ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಜಾಹೀರಾತು ಹಾವಳಿ: 264 ಎಫ್‌ಐಆರ್‌

ಹೈಕೋರ್ಟ್‌ಗೆ ಬಿಬಿಎಂಪಿ ಪ್ರಮಾಣ ಪತ್ರ
Published 30 ಆಗಸ್ಟ್ 2023, 16:02 IST
Last Updated 30 ಆಗಸ್ಟ್ 2023, 16:02 IST
ಅಕ್ಷರ ಗಾತ್ರ

ಬೆಂಗಳೂರು: ‘ಅಕ್ರಮ ಜಾಹೀರಾತು ಅಳವಡಿಸಿದ್ದ ವ್ಯಕ್ತಿಗಳ ವಿರುದ್ಧ ಒಟ್ಟು 264 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ’ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ತಿಳಿಸಿದೆ.

‘ಹೋರ್ಡಿಂಗ್ಸ್‌, ಫ್ಲೆಕ್ಸ್‌, ಬ್ಯಾನರ್‌ ಸೇರಿದಂತೆ ಅಕ್ರಮ ಜಾಹೀರಾತುಗಳ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಯೊಂದು ಅಕ್ರಮ ಜಾಹೀರಾತು ಅಳವಡಿಕೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ರಾಜ್ಯ ಸರ್ಕಾರಕ್ಕೆ ತಲಾ ₹ 50 ಸಾವಿರ ದಂಡ ವಿಧಿಸಲು ಹೈಕೋರ್ಟ್‌ ನೀಡಿರುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ’ ಎಂದು ಹೇಳಿದೆ.

ಈ ಸಂಬಂಧ ಮಾಯಿಗೇಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. 

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ಎನ್‌.ಕೆ.ರಮೇಶ್‌ ಅವರು ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿ, ಕೈಗೊಂಡಿರುವ ಕ್ರಮ ಮತ್ತು ಯೋಜನೆಗಳನ್ನು ವಿವರಿಸಿದರು.

ಪ್ರಮಾಣ ಪತ್ರದಲ್ಲೇನಿದೆ?: 'ಅಕ್ರಮ ಜಾಹೀರಾತುಗಳ ಅಳವಡಿಕೆ ಮಹಾನಗರದಲ್ಲಿ ಒಂದು ಉಪಟಳವಾಗಿ ಪರಿಣಮಿಸಿದೆ. ಇದನ್ನು ತಡೆಯಲು ಬಿಬಿಎಂಪಿ ಅಧಿಕಾರಿಗಳು ಹೊಸ ವಿಧಾನಗಳಡಿ ಮತ್ತು ಕಟ್ಟುನಿಟ್ಟಾದ ಕ್ರಿಯಾ ಯೋಜನೆಯನ್ನು ರೂಪಿಸಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ಅನಧಿಕೃತ ಫ್ಲೆಕ್ಸ್‌ಗಳು, ಬ್ಯಾನರ್‌ಗಳನ್ನು ಅಕ್ರಮವಾಗಿ ಅಳವಡಿಸುವುದನ್ನು ಸಂಪೂರ್ಣವಾಗಿ ತಡೆಯಲು ಶ್ರಮಿಸುತ್ತಿದ್ದಾರೆ‘ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.

ಅಂಕಿ ಅಂಶ: 2023ರ ಆಗಸ್ಟ್‌ 2ರಿಂದ ಒಟ್ಟು 923 ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳು ಮತ್ತು ಇತರ ಅಕ್ರಮ ಜಾಹೀರಾತುಗಳನ್ನು ಗುರುತಿಸಲಾಗಿದೆ. 923 ಅನಧಿಕೃತ ಜಾಹೀರಾತುಗಳನ್ನು ತೆಗೆದುಹಾಕಲಾಗಿದೆ. 369 ದೂರು ಹಾಗೂ 264 ಎಫ್‌ಐಆರ್‌ ದಾಖಲಾಗಿವೆ.

ಕ್ರಮಕ್ಕೆ ಚಾಲನೆ: ‘ಬಿಬಿಎಂಪಿಯ ಎಂಟೂ ವಲಯಗಳ ವಿಶೇಷ ಆಯುಕ್ತರು ಮತ್ತು ವಲಯ ಆಯುಕ್ತರೊಂದಿಗೆ ಇದೇ 21 ರಂದು ವಿಡಿಯೊ ಕಾನ್ಫರೆನ್ಸ್ ನಡೆಸಲಾಗಿದೆ. ನಿರ್ದಿಷ್ಟ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಲು ವಾರ್ಡ್‌ವಾರು ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಎಫ್‌ಐಆರ್‌, ದಂಡ ವಿಧಿಸುವುದು ಮತ್ತು ಅನಧಿಕೃತ ಜಾಹೀರಾತುಗಳನ್ನು ತೆಗೆದುಹಾಕುವಂತೆ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಲಾಗಿದೆ. ತಪ್ಪಿತಸ್ಥ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಚಾಲನೆ ನೀಡಲಾಗಿದೆ‘ ಎಂದು ವಿವರಿಸಲಾಗಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್, ‘ಅಕ್ರಮ ಜಾಹೀರಾತುಗಳು ಇನ್ನೂ ಅಸ್ತಿತ್ವದಲ್ಲಿವೆ ಎಂಬ ಬಗ್ಗೆ ಫೋಟೊ ಸಹಿತವಾದ ಮೆಮೊ ಅನ್ನು ಸಲ್ಲಿಸುವ ಮೂಲಕ ಬಿಬಿಎಂಪಿ ನ್ಯಾಯಾಲಯದ ಆದೇಶವನ್ನು ಪಾಲಿಸಿಲ್ಲ‘ ಎಂದು ದೂರಿದರು. ಈ ಮೆಮೊಗೆ ಆಕ್ಷೇಪಣೆ ಸಲ್ಲಿಸುವಂತೆ ಬಿಬಿಎಂಪಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT