ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ದಿನಗಳಲ್ಲಿ 196 ಮಕ್ಕಳಿಗೆ ಕೋವಿಡ್‌ ಸೋಂಕು

10 ವರ್ಷದೊಳಗಿನ ಮಕ್ಕಳಲ್ಲಿ ಸೋಂಕು ಪತ್ತೆ ದರ ಹೆಚ್ಚಳವಾಗಿಲ್ಲ: ಬಿಬಿಎಂಪಿ ಸ್ಪಷ್ಟನೆ
Last Updated 12 ಆಗಸ್ಟ್ 2021, 19:09 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಹತ್ತೇ ದಿನಗಳಲ್ಲಿ 10 ವರ್ಷದೊಳಗಿನ 196 ಮಕ್ಕಳಿಗೆ ಕೋವಿಡ್‌ ಸೋಂಕು ತಗುಲಿದೆ. ಈ ಹತ್ತು ದಿನಗಳಲ್ಲಿ ದೃಢಪಟ್ಟ ಒಟ್ಟು ಕೋವಿಡ್‌ ಪ್ರಕರಣಗಳಿಗೆ ಹೋಲಿಸಿದರೆ ಇದು ಹೆಚ್ಚೇನಲ್ಲ ಎನ್ನುತ್ತಾರೆ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು.

‘ಹತ್ತು ದಿನಗಳಲ್ಲಿ ನಗರದಲ್ಲಿ ಒಟ್ಟು 3,757 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 10 ವರ್ಷದೊಳಗಿನ 196 ಮಕ್ಕಳೂ ಇದ್ದಾರೆ. ಸೋಂಕು ದೃಢಪಟ್ಟ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ 10 ವರ್ಷದೊಳಗಿನ ಸೋಂಕಿತ ಮಕ್ಕಳ ಪ್ರಮಾಣ ಶೇ 5.22 ರಷ್ಟಿದೆ. ಕೋವಿಡ್‌ ಮೊದಲ ಅಲೆಯಲ್ಲಿ ಹಾಗೂ ಎರಡನೇ ಅಲೆಯ ಆರಂಭದಲ್ಲಿ ಮಕ್ಕಳಲ್ಲಿ ಸೋಂಕು ಪತ್ತೆ ಪ್ರಮಾಣ ಇಷ್ಟೇ ಇತ್ತು. ಇದು ಗಾಬರಿಪಡುವ ವಿಷಯ ಅಲ್ಲ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಕೆ.ವಿಜಯೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯಕ್ಕಂತೂ ಮಕ್ಕಳಲ್ಲಿ ಸೋಂಕು ಪತ್ತೆ ದರ ಹೆಚ್ಚಾಗಿಲ್ಲ. ಒಂದು ವೇಳೆ ಹೆಚ್ಚಾದರೂ ಅವರಿಗೆ ಚಿಕಿತ್ಸೆ ಒದಗಿಸಲು ಅಗತ್ಯ ಸೌಕರ್ಯವನ್ನು ಸಿದ್ಧವಾಗಿಟ್ಟುಕೊಂಟಿದ್ದೇವೆ’ ಎಂದರು.

ಮಕ್ಕಳ ಚಿಕಿತ್ಸೆಗಾಗಿ ಬಿಬಿಎಂಪಿಯು ಪದ್ಮನಾಭನಗರದಲ್ಲಿ ಪ್ರತ್ಯೇಕ ಆಸ್ಪತ್ರೆಯನ್ನು ಸಜ್ಜುಗೊಳಿಸಿದೆ. ಇದಲ್ಲದೇ ಇನ್ನೂ ನಾಲ್ಕು ಆಸ್ಪತ್ರೆಗಳಲ್ಲಿ ಮಕ್ಕಳ ಆರೈಕೆಗೆ ವಿಶೇಷ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆದಿದೆ.

‘ಸೋಂಕಿಗೆ ಒಳಗಾದ ಮಕ್ಕಳಲ್ಲಿ ಬಹುತೇಕರು ಕೋವಿಡ್‌ನ ಸೌಮ್ಯ ಲಕ್ಷಣಗಳನ್ನು ಮಾತ್ರ ಹೊಂದಿದ್ದರು. ಹೆಚ್ಚಿನ ಪ್ರಕರಣಗಳಲ್ಲಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸುವ ಪ್ರಮೇಯ ಎದುರಾಗಿಲ್ಲ’ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದರು.

ಹತ್ತು ದಿನಗಳಲ್ಲಿ 10ರಿಂದ 19 ವರ್ಷದೊಳಗಿನ 301 ಮಂದಿ ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ.

‘ಪೋಷಕರು ಎಚ್ಚರ ವಹಿಸಿದರೆ ಮಕ್ಕಳು ಸುರಕ್ಷಿತ’

‘ದೊಡ್ಡವರ ಮೂಲಕವೇ ಮಕ್ಕಳಿಗೆ ಕೊರೊನಾ ಸೋಂಕು ಹರಡುತ್ತದೆ. ಪೋಷಕರು ಮನೆಯಿಂದ ಹೊರಗಡೆ ಹೋಗುವಾಗ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಅನುಸರಿಸಿದರೆ ಮಕ್ಕಳಿಗೂ ಕೋವಿಡ್‌ನಿಂದ ರಕ್ಷಣೆ ಸಿಗುತ್ತದೆ. ಈ ವಿಚಾರದಲ್ಲಿ ಪೋಷಕರ ಜವಾಬ್ದಾರಿ ಹೆಚ್ಚು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅಭಿಪ್ರಾಯ‍ಪಟ್ಟರು.

‘ಮಕ್ಕಳಿಗಾಗಲೀ, ಬೇರೆಯವರಿಗಾಗಲೀ ವ್ಯಕ್ತಿಗಳಿಂದಲೇ ಸೋಂಕು ಹರಡುತ್ತದೆ.
ಹೆಚ್ಚು ಜನ ಲಸಿಕೆ ಪಡೆದಷ್ಟೂ ಮಕ್ಕಳಿಗೆ ಸೋಂಕು ಹರಡುವ ಅಪಾಯ ಕಡಿಮೆ’ ಎಂದರು.

‘ನಗರದಲ್ಲಿ ಎಲ್ಲ ಸಮುದಾಯಗಳಲ್ಲಿ ಕೋವಿಡ್‌ ಪ್ರಮಾಣ ಕಡಿಮೆಗೊಳಿಸುವುದು ನಮ್ಮ ಉದ್ದೇಶ. ಅದಕ್ಕೆ ಶ್ರಮ ಹಾಕುತ್ತಿದ್ದೇವೆ. ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾದ ಕಡೆ ಕಂಟೈನ್‌ಮೆಂಟ್ ಪ್ರದೇಶಗಳನ್ನು ಗುರುತಿಸುತ್ತಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT