಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT