ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಪನಹಳ್ಳಿಯಲ್ಲೇಕೆ ರೆಡ್ಡಿ ಸಹೋದರರ ಒಗ್ಗಟ್ಟು?

Last Updated 11 ಏಪ್ರಿಲ್ 2022, 14:21 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಒಂದು ದಶಕದಿಂದ ಪರಸ್ಪರ ಅಂತರ ಕಾಯ್ದುಕೊಂಡಿದ್ದ ಬಳ್ಳಾರಿಯ ರೆಡ್ಡಿ ಸಹೋದರರು ಭಾನುವಾರ ಜಿಲ್ಲೆಯ ಹರಪನಹಳ್ಳಿಯಲ್ಲೇಕೇ ಒಗ್ಗಟ್ಟು ಪ್ರದರ್ಶಿಸಿದರು?

ಹೌದು ಈಗ ಹಲವರನ್ನು ಕಾಡುತ್ತಿರುವ ಪ್ರಶ್ನೆಯಿದು. 2011ರಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ್‌ ರೆಡ್ಡಿ ಜೈಲು ಸೇರಿದ್ದರು. ಅದಾದ ಬಳಿಕ ಶಾಸಕ ಜಿ. ಕರುಣಾಕರ ರೆಡ್ಡಿ ಅವರು, ಸಹೋದರರಿಂದ ಅಂತರ ಕಾಯ್ದುಕೊಂಡಿದ್ದರು. ಕೌಟುಂಬಿಕ ಅಥವಾ ಇತರೆ ಸಂಘಟನೆಗಳವರ ಕಾರ್ಯಕ್ರಮದಲ್ಲಿ ಜನಾರ್ದನ್‌ ರೆಡ್ಡಿ, ಶಾಸಕ ಸೋಮಶೇಖರ್‌ ರೆಡ್ಡಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ, ಕರುಣಾಕರ ರೆಡ್ಡಿ ದೂರವೇ ಇದ್ದರು. ಅವರ ಪಾಡಿಗೆ ಅವರು ಹರಪನಹಳ್ಳಿಗೆ ಸೀಮಿತವಾಗಿ ಕೆಲಸ ಮಾಡಿಕೊಂಡು ಇದ್ದರು.

ಆದರೆ, ಒಂದು ದಶಕದ ನಂತರ ವೈಮನಸ್ಸು ಮರೆತು ಒಗ್ಗಟ್ಟು ತೋರಿಸಲು ಕಾರಣವೇನು? ಕರುಣಾಕರ ರೆಡ್ಡಿ ಅವರ ಜನ್ಮದಿನದ ಪ್ರಯುಕ್ತ ರಾಮನವಮಿಯ ದಿನವಾದ ಭಾನುವಾರ ಸೀತಾರಾಮ ಕಲ್ಯಾಣ ಉತ್ಸವ ಏರ್ಪಡಿಸಿ ಒಂದೆಡೆ ಸೇರಿದ್ದು ಏಕೆ? ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಹಲವು ಶಾಸಕರು, ಸಂಸದರನ್ನು ಆಹ್ವಾನಿಸಿ ಆ ಮೂಲಕ ಶಕ್ತಿ ಪ್ರದರ್ಶಿಸಿದ್ದಕ್ಕೆ ಕಾರಣವೇನು?

ಹರಪನಹಳ್ಳಿ ಕ್ಷೇತ್ರದ ಮೇಲೆ ತನ್ನ ಪ್ರಭಾವ ಹೆಚ್ಚಿಸಿಕೊಂಡು ನೂತನ ವಿಜಯನಗರ ಜಿಲ್ಲೆಯ ಮೇಲೆ ಹಿಡಿತ ಸಾಧಿಸಬೇಕು. ಮತ್ತು ಕರುಣಾಕರ ರೆಡ್ಡಿ ವಿರುದ್ಧ ಕೆಲಸ ಮಾಡುತ್ತಿರುವ ಬಿಜೆಪಿಯೊಳಗಿನ ಬಣವನ್ನು ನಿಯಂತ್ರಿಸುವುದು ಇದರ ಹಿಂದಿನ ಉದ್ದೇಶ ಎಂದು ಗೊತ್ತಾಗಿದೆ.

ಎರಡು ಸಲ ಕರುಣಾಕರ ರೆಡ್ಡಿ ಅವರು ಹರಪನಹಳ್ಳಿ ಕ್ಷೇತ್ರದಿಂದ ಗೆದ್ದಿದ್ದಾರೆ. ಆದರೆ, ಮೊದಲಿನಿಂದಲೂ ಇವರು ಹೊರಗಿನವರು ಎಂಬ ಆರೋಪ ಇದೆ. ಮೇಲಿಂದ ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಬಿರಗಳಿಗೆ ಹೆಚ್ಚಾಗಿ ಹೋಗುವುದಿಲ್ಲ. ಆ ಮುಖಂಡರಿಗೆ ಸೊಪ್ಪು ಹಾಕುವುದಿಲ್ಲ. ತನ್ನ ಪಾಡಿಗೆ ಕೆಲಸ ಮಾಡಿಕೊಂಡು ಇರುತ್ತಾರೆ. ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಈ ವಿಷಯ ಸ್ಥಳೀಯ ಆರ್‌ಎಸ್‌ಎಸ್‌, ಬಿಜೆಪಿ ಮುಖಂಡರಿಗೆ ಬಿಸಿ ತುಪ್ಪವಾಗಿದೆ. ಹಾಗಾಗಿಯೇ ಅವರು ಬರುವ ಚುನಾವಣೆಯಲ್ಲಿ ಕರುಣಾಕರ ರೆಡ್ಡಿ ಬದಲು ಸ್ಥಳೀಯರಿಗೆ ಮಣೆ ಹಾಕಬೇಕೆಂದು ಒಳಗೊಳಗೆ ಮಸಲತ್ತು ನಡೆಸುತ್ತಿದ್ದಾರೆ. ಅಂದಹಾಗೆ, ಕರುಣಾಕರ ರೆಡ್ಡಿ ವಿರುದ್ಧ ಕೆಲಸ ಮಾಡುತ್ತಿರುವ ಗುಂಪು ಜನಾರ್ದನ್‌ ರೆಡ್ಡಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ.

ಇದನ್ನೆಲ್ಲ ಅರಿತುಕೊಂಡೇ ಕರುಣಾಕರ ರೆಡ್ಡಿ ಅವರು ಜನಾರ್ದನ್‌ ರೆಡ್ಡಿ ಅವರೊಂದಿಗಿನ ಹಳೆಯ ವೈಮನಸ್ಸು ಮರೆತು ಕ್ಷೇತ್ರಕ್ಕೆ ಕರೆಸಿಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಅವರ ವಿರುದ್ಧ ಕತ್ತಿ ಮಸೆಯುತ್ತಿರುವವರನ್ನು ಜನಾರ್ದನ್‌ ರೆಡ್ಡಿ ಮೂಲಕ ಸಂಧಾನ ಮಾಡಿಸಿ, ನಿಯಂತ್ರಿಸಲು ಮುಂದಾಗಿದ್ದಾರೆ. ಆ ಮೂಲಕ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದಾರೆ.

ಇನ್ನು, ಮತ್ತೊಂದೆಡೆ ಬಳ್ಳಾರಿಗೆ ಹೋಗಲು ಜನಾರ್ದನ್‌ ರೆಡ್ಡಿ ಅವರ ಮೇಲೆ ಸುಪ್ರೀಂಕೋರ್ಟ್‌ ಹಲವು ನಿರ್ಬಂಧಗಳನ್ನು ಹೇರಿದೆ. ಆದರೆ, ವಿಜಯನಗರ ಜಿಲ್ಲೆಗೆ ಆ ನಿರ್ಬಂಧ ಅನ್ವಯಿಸುವುದಿಲ್ಲ. ಈ ಹಿಂದೆ ಅವರು ಸಚಿವರಿದ್ದಾಗ ಅವಿಭಜಿತ ಜಿಲ್ಲೆಯ ಮೇಲೆ ಭಾರಿ ಹಿಡಿತ ಹೊಂದಿದ್ದರು. ಎಲ್ಲೆಡೆ ಬೆಂಬಲಿಗರ ಪಡೆ ಇದೆ. ಅದನ್ನು ಬಳಸಿಕೊಂಡು ತನ್ನ ಹಳೆಯ ರಾಜಕೀಯ ವರ್ಚಸ್ಸನ್ನು ಮರುಸ್ಥಾಪಿಸಿಕೊಳ್ಳುವ ಲೆಕ್ಕಾಚಾರ ಇದೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT