ಮಂಗಳವಾರ, ಏಪ್ರಿಲ್ 7, 2020
19 °C
ಪಾಲಿಕೆ ಆಯುಕ್ತ ಸೂಚನೆ

ಅನಧಿಕೃತ ಜಾಹೀರಾತು, ಚೌಕಟ್ಟು ತೆರವಿಗೆ 15 ದಿನಗಳ ಗಡುವು

ಪ್ರಜವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಈಗಲೂ ಇರುವ ಅನಧಿಕೃತ ವಾಣಿಜ್ಯ ಜಾಹೀರಾತುಗಳನ್ನು ಮತ್ತು ಜಾಹೀರಾತು ಚೌಕಟ್ಟುಗಳನ್ನು 15 ದಿನಗಳ ಒಳಗೆ ತೆರವುಗೊಳಿಸುವಂತೆ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದಲ್ಲಿ ಹೊರಾಂಗಣ ಜಾಹೀರಾತುಗಳನ್ನು ನಿಷೇಧಿಸಿದ ಬಳಿಕ ಪಾಲಿಕೆ ಅಧಿಕಾರಿಗಳು ವಾಣಿಜ್ಯ ಜಾಹೀರಾತು ಫಲಕಗಳನ್ನು ತೆರವುಗೊಳಿಸಿದ್ದರು. ಆದರೆ, ಅವುಗಳನ್ನು ಅಳವಡಿಸಲು ಬಳಸಿದ್ದ ಕಬ್ಬಿಣದ ಚೌಕಟ್ಟುಗಳು ಹಾಗೆಯೇ ಉಳಿದಿದ್ದವು. ಇಂತಹ 1,806 ಚೌಕಟ್ಟುಗಳನ್ನು ಪಾಲಿಕೆ ಗುರುತಿಸಿತ್ತು. 

ಅನಧೀಕೃತ ಜಾಹೀರಾತು ಹಾಗೂ ಚೌಕಟ್ಟುಗಳನ್ನು ತೆರವುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಕೆಯಾಗಿತ್ತು. ಇವುಗಳನ್ನು ಶೀಘ್ರವೇ ತೆರವುಗೊಳಿಸವಂತೆ ಬಿಬಿಎಂಪಿಗೆ ಹೈಕೋರ್ಟ್‌ ಸೂಚನೆ ನೀಡಿತ್ತು.

‘ಪಾಲಿಕೆಯ ಎಲ್ಲ ಸಹಾಯಕ ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅನಧಿಕೃತ ವಾಣಿಜ್ಯ ಜಾಹೀರಾತುಗಳು ಹಾಗೂ ಚೌಕಟ್ಟುಗ‌ಳು ಹಾಗೆಯೇ ಉಳಿದಿರುವ ಬಗ್ಗೆ ವರದಿ ಸಿದ್ಧಪಡಿಸಬೇಕು. ಸ್ವತ್ತಿನ ಮಾಲೀಕರು ಜಾಹೀರಾತು ತೆರಿಗೆ ಮತ್ತು ಇತರ ಶುಲ್ಕಗಳನ್ನು ಪಾವತಿಸಿದ್ದಾರೆಯೇ ಎಂದು ಮಾಹಿತಿ ಕಲೆಹಾಕಬೇಕು. ಅವುಗಳ ತೆರವಿಗೆ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ಅಡ್ಡಿಯಾಗಿದೆಯೇ ಎಂದು ಪರಿಶೀಲಿಸಿ ಪಾಲಿಕೆಯ ಕಾನೂನು ಕೋಶದ ಸಲಹೆ ಪಡೆಯಬೇಕು. ಮಾಲೀಕರು ಜಾಹಿರಾತುಗಳನ್ನು ಅಥವಾ ಇಂಥಹ ಚೌಕಟ್ಟುಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸದಿದ್ದರೆ ಪಾಲಿಕೆ ವತಿಯಿಂದಲೇ ತೆರವುಗೊಳಿಸಬೇಕು’
ಎಂದು ಆಯುಕ್ತರು ಆದೇಶ ಮಾಡಿದ್ದಾರೆ.

ಜಾಹೀರಾತು ತೆರವಿಗೆ ವಿಶೇಷ ತಂಡ
ತೆರವು ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಲು ಆಯಾ ವಲಯದ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌, ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ಜಾಹೀರಾತು ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳನ್ನು ಒಳಗೊಂಡ  ತಂಡವನ್ನು ರಚಿಸಲಾಗಿದೆ.

ಅನಧಿಕೃತ ಜಾಹೀರಾತು ಹಾಗೂ ಚೌಕಟ್ಟುಗಳನ್ನು ತೆರವುಗೊಳಿಸದವರಿಗೆ, ಜಾಹೀರಾತು ಬೈಲಾ ಪ್ರಕಾರ ಗರಿಷ್ಠ ದಂಡ ವಿಧಿಸುವಂತೆ ಆಯುಕ್ತರು ಸೂಚನೆ ನೀಡಿದ್ದಾರೆ. ತೆರವು ಕಾರ್ಯಾಚರಣೆಯ ಛಾಯಾಚಿತ್ರ ಹಾಗೂ ವಿಡಿಯೊ ದಾಖಲೆ ಸಂಗ್ರಹಿಸುವಂತೆಯೂ ಸಲಹೆ ನೀಡಿದ್ದಾರೆ. ಈ ಕಾರ್ಯಾಚರಣೆಗೆ ಸಹಕರಿಸದ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆಯೂ ಆದೇಶಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು