ಸೋಮವಾರ, ಮೇ 10, 2021
19 °C
ವಸತಿ ಸಮುಚ್ಛಯ ಕೆಡವಲು ಮುಂದಾದ ಬಿಬಿಎಂಪಿ

ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣ: ಆತಂಕದ ನೆರಳಿನಲ್ಲಿ 25 ಕುಟುಂಬಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೊಮ್ಮನಹಳ್ಳಿ: ಪುಟ್ಟೇನಹಳ್ಳಿ ವಾರ್ಡ್‌ನ ಚಂಗಮ್ ರಾಜು ಬಡಾವಣೆಯಲ್ಲಿ ನಕ್ಷೆ ಉಲ್ಲಂಘಿಸಿ ನಿರ್ಮಿಸಲಾಗಿದೆ ಎನ್ನಲಾದ ‘ನಿಶಿತಾ ಪ್ಲಾಟಿನಂ’ ಅಪಾರ್ಟ್‌ಮೆಂಟ್‌ ಸಮುಚ್ಚಯವನ್ನು ಕೆಡವಲು ಬಿಬಿಎಂಪಿ ಮುಂದಾಗಿದೆ. ಜೆಸಿಬಿಯನ್ನು ತರಿಸಿ ಕಟ್ಟಡದ ಆವರಣ ಗೋಡೆಯನ್ನು ಶುಕ್ರವಾರ ಕೆಡವಲು ಆರಂಭಿಸುತ್ತಿದ್ದಂತೆಯೇ ನಿವಾಸಿಗಳು ಪ್ರತಿರೋಧ ಒಡ್ಡಿದರು.

ರಸ್ತೆ ತಡೆ ನಡೆಸಿದ ನಿವಾಸಿಗಳು, ‘ಇದ್ದ ಒಂದು ಮನೆ ಕೆಡವಿದರೆ ನಾವು ಎಲ್ಲಿಗೆ ಹೋಗುವುದು’ ಎಂದು ಪ್ರಶ್ನಿಸಿದರು. ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿದರು. ಈ ಪ್ರತಿರೋಧದಿಂದ ವಿಚಲಿತರಾದ ಅಧಿಕಾರಿಗಳು ಕಟ್ಟಡ ಕೆಡಹುವ ಕಾರ್ಯಾಚರಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿದರು.

ಆತಂಕದಲ್ಲಿ 25 ಕುಟುಂಬಗಳು: ನಿವೇಶನದ ಮಾಲೀಕರಾದ ಪಸುಮತಿ ಹಾಗೂ ಬಿಲ್ಡರ್ ಎಸ್.ರವಿಚಂದ್ರನ್ ಪಾಲುದಾರಿಕೆಯಲ್ಲಿ 2016ರಲ್ಲಿ ಅಪಾರ್ಟ್‌ಮೆಂಟ್‌ ಸಮುಚ್ಚಯವನ್ನು ನಿರ್ಮಿಸಿದ್ದರು. ಈ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ 25 ಕುಟುಂಬಗಳು ನೆಲೆಸಿವೆ. ಈ ಕುಟುಂಬಗಳೆಲ್ಲ ನೆಲೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿವೆ. ಅವರೆಲ್ಲ ಕಡಿಮೆ ಬೆಲೆಗೆ ಸಿಗುತ್ತಿದೆ ಎಂಬ ಆಸೆಗೆ ಬಿದ್ದು, ಜೀವಿತಾವಧಿಯ ಉಳಿತಾವನ್ನೆಲ್ಲ ಕ್ರೋಡೀಕರಿಸಿ ಇಲ್ಲಿ ಫ್ಲ್ಯಾಟ್‌ ಖರೀದಿಸಿದ್ದರು.

‘ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಕೆಲ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು 2016ರಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆದು, ಕಟ್ಟಡ ನೆಲಸಮಗೊಳಿಸುವಂತೆ ನ್ಯಾಯಾಲಯ ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಟ್ಟಡ ಕೆಡವಲು ಮುಂದಾಗಿದ್ದೇವೆ’ ಎಂದು ಬೊಮ್ಮನಹಳ್ಳಿಯ ವಲಯದ ಜಂಟಿ ಆಯುಕ್ತ ಎಂ.ರಾಮಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಇತ್ತೀಚೆಗೆ ಪಾಲಿಕೆ ಅಧಿಕಾರಿಗಳು ಕಟ್ಟಡವನ್ನು ಕೆಡಹುವ ಬಗ್ಗೆ ನೋಟಿಸ್‌ ಅಂಟಿಸಿದ್ದರು. 

’ವಾರದ ಹಿಂದೆ ನಮಗೆ ಗೊತ್ತಿಲ್ಲದಂತೆ ನೋಟೀಸ್ ಅಂಟಿಸಿ ಹೋಗಿದ್ದರು. ಖಾತೆ ನಂ. 46 ರಲ್ಲಿ ಎರಡು ಪ್ರತ್ಯೇಕ ಸ್ವತ್ತುಗಳು ಇದ್ದು, ಎರಡಕ್ಕೂ ಕಟ್ಟಡ ನಿರ್ಮಾಣಕ್ಕೆ ಪ್ರತ್ಯೇಕವಾಗಿ ನಕ್ಷೆ ಮಂಜೂರು ಮಾಡಲಾಗಿತ್ತು. ಆದರೆ ಎರಡನ್ನೂ ಒಂದುಗೂಡಿಸಿ ಒಂದೇ ಕಟ್ಟಡ ನಿರ್ಮಿಸಿ ನಕ್ಷೆ ಉಲ್ಲಂಘಿಸಲಾಗಿದೆ ಎಂದು ಬರೆಯಲಾಗಿತ್ತು. ಇದೀಗ ಏಕಾಏಕಿ ಕೆಡವಲು ಮುಂದಾಗಿದ್ದಾರೆ. ಇದು ಸರಿಯಲ್ಲ’ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು. ‘ನಗರದಲ್ಲಿರುವ ಎಲ್ಲಾ ಕಟ್ಟಡಗಳನ್ನೂ ನಕ್ಷೆ ಉಲ್ಲಂಘಿಸಿ ನಿರ್ಮಿಸಲಾಗಿದೆ. ನಮ್ಮ ಕಟ್ಟಡವನ್ನು ಮಾತ್ರ ಕೆಡಹುತ್ತಿರುವುದೇಕೆ’ ಎಂದು ಪ್ರಶ್ನಿಸಿದರು.

ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್ ಶೇಷಾದ್ರಿ, ‘ನಕ್ಷೆ ಉಲ್ಲಂಘನೆ ಆಗಿರುವ ಬಗ್ಗೆ ಎರಡನೇ ಬಾರಿ ನೋಟೀಸ್ ನೀಡಲಾಗಿತ್ತು. ನ್ಯಾಯಾಲಯದ ಆದೇಶದಂತೆ ಕಟ್ಟಡ ಕೆಡವಲು ಮುಂದಾಗಿದ್ದೇವೆ. ಜನರಿಗೆ ತೊಂದರೆ ಕೊಡಲು ನಮಗೂ ಇಷ್ಟವಿಲ್ಲ. ಆದರೆ ಕೋರ್ಟ್ ಆದೇಶವನ್ನು ಜಾರಿ ಮಾಡಲೇಬೇಕಲ್ಲವೇ’ ಎಂದರು.

ಬಿಲ್ಡರ್ ನಾಪತ್ತೆ: ‘ಬಿಲ್ಡರ್ ರವಿಚಂದ್ರನ್ ತನ್ನ ಪಾಲಿನ 13 ಫ್ಲ್ಯಾಟ್ ಗಳನ್ನು ಮಾರಾಟ ಮಾಡಿ, ಕಟ್ಟಡವನ್ನು ಪೂರ್ಣಗೊಳಿಸದೇ ಪರಾರಿಯಾಗಿದ್ದಾರೆ.  ಅಪೂರ್ಣಗೊಂಡ ಕಟ್ಟಡದ ಕಾಮಗಾರಿಯನ್ನು ನಾವು ನಮ್ಮ ಹಣದಲ್ಲೇ ಪೂರ್ಣಗೊಳಿಸಿದ್ದೆವು. ಈಗ ನೋಡಿದರೆ ನೆಲೆಯನ್ನೇ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ’ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

‘ಬಿಲ್ಡರ್ ರವಿಚಂದ್ರನ್, 302 ಸಂಖ್ಯೆಯ ಫ್ಲ್ಯಾಟ್ ನೀಡುವುದಾಗಿ ಕರಾರು ಪತ್ರ ಮಾಡಿಕೊಟ್ಟು ₹ 15 ಲಕ್ಷ ರೂಪಾಯಿ ಪಡೆದು, ಅದೇ ಫ್ಲ್ಯಾಟ್ ಅನ್ನು ಇಬ್ಬರಿಗೆ ನೋಂದಣಿ ಮಾಡಿಕೊಟ್ಟಿದ್ದಾರೆ. ಈಗ ಆತ ಸಿಗುತ್ತಿಲ್ಲ. ಆತ ಎಲ್ಲಿದ್ದಾನೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ, ಹಣ ಕಳೆದುಕೊಂಡು ಇತ್ತ ಮನೆಯೂ ಇಲ್ಲದೇ ಸಾಲಗಾರನಾಗಿದ್ದೇನೆ’ ಎಂದು ನಿವಾಸಿ ಶಿವಲಿಂಗಯ್ಯ ತಮ್ಮ ಅಳಲು ತೋಡಿಕೊಂಡರು.

‘ಒಂದೇ ಬಾರಿ ನಗದು ರೂಪದಲ್ಲಿ ಹಣ ನೀಡಿದ್ದಲ್ಲಿ, ಕಡಿಮೆ ಬೆಲೆಯಲ್ಲಿ ಫ್ಲ್ಯಾಟ್ ನೀಡುವುದಾಗಿ ಆಸೆ ತೋರಿಸಿದ ಬಿಲ್ಡರ್ ರವಿಚಂದ್ರನ್ ಹಣ ಪಡೆದು ಎಲ್ಲರಿಗೂ ವಂಚಿಸಿದ್ದಾನೆ’ ಎಂದು ನಿವಾಸಿಗಳು ದೂರಿದರು.

‘ಸೋಮವಾರದವರೆಗೆ ಯಥಾಸ್ಥಿತಿ’: ‘ಕಟ್ಟಡ ಕೆಡಹುವುದನ್ನು ಪ್ರಶ್ನಿಸಿ ನಿವಾಸಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸೋಮವಾರದವರೆಗೆ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ಹೇಳಿದೆ. ನ್ಯಾಯಾಲಯವು  ನೀಡುವ ಸೂಚನೆ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಜಂಟಿ ಆಯುಕ್ತರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು