ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸಿಂಗ್‌ ವಿದ್ಯಾರ್ಥಿಗಳೆಲ್ಲರಿಗೂ ಕೋವಿಡ್‌ ಪರೀಕ್ಷೆ

40 ವಿದ್ಯಾರ್ಥಿಗಳಿಗೆ ಕೋವಿಡ್‌ l ಕಾವಲ್‌ಬೈರಸಂದ್ರದ ಮಂಜುಶ್ರೀ ನರ್ಸಿಂಗ್‌ ಕಾಲೇಜಿಗೆ ಅಧಿಕಾರಿಗಳ ದೌಡು
Last Updated 13 ಫೆಬ್ರುವರಿ 2021, 19:34 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಬಂದಿದೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಕಾವಲ್‌ ಬೈರಸಂದ್ರದ ಮಂಜುಶ್ರೀ ನರ್ಸಿಂಗ್‌ ಕಾಲೇಜಿನ 40 ವಿದ್ಯಾರ್ಥಿಗಳಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿರುವುದು ಬಿಬಿಎಂಪಿ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.

ಕೇರಳದಲ್ಲಿ ಈಗಲೂ ನಿತ್ಯ 5 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ.ನಗರದಲ್ಲಿರುವ ಬಹುತೇಕ ನರ್ಸಿಂಗ್ ಕಾಲೇಜುಗಳಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಮಂಜುಶ್ರೀ ಕಾಲೇಜಿನ ರೀತಿಯಲ್ಲೇ ಇತರ ನರ್ಸಿಂಗ್‌ ಕಾಲೇಜುಗಳಲ್ಲೂ ಕೋವಿಡ್‌ ಹರಡಿರಬಹುದು ಎಂಬುದು ಬಿಬಿಎಂಪಿ ಅಧಿಕಾರಿಗಳ ಚಿಂತೆಗೆ ಕಾರಣ.

ಒಂದೇ ಕಾಲೇಜಿನ 40 ವಿದ್ಯಾರ್ಥಿಗಳಿಗೆ ಕೋವಿಡ್‌ ದೃಢಪಟ್ಟ ಬಳಿಕ ಎಚ್ಚೆತ್ತುಕೊಂಡ ಪಾಲಿಕೆ ನರ್ಸಿಂಗ್‌ ಕಾಲೇಜುಗಳಲ್ಲಿ ಕೋವಿಡ್‌ ಹರಡುವುದನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ನಗರದ ಎಲ್ಲ ನರ್ಸಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳನ್ನೂ ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ಬಿಬಿಎಂಪಿ ಮುಂದಾಗಿದೆ.

‘ಕೇರಳದ ವಿದ್ಯಾರ್ಥಿಗಳು ರಜಾ ದಿನಗಳಲ್ಲಿ ಊರಿಗೆ ಹೋಗಿ ಬರುತ್ತಿದ್ದಾರೆ. ಹಾಗಾಗಿ ನಗರದಲ್ಲಿ ಎಲ್ಲಾ ನರ್ಸಿಂಗ್ ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಿದ್ದೇನೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸುದ್ದಿಗಾರರಿಗೆ ತಿಳಿಸಿದರು.

ಅಧಿಕಾರಿಗಳೊಂದಿಗೆ ಮಂಜುಶ್ರೀ ಕಾಲೇಜಿಗೆ ಶನಿವಾರ ಭೇಟಿ ನೀಡಿದ ಅವರು ಕೋವಿಡ್‌ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು.

‘ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಉಳಿದ 170 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯದಲ್ಲೇ ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ. ಅವರು 14 ದಿನಗಳ ಕಾಲ ಕ್ವಾರಂಟೈನ್‌ಲ್ಲಿ ಇರಬೇಕು. ಯಾರೂ ಕಟ್ಟಡದಿಂದ ಆಚೆ ಬರುವಂತಿಲ್ಲ. ಈ ವಿದ್ಯಾರ್ಥಿಗಳಿಗೆ ಅವಶ್ಯಕ ಸಾಮಗ್ರಿಗಳನ್ನು ಪೂರೈಸಲು ಕ್ರಮ ಕೈಗೊಳ್ಳುವಂತೆ ಕಾಲೇಜಿನ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇನೆ. ಕೋವಿಡ್ ಸೋಂಕಿತರಿಗೆ ಸಮಸ್ಯೆ ಎದುರಾದರೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಅಧಿಕಾರಿಗಳು ಕ್ರಮವಹಿಸಲಿದ್ದಾರೆ’ ಎಂದು ಆಯುಕ್ತರು ತಿಳಿಸಿದರು.

ಸೋಂಕು ದೃಢಪಟ್ಟಿರುವ 40 ವಿದ್ಯಾರ್ಥಿಗಳ ಗಂಟಲ ದ್ರವದ ಮಾದರಿಗಳನ್ನು ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿ ಮತ್ತೊಮ್ಮೆ ಪರೀಕ್ಷೆ ಮಾಡಿಸಲಾಗುತ್ತಿದೆ.

ಕಾಲೇಜಿನ ಪರಿಶೀಲನೆ ವೇಳೆ ವಿಶೇಷ ಆಯುಕ್ತ(ಆರೋಗ್ಯ) ರಾಜೇಂದ್ರ ಚೋಳನ್, ಪೂರ್ವ ವಲಯ ಜಂಟಿ ಆಯುಕ್ತರಾದ ಪಲ್ಲವಿ, ಆರೋಗ್ಯಾಧಿಕಾರಿ ಸಿದ್ದಪ್ಪಾಜಿ ಜೊತೆಯಲ್ಲಿದ್ದರು.

ಕೋವಿಡ್‌ ಇಲ್ಲದ ಪ್ರಮಾಣಪತ್ರ ಕಡ್ಡಾಯ: ಬಿಬಿಎಂಪಿ ಆಯುಕ್ತ

‘ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ಯಾವುದೇ ನಿರ್ಬಂಧವಿಲ್ಲ. ಆ ರಾಜ್ಯದಿಂದ ಬರುವ ವಿದ್ಯಾರ್ಥಿಗಳು ಅಥವಾ ವ್ಯಕ್ತಿಗಳು 72 ಗಂಟೆಗಳ ಈಚೆಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಿಕೊಂಡು, ಕೋವಿಡ್‌ ಸೋಂಕು ಹೊಂದಿಲ್ಲ ಎಂಬುದು ದೃಢಪಟ್ಟರೆ ಮಾತ್ರ ಅವರನ್ನು ಸಂಸ್ಥೆಗೆ ಅಥವಾ ಕಾಲೇಜಿಗೆ ಸೇರಿಕೊಳ್ಳಬೇಕು‌’ ಎಂದು ಮಂಜುನಾಥ ಪ್ರಸಾದ್‌ ಸೂಚಿಸಿದ್ದಾರೆ.

‘ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ವರದಿ ಬಾರದಿದ್ದರೆ, ಅಂತಹವರು 14 ದಿನ ಪ್ರತ್ಯೇಕ ವಾಸಕ್ಕೆ ಒಳಗಾಗಬೇಕು. ಆನಂತರ ಅವರು ಕೋವಿಡ್‌ ಸೋಂಕು ಹೊಂದಿಲ್ಲ ಎಂಬುದು ಆರ್.ಟಿ.ಪಿ.ಸಿ ಆರ್ ಪರೀಕ್ಷೆಯಲ್ಲಿ ದೃಢಪಟ್ಟರೆ ಮಾತ್ರ ಹೊರಗಡೆ ಬರಲು ಅವಕಾಶ ನೀಡಲಾಗುತ್ತದೆ’ ಎಂದು ಅವರು ತಿಳಿಸಿದರು.

‘ಈ ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟ ಸಂಸ್ಥೆಯ ಮುಖ್ಯಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

ನರ್ಸಿಂಗ್‌ ವಿದ್ಯಾರ್ಥಿಗಳಿಗೂ ಲಸಿಕೆ

ನರ್ಸಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಯಾರೂ ಕೋವಿಡ್‌ ಲಸಿಕೆ ಹಾಕಿಸಿಕೊಂಡಿಲ್ಲವೊ, ಅವರಿಗೆಲ್ಲ ಲಸಿಕೆ ಹಾಕುವುದಕ್ಕೆ ಬಿಬಿಎಂಪಿ ಕ್ರಮ ಕೈಗೊಳ್ಳಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT