ಸೋಮವಾರ, ಜನವರಿ 17, 2022
19 °C
ಮಾರಾಟ ಮಳಿಗೆಗೆ ನುಗ್ಗಿ ಕೃತ್ಯ ಎಸಗಿದ್ದ ಆರೋಪಿ

₹ 2 ಕೋಟಿ ಮೌಲ್ಯದ ಗಡಿಯಾರ ಕದ್ದವನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಂದಿರಾನಗರದ 100 ಅಡಿ ರಸ್ತೆಯಲ್ಲಿರುವ ಕೈ ಗಡಿಯಾರ ಮಾರಾಟ ಮಳಿಗೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿ ಅಖ್ತರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಬಿಹಾರದ ಅಖ್ತರ್, ಅಪರಾಧ ಹಿನ್ನೆಲೆಯುಳ್ಳವ. ಬಿಹಾರದ ಸ್ನೇಹಿತರ ಗುಂಪು ಕಟ್ಟಿಕೊಂಡು ಮಳಿಗೆಯಲ್ಲಿ ಕಳ್ಳತನ ಮಾಡಿದ್ದ. ಆತನಿಂದ ₹ 2 ಕೋಟಿ ಮೌಲ್ಯದ ಕೈ ಗಡಿಯಾರಗಳನ್ನು ಜಪ್ತಿ ಮಾಡಲಾಗಿದೆ. ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಂಗಮ್ಮನಪಾಳ್ಯದಲ್ಲಿ ನೆಲೆಸಿದ್ದ ಆರೋಪಿಗಳು, ಕೈ ಗಡಿಯಾರ ಮಾರಾಟ ಮಳಿಗೆ ಎದುರು ಹಲವು ಬಾರಿ ಸುತ್ತಾಡಿದ್ದರು. ಮಳಿಗೆ ತೆರೆಯುವ ಹಾಗೂ ಬಂದ್ ಮಾಡುವ ಸಮಯವನ್ನು ತಿಳಿದುಕೊಂಡಿದ್ದರು. ಗ್ರಾಹಕರ ಸೋಗಿನಲ್ಲಿ ಮಳಿಗೆಗೆ ಹೋಗಿ ಬಂದು, ಕಳ್ಳತನ ಹೇಗೆ ಮಾಡಬೇಕೆಂದು ಸಂಚು ರೂಪಿಸಿದ್ದರು.’

‘ಜ. 4ರಂದು ರಾತ್ರಿ ಮಳಿಗೆಯ ಬೀಗ ಮುರಿದು ಒಳನುಗ್ಗಿದ್ದ ಆರೋಪಿಗಳು, ₹ 2 ಕೋಟಿ ರೂ. ಮೌಲ್ಯದ ದುಬಾರಿ ಕೈ ಗಡಿಯಾರಗಳನ್ನು ಕದ್ದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಮಳಿಗೆ ಮಾಲೀಕರು ದೂರು ನೀಡಿದ್ದರು. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಇತರೆ ಪುರಾವೆ ಆಧರಿಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಹತ್ತು ವರ್ಷದ ಹಿಂದೆಯೂ ಕೃತ್ಯ: ‘ಬಂಧಿತ ಅಖ್ತರ್ ಹಾಗೂ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳು, 2012ರಲ್ಲೂ ನಗರಕ್ಕೆ ಬಂದಿದ್ದರು. ಮೊಬೈಲ್ ಹಾಗೂ ಕ್ಯಾಮೆರಾ ಮಾರಾಟ ಮಳಿಗೆಯಲ್ಲಿ ಕಳ್ಳತನ ಎಸಗಿ ಪರಾರಿಯಾಗಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿಗಳ ಕೃತ್ಯದ ಬಗ್ಗೆ 2012ರಲ್ಲಿ ಕೋರಮಂಗಲ, ಅಶೋಕನಗರ ಹಾಗೂ ಕಬ್ಬನ್ ಪಾರ್ಕ್‌ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಆದರೆ, ಆರೋಪಿಗಳು 10 ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಅವರ ಬಗ್ಗೆ ಯಾವುದೇ ಸುಳಿವು ಇರಲಿಲ್ಲ.’

‘ಜ. 4ರಂದು ಕೈ ಗಡಿಯಾರಗಳನ್ನು ಕಳ್ಳತನ ಮಾಡಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಹಳೇ ಪ್ರಕರಣಗಳ ಬಗ್ಗೆಯೂ ಆಯಾ ಠಾಣೆಗಳಿಂದ ಮಾಹಿತಿ ಪಡೆಯಲಾಗಿದೆ. ಉಳಿದ ಆರೋಪಿಗಳ ಪತ್ತೆಗೂ ವಿಶೇಷ ತಂಡ ರಚಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ನೇಪಾಳದಲ್ಲಿ ಮಾರಾಟ: ‘ನಗರದಲ್ಲಿ ಕದ್ದುಕೊಂಡು ಹೋಗಿದ್ದ ಮೊಬೈಲ್, ಕ್ಯಾಮೆರಾ ಹಾಗೂ ಕೈ ಗಡಿಯಾರಗಳನ್ನು ಆರೋಪಿಗಳು ನೇಪಾಳದಲ್ಲಿ ಮಾರುತ್ತಿದ್ದರು. ಬಂದ ಹಣವನ್ನು ಹಂಚಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.