ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ಅಕ್ರಮ: 69 ಹೆಸರಿನಲ್ಲಿ 2,876 ಖಾತೆ!

ರಿಸರ್ವ್‌ ಬ್ಯಾಂಕ್‌ಗೆ ವರದಿ
Last Updated 7 ಜುಲೈ 2020, 2:19 IST
ಅಕ್ಷರ ಗಾತ್ರ

ಬೆಂಗಳೂರು: ಸಾವಿರಾರು ಠೇವಣಿದಾರರಿಗೆ ನೂರಾರು ಕೋಟಿ ರೂಪಾಯಿ ವಂಚಿಸಿರುವ ಆರೋಪಕ್ಕೊಳಗಾದ ಬಸವನಗುಡಿಯ ಶ್ರೀ ಗುರುರಾಘವೇಂದ್ರ ಬ್ಯಾಂಕಿನಲ್ಲಿ 69 ಸಾಲಗಾರರು 2,876 ಖಾತೆ ಹೊಂದಿದ್ದು, ₹ 1,323 ಕೋಟಿ ಪುನರಾವರ್ತಿತ ಸಾಲ ಪಡೆದಿದ್ದಾರೆ.

ವಜಾಗೊಂಡ ಬ್ಯಾಂಕಿನ ಅಧ್ಯಕ್ಷ ರಾಮಕೃಷ್ಣ, ಮುಖ್ಯ ಸಲಹೆಗಾರ ವಾಸುದೇವ ಮಯ್ಯ ಹಾಗೂ ಮುಖ್ಯ ಕಾರ್ಯನಿರ್ವಾಹಕ ಸಂತೋಷ್‌ ಕುಮಾರ್‌ ಜನವರಿ ಮೊದಲ ವಾರ ರಿಸರ್ವ್‌ ಬ್ಯಾಂಕಿನ‌ ಅಧಿಕಾರಿಗಳಿಗೆ ಸಲ್ಲಿಸಿರುವ ವರದಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ.

ಬ್ಯಾಂಕಿನಲ್ಲಿ ಒಟ್ಟು 5,336 ಖಾತೆಗಳಿವೆ. ಇದರಲ್ಲಿ 2,460 ಸಾಮಾನ್ಯ ಖಾತೆಗಳು ಮತ್ತು 2,876 ಪುನರಾವರ್ತಿತ ಸಾಲದ (ಎವರ್‌ಗ್ರೀನ್‌ ಲೋನ್‌) ಖಾತೆಗಳು. ಸಾಮಾನ್ಯ ಖಾತೆಗಳಿಗೆ ₹ 262 ಕೋಟಿ ಸಾಲ ವಿತರಿಸಲಾಗಿದೆ. 2,876 ಖಾತೆಗಳ ಮೂಲಕ ಪುನರಾವರ್ತಿತ ಸಾಲ ಪಡೆದ 69 ಹೆಸರುಗಳನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಬ್ಯಾಂಕ್‌ನಿಂದ ಸಾಲ ಪಡೆದವರ ಮಾಹಿತಿ ಒದಗಿಸಲು ಶ್ರೀ ಗುರುರಾಘವೇಂದ್ರ ಬ್ಯಾಂಕ್‌ ಅಧಿಕಾರಿಗಳಿಗೆ ರಿಸರ್ವ್‌ ಬ್ಯಾಂಕ್‌ ಕೇಳಿತ್ತು.ಬ್ಯಾಂಕ್‌ ಅವ್ಯವಹಾರದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೂ ಈ ವರದಿ ಸಿಕ್ಕಿದ್ದು ಪರಿಶೀಲಿಸುತ್ತಿದ್ದಾರೆ.

‘ಸಾಲಗಾರರ ಹೆಸರಿನಲ್ಲಿರುವ ಖಾತೆಗಳ ಸಂಖ್ಯೆ ಗಾಬರಿ ಹುಟ್ಟಿಸುತ್ತದೆ. ಒಬ್ಬೊಬ್ಬರದು 10, 20, 50, 80, 100, 200 ಖಾತೆಗಳಿವೆ. ಖಾತೆ ತೆರೆದಿರುವುದನ್ನು ನೋಡಿದರೆ ಮಕ್ಕಳ ಆಟದಂತೆ ಕಾಣುತ್ತದೆ. ಬ್ಯಾಂಕಿನ ಹಿಂದಿನ ಅಧ್ಯಕ್ಷರಿಗೆ ಸಂಬಂಧಿಸಿದ 80 ಖಾತೆಗಳು ಇದ್ದರೆ, ಹಿಂದಿನಉಪಾಧ್ಯಕ್ಷರಿಗೆ ಸಂಬಂಧಿಸಿದ 24 ಖಾತೆ ಇವೆ. ಮುಖ್ಯ ಸಲಹೆಗಾರರಿಗೆ ಸಂಬಂಧಿಸಿದ 7 ಖಾತೆಗಳಿವೆ. ಈ ಮೂವರಿಗೆ ಸಂಬಂಧಿಸಿದ ಸಾಲ ಕ್ರಮವಾಗಿ ₹ 78 ಕೋಟಿ, ₹ 24 ಕೋಟಿ ಹಾಗೂ ₹ 8 ಕೋಟಿ ಇದೆ’ ಎಂದು ಮೂಲಗಳು ತಿಳಿಸಿವೆ.

‘ಅವ್ಯವಹಾರದಲ್ಲಿ ಅನೇಕ ಸಿಬ್ಬಂದಿ ಭಾಗಿಯಾಗಿದ್ದಾರೆ. ಯಾವ್ಯಾವ ಖಾತೆಗಳಿಂದ ಯಾವ್ಯಾವ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ ಎಂಬುದನ್ನು ಪತ್ತೆ ಹಚ್ಚುವ ಕೆಲಸವನ್ನು ಅವರಿಗೇ ವಹಿಸಲಾಗಿದೆ. ಪ್ರತಿ ದಿನ ಕನಿಷ್ಠ ನೂರು ಖಾತೆ ಪರಿಶೀಲಿಸಲು ಸೂಚಿಸಲಾಗಿದೆ. ಕೆಲ ಸಿಬ್ಬಂದಿ ಪ್ರಕರಣದಲ್ಲಿ ಅಪ್ರೂವರ್‌ ಆಗುವ ಸಾಧ್ಯತೆಯಿದೆ’ ಎಂದು ಮೂಲಗಳು ವಿವರಿಸಿವೆ.

ಆನಂತರ ಆಂತರಿಕ ಲೆಕ್ಕ ಪರಿಶೋಧನೆ ಹಾಗೂ ಫೊರೆನ್ಸಿಕ್‌ ಆಡಿಟಿಂಗ್‌ ಮೂಲಕ ಎಷ್ಟು ಅಕ್ರಮ ಆಗಿದೆ ಎಂದು ಪತ್ತೆ ಹಚ್ಚುವ ಸಾಧ್ಯತೆಯಿದೆ.

ಒಟ್ಟು ಖಾತೆ– 5,336

ಸಾಮಾನ್ಯ ಖಾತೆ– 2,460

ಎವರ್‌ಗ್ರೀನ್‌ ಖಾತೆ– 2,876

ಒಟ್ಟು ಸಾಲ– ₹ 1,585 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT