ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜಯ ಗಾಂಧಿ ಆಸ್ಪತ್ರೆ: ಮೂಳೆ ಮುರಿತಕ್ಕೆ ‘3ಡಿ ಮುದ್ರಣ’ ಶಸ್ತ್ರಚಿಕಿತ್ಸೆ ಆರಂಭ

ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಪ್ರಾರಂಭಿಸಿದ ದೇಶದ ಮೊದಲ ಆಸ್ಪತ್ರೆ
Last Updated 15 ಜನವರಿ 2022, 20:13 IST
ಅಕ್ಷರ ಗಾತ್ರ

ಬೆಂಗಳೂರು: ಮೂಳೆ ಮುರಿತದಿಂದ ಸಂಕೀರ್ಣ ಸಮಸ್ಯೆಗೆ ಒಳಗಾಗುವವರಿಗೆಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯು ‘3ಡಿ ಮುದ್ರಣ ತಂತ್ರಜ್ಞಾನ’ ಆಧಾರಿತ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯನ್ನು ಪ್ರಾರಂಭಿಸಿದೆ. ಮೂಳೆ ಶಸ್ತ್ರಚಿಕಿತ್ಸೆಗೆ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡ ದೇಶದ ಮೊದಲ ಸರ್ಕಾರಿ ಸಂಸ್ಥೆ ಇದಾಗಿದೆ.

ಕೃತಕ ಮಂಡಿ ಜೋಡಣೆ, ಭುಜದ ಕೀಲು ಅಳವಡಿಕೆ ಸೇರಿದಂತೆ ಮೂಳೆ ಶಸ್ತ್ರಚಿಕಿತ್ಸೆಗೆ ಸಂಜಯ ಗಾಂಧಿ ಆಸ್ಪತ್ರೆ ಹೆಸರುವಾಸಿಯಾಗಿದೆ. ಇಲ್ಲಿ ರೋಬೊಟಿಕ್ ಸೇರಿದಂತೆ ವಿವಿಧ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಈಗ ಈ ಸಾಲಿಗೆ ‘3ಡಿ ಮುದ್ರಣ ತಂತ್ರಜ್ಞಾನ’ವೂ ಸೇರಿದೆ.ಗಂಭೀರ ಹಾನಿಗೊಳಗಾಗಿ, ವಿರೂಪಗೊಳ್ಳುವ ಮೂಳೆಯ ಭಾಗಗಳನ್ನು ಮೊದಲಿನ ಸ್ವರೂಪಕ್ಕೆ ತರಲು ಈ ತಂತ್ರಜ್ಞಾನ ಸಹಕಾರಿ. ಸಂಸ್ಥೆಯಲ್ಲಿ ಈ ತಂತ್ರಜ್ಞಾನದ ನೆರವಿನಿಂದ ಐವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ‘ಮೆಟೀರಿಯಲ್ಸ್’ ವಿಭಾಗದ ಸಹಯೋಗದಲ್ಲಿ ಆಸ್ಪತ್ರೆಯು ಈ ತಂತ್ರಜ್ಞಾನ ಆಧರಿತ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಿದೆ.3ಡಿ ಮುದ್ರಣ ತಂತ್ರಜ್ಞಾನ ತಂತ್ರಾಂಶದ ನೆರವಿನಿಂದ ಕೃತಕ ಮೂಳೆಯ ಮಾದರಿಗಳುಹಾಗೂ ಮಿಶ್ರ ಲೋಹದ ಪ್ಲೇಟ್‌ಗಳನ್ನು ಐಐಎಸ್ಸಿ ಸಂಶೋಧಕರು ವಿನ್ಯಾಸ ಮಾಡಿಕೊಡುತ್ತಿದ್ದಾರೆ. ಸಂಸ್ಥೆಯಲ್ಲಿ ಸದ್ಯ ಕೈಗಳ ಮೂಳೆ ಮುರಿತಕ್ಕೆ ಈ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ.

ನಿಖರ ಶಸ್ತ್ರಚಿಕಿತ್ಸೆ ಸಾಕಾರ:‘ಯುರೋಪ್ ದೇಶಗಳಲ್ಲಿ ಕ್ಯಾನ್ಸರ್ ಸೇರಿದಂತೆ ವಿವಿಧ ಶಸ್ತ್ರಚಿಕಿತ್ಸೆಗಳನ್ನು ಈ ತಂತ್ರಜ್ಞಾನದ ನೆರವಿನಿಂದ ನಿಖರವಾಗಿ ನಡೆಸಲಾಗುತ್ತಿದೆ. ಇದರಿಂದ ಮೂಳೆಮುರಿತದಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನೂ ನಡೆಸಲು ಸಾಧ್ಯವಿದೆ. ನಮ್ಮ ದೇಶದಲ್ಲಿ ಈ ತಂತ್ರಜ್ಞಾನವು ಶಸ್ತ್ರಚಿಕಿತ್ಸೆ ಕ್ಷೇತ್ರದಲ್ಲಿ ಅಷ್ಟಾಗಿ ಬಳಕೆಯಲ್ಲಿಲ್ಲ’ ಎಂದು ಸಂಸ್ಥೆಯ ಶಸ್ತ್ರಚಿಕಿತ್ಸಕಡಾ.ಸತ್ಯವಂಶಿ ಕೃಷ್ಣ ತಿಳಿಸಿದರು.

‘ಮೂಳೆ ಮುರಿದಾಗ ಅದರ ಸ್ವರೂಪ ಬದಲಾಗಿರುತ್ತದೆ. ಮುರಿದ ಜಾಗವನ್ನು ಜೋಡಿಸಲು ಮಿಶ್ರಲೋಹದ ಪ್ಲೇಟ್‌ ಅಳವಡಿಸಬೇಕಾಗುತ್ತದೆ.ಸದ್ಯ ಬಳಕೆಯಲ್ಲಿರುವ ಪ್ಲೇಟ್‌ಗಳು ಒಂದೇ ರೂಪದಲ್ಲಿ ವಿನ್ಯಾಸಗೊಂಡಿರುತ್ತವೆ. ಹಾನಿಗೊಳಗಾದ ಮೂಳೆಯ ಸ್ವರೂಪದಲ್ಲಿ ವ್ಯತ್ಯಾಸವಿರುವುದರಿಂದ ಮಿಶ್ರಲೋಹದ ಪ್ಲೇಟ್‌ಗಳು ಎಲ್ಲರಿಗೂ ಸರಿಯಾಗಿ ಹೊಂದಿಕೆಯಾಗುವುದಿಲ್ಲ. ಹೀಗಾಗಿ, 3ಡಿ ಮುದ್ರಣ ತಂತ್ರಜ್ಞಾನವು ಈ ಸಮಸ್ಯೆಗೆ ಪರಿಹಾರ ಒದಗಿಸಲಿದೆ’ ಎಂದು ವಿವರಿಸಿದರು.

‘3ಡಿ ಮುದ್ರಣ ತಂತ್ರಜ್ಞಾನ ಆಧರಿಸಿ ಶಸ್ತ್ರಚಿಕಿತ್ಸೆ ನಡೆಸುವಾಗ ವ್ಯಕ್ತಿಯ ಮೂಳೆಯ ಕೃತಕ ಮಾದರಿಗಳನ್ನು ವಿನ್ಯಾಸ ಮಾಡಿಸಲಾಗುತ್ತದೆ. ಹಾನಿಯಾದ ಜಾಗಕ್ಕೆ ಸರಿಯಾಗಿ ಹೊಂದಿಕೆಯಾಗುವ ರೀತಿಯಲ್ಲಿ ಮಿಶ್ರಲೋಹದ ಪ್ಲೇಟ್‌ ಅನ್ನು ತಯಾರಿಸಲಾಗುತ್ತದೆ. ಸಿದ್ಧಪಡಿಸಿಕೊಂಡಿರುವ ಕೃತಕ ಮೂಳೆಯ ಮಾದರಿಗೆ ಮೊದಲು ಪ್ಲೇಟ್ ಅಳವಡಿಸಲಾಗುವುದು. ಸಮರ್ಪಕವಾಗಿ ಹೊಂದಿಕೆಯಾಗಲಿದೆ ಎಂದು ಖಚಿತಪಟ್ಟ ಬಳಿಕವೇ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಇದರಿಂದ ಸುಲಭ ಮತ್ತು ನಿಖರವಾಗಿ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯ. ರೋಗಿಗಳೂ ಬೇಗ ಚೇತರಿಸಿಕೊಳ್ಳಲಿದ್ದಾರೆ’ ಎಂದು ವಿವರಿಸಿದರು.

‘ಸಾಂಪ್ರದಾಯಿಕ ವಿಧಾನದಲ್ಲಿ ನಡೆಸುವ ಶಸ್ತ್ರಚಿಕಿತ್ಸೆಯಲ್ಲಿ ಶೇ 100 ರಷ್ಟು ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ, ಈ ಹೊಸ ವಿಧಾನದಲ್ಲಿ ನಡೆಸುವ ಶಸ್ತ್ರಚಿಕಿತ್ಸೆಯಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಶಸ್ತ್ರಚಿಕಿತ್ಸೆ ಮಾಡುವ ವೈದ್ಯರಿಗೂ ವಿಶೇಷ ಅನುಭವ ಬೇಕಾಗುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT