ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿಗೆ ಬರಲಿದೆ 40 ನಾನ್‌ ಎಸಿ ಸ್ಲೀಪರ್‌

ಹವಾನಿಯಂತ್ರಣ ರಹಿತ ಬಸ್‌ಗಳಿಗೆ ಆದ್ಯತೆ ನೀಡುತ್ತಿರುವ ದೂರದೂರಿನ ಪಯಣಿಗರು
Published 4 ಸೆಪ್ಟೆಂಬರ್ 2023, 21:07 IST
Last Updated 4 ಸೆಪ್ಟೆಂಬರ್ 2023, 21:07 IST
ಅಕ್ಷರ ಗಾತ್ರ

ಬೆಂಗಳೂರು: ದೂರದ ಜಿಲ್ಲೆಗಳಿಗೆ ಹೋಗುವ ಪ್ರಯಾಣಿಕರು ಹವಾನಿಯಂತ್ರಣ ರಹಿತ ಸ್ಲೀಪರ್‌ ಬಸ್‌ಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಈ ಬಸ್‌ಗಳನ್ನು ಹೆಚ್ಚಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. 

ಹವಾನಿಯಂತ್ರಣವಲ್ಲದ ಸ್ಲೀಪರ್‌ ಬಸ್‌ಗಳಿಗಾಗಿ ವಾರದ ಒಳಗೆ 40 ಟ್ರಕ್‌ಗಳು ಬೆಂಗಳೂರಿಗೆ ಬರಲಿವೆ. ಒಂದು ತಿಂಗಳ ಒಳಗೆ ಈ ಟ್ರಕ್‌ಗಳು ಬಾಡಿ ಕಟ್ಟಿಸಿಕೊಂಡು ಸಂಚಾರಕ್ಕೆ ಸಿದ್ಧವಾಗಲಿವೆ. 

‘ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಬರಲಿರುವ ಲೈಲೆಂಡ್‌ ಟ್ರಕ್‌ಗಳಿಗೆ ಲೈಲೆಂಡ್‌ ಕಂಪನಿಯವರೇ ನಾನ್‌ ಎಸಿ ಸ್ಲೀಪರ್‌ ಬಸ್‌ನ ಬಾಡಿ ಕಟ್ಟುವ ಕೆಲಸ ಮಾಡಲಿದ್ದಾರೆ. ಪ್ರತಿ ಬಸ್‌ಗೆ ₹ 46 ಲಕ್ಷ ವೆಚ್ಚವಾಗಲಿದೆ. ನಮ್ಮ ನಿಗಮವೇ ವೆಚ್ಚವನ್ನು ಭರಿಸಲಿದೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬು ಕುಮಾರ್‌ ಮಾಹಿತಿ ನೀಡಿದರು.

ಮಂಗಳೂರು, ಉಡುಪಿ, ಕಾರವಾರ, ಬೆಳಗಾವಿ, ಹುಬ್ಬಳ್ಳಿ, ಬೀದರ್‌, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಹೀಗೆ ಬೇರೆ ಬೇರೆ ಊರಿಗೆ ಹೋಗುವ ಪ್ರಯಾಣಿಕರು ಕೆಎಸ್‌ಆರ್‌ಟಿಸಿಯ ಹವಾನಿಯಂತ್ರಿತ ಸ್ಲೀಪರ್‌ ಬಸ್‌ಗಳಿಗಿಂತ ಈ ಬಸ್‌ಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಅನುದಾನ ಮಂಜೂರು: ಸಾರಿಗೆಯ ನಾಲ್ಕು ನಿಗಮಗಳಲ್ಲಿ ಬಸ್‌ ಖರೀದಿಸಲು ವಿಶೇಷ ಬಂಡವಾಳ ನೆರವು ಅಡಿ ರಾಜ್ಯ ಸರ್ಕಾರವು ಆಗಸ್ಟ್‌ನಲ್ಲಿ ಅನುದಾನ ಮಂಜೂರು ಮಾಡಿತ್ತು. ಕೆಎಸ್ಆರ್‌ಟಿಸಿಗೆ ₹ 100 ಕೋಟಿ, ಬಿಎಂಟಿಸಿಗೆ ₹ 150 ಕೋಟಿ, ಎನ್‌ಡಬ್ಲ್ಯುಕೆಆರ್‌ಟಿಸಿಗೆ ₹ 150 ಕೋಟಿ, ಕೆಕೆಆರ್‌ಟಿಸಿಗೆ ₹ 100 ಕೋಟಿ ಮಂಜೂರಾಗಿತ್ತು.

ಬೇರೆ ನಿಗಮಗಳಲ್ಲಿಯೂ ಖರೀದಿ: ವಾಯವ್ಯ ಕರ್ನಾಟಕ ಸಾರಿಗೆ ನಿಗಮ (ಎನ್‌ಡಬ್ಲ್ಯುಕೆಆರ್‌ಟಿಸಿ) ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳು (ಕೆಕೆಆರ್‌ಟಿಸಿ) ಕೂಡ ಹವಾನಿಯಂತ್ರಣ ರಹಿತ ಸ್ಲೀಪರ್‌ ಬಸ್‌ಗಳ ಖರೀದಿಗೆ ಮುಂದಾಗಿವೆ. ಎನ್‌ಡಬ್ಲ್ಯುಕೆಆರ್‌ಟಿಸಿ 20 ಹಾಗೂ ಕೆಕೆಆರ್‌ಟಿಸಿ 6 ಬಸ್‌ಗಳನ್ನು ಖರೀದಿಸಲಿವೆ. 

ಇದಲ್ಲದೇ ಈ ವರ್ಷವೇ ಕೆಎಸ್‌ಆರ್‌ಟಿಸಿ 4, ಎನ್‌ಡಬ್ಲ್ಯುಕೆಆರ್‌ಟಿಸಿ 4 ಹವಾನಿಯಂತ್ರಿತ ಸ್ಲೀಪರ್‌ಗಳನ್ನು ಕೂಡ ಖರೀದಿಸಲು ಯೋಜನೆ ರೂಪಿಸಿವೆ.

ಅರ್ಧ ಶತಮಾನದ ಹಿಂದೆ ಬೆಂಗಳೂರಿನಲ್ಲಿದ್ದ ಡಬಲ್‌ ಡೆಕ್ಕರ್‌ ಬಸ್‌
ಅರ್ಧ ಶತಮಾನದ ಹಿಂದೆ ಬೆಂಗಳೂರಿನಲ್ಲಿದ್ದ ಡಬಲ್‌ ಡೆಕ್ಕರ್‌ ಬಸ್‌
ಪ್ರಯಾಣಿಕರ ನಿರೀಕ್ಷೆಗೆ ತಕ್ಕಂತೆ ಸೌಲಭ್ಯ ನೀಡಬೇಕು ಪ್ರಯಾಣಿಕರ ಪ್ರಮಾಣಕ್ಕೆ ಅನುಗುಣವಾಗಿ ಬಸ್‌ ಸಂಖ್ಯೆ ಹೆಚ್ಚಿಸಬೇಕು. ಅದಕ್ಕಾಗಿ ಬಸ್‌ ಖರೀದಿಸಲಾಗುತ್ತಿದೆ.
ವಿ. ಅನ್ಬುಕುಮಾರ್‌ ವ್ಯವಸ್ಥಾಪಕ ನಿರ್ದೇಶಕ ಕೆಎಸ್‌ಆರ್‌ಟಿಸಿ

‘10 ವರ್ಷಗಳಿಂದ ಬಸ್‌ ಹೆಚ್ಚಾಗಿರಲಿಲ್ಲ’

10 ವರ್ಷಗಳಿಂದ ಬಸ್‌ ಇದ್ದಷ್ಟೇ ಇವೆ. ಪ್ರಯಾಣಿಕರ ಸಂಖ್ಯೆ ಏರಿದೆ. ಅದಕ್ಕೆ ಅನುಗುಣವಾಗಿ ಬಸ್‌ ಖರೀದಿಸುವ ಉದ್ದೇಶವನ್ನು ಸಾರಿಗೆ ಇಲಾಖೆ ಹೊಂದಿದೆ. ಕೆಎಸ್‌ಆರ್‌ಟಿಸಿ ಬಿಎಂಟಿಸಿ ಕೆಕೆಆರ್‌ಟಿಸಿ ಎನ್‌ಡಬ್ಲ್ಯುಕೆಆರ್‌ಟಿಸಿ ಈ ನಾಲ್ಕು ನಿಗಮಗಳಲ್ಲಿ ಬೇರೆ ಬೇರೆ ರೀತಿಯ ಒಟ್ಟು 4 ಸಾವಿರ ಬಸ್‌ಗಳನ್ನು ಖರೀದಿಸುವ ಗುರಿ ಇದೆ. ಬಿಎಂಟಿಸಿಯಲ್ಲಿ ಈ ಆರ್ಥಿಕ ವರ್ಷ ಮುಗಿಯುವುದರ ಒಳಗೆ 921 ಎಲೆಕ್ಟ್ರಿಕ್‌ ಹೊಸ ಬಸ್‌ಗಳು ರಸ್ತೆಗೆ ಇಳಿಯಲಿವೆ. ಕೆಎಸ್‌ಆರ್‌ಟಿಸಿಯಲ್ಲಿ ಪ್ರೊಟೊಟೈಪ್‌ 200 ಬಸ್‌ಗಳ ಖರೀದಿ ಪ್ರಕ್ರಿಯೆ ಒಂದು ತಿಂಗಳ ಒಳಗೆ ಮುಗಿಯಲಿದೆ. ಬಳಿಕ ಮತ್ತೆ 300 ಬಸ್‌ ಖರೀದಿಸಲಾಗುವುದು.  ವಿವಿಧ ನಿಗಮಗಳಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹವಾನಿಯಂತ್ರಣ ರಹಿತ ಬಸ್‌ ಖರೀದಿ ನಡೆಯುತ್ತಿದೆ. ರಾಮಲಿಂಗಾರೆಡ್ಡಿ ಸಾರಿಗೆ ಸಚಿವ

ಬರಲಿದೆ ಡಬಲ್‌ ಡೆಕ್ಕರ್‌ ಬಸ್‌!

10 ಡಬಲ್‌ ಡೆಕ್ಕರ್‌ ಬಸ್‌ಗಳನ್ನು ಖರೀದಿಸಲು ಬಿಎಂಟಿಸಿ ಮುಂದಾಗಿದೆ. ಡಬಲ್ ಡೆಕ್ಕರ್‌ ಬಸ್‌ಗಳು ಬಂದರೆ ಅವರು ಆಕರ್ಷಣೆಯ ಕೇಂದ್ರಗಳಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಎರಡು ವಾರಗಳಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಲು ಚಿಂತನೆ ನಡೆಸಲಾಗಿದೆ. 1970–80ರ ದಶಕಗಳಲ್ಲಿ ಬೆಂಗಳೂರಿನಲ್ಲಿ ಡಬಲ್‌ ಡೆಕ್ಕರ್ ಬಸ್‌ಗಳು ಓಡಾಡುತ್ತಿದ್ದವು. ಈಗಿನ ಪೀಳಿಗೆ ಅವುಗಳನ್ನು ನೋಡಿಲ್ಲ. ಈ ಕೊರತೆ ಒಂದು ವರ್ಷದೊಳಗೆ ನೀಗುವ ಸಾಧ್ಯತೆ ಇದೆ’ ಎಂದು ಮಾಹಿತಿ ನೀಡಿದ್ದಾರೆ.

ಕೆಎಸ್‌ಆರ್‌ಟಿಸಿಯಲ್ಲೂ ಡಬಲ್‌ ಡೆಕ್ಕರ್‌: ‘ಬಿಎಂಟಿಸಿಗೆ ಡಬಲ್‌ ಡೆಕ್ಕರ್‌ ಬಸ್‌ಗಳು ಬಂದ ಮೇಲೆ ಅದರ ಸಾಧಕ ಬಾಧಕಗಳನ್ನು ನೋಡಲಾಗುವುದು. ಆನಂತರ ಮೈಸೂರಿನಂಥ ನಗರಗಳಲ್ಲಿ ಡಬಲ್‌ ಡೆಕ್ಕರ್‌ ಬಸ್‌ಗಳನ್ನು ಇಳಿಸಲು ಚಿಂತಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT