ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೂರ್ಣ ಕಾಮಗಾರಿಗಳಿಗೆ ₹4,087 ಕೋಟಿ ವೆಚ್ಚ; ಸಿಎಜಿ ವರದಿಯಲ್ಲಿ ಬಹಿರಂಗ

Published 11 ಜುಲೈ 2023, 16:32 IST
Last Updated 11 ಜುಲೈ 2023, 16:32 IST
ಅಕ್ಷರ ಗಾತ್ರ

ಬೆಂಗಳೂರು: 2022ರ ಮಾರ್ಚ್‌ 31ಕ್ಕೆ ರಾಜ್ಯದ ವಿವಿಧ ಇಲಾಖೆಗಳಲ್ಲಿ 1,208 ಕಾಮಗಾರಿಗಳು ಅಪೂರ್ಣ ಸ್ಥಿತಿಯಲ್ಲಿದ್ದು, ಅವುಗಳ ಮೇಲೆ ₹4,087.51 ಕೋಟಿ ವೆಚ್ಚ ಮಾಡಲಾಗಿತ್ತು ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

2021ರ ಮಾರ್ಚ್‌ ಅಂತ್ಯಕ್ಕೆ 1,133 ಕಾಮಗಾರಿಗಳು ಅಪೂರ್ಣ ಸ್ಥಿತಿಯಲ್ಲಿದ್ದವು. 2022ರ ಮಾರ್ಚ್‌ ಅಂತ್ಯಕ್ಕೆ ಈ ಸಂಖ್ಯೆ 1,208ಕ್ಕೆ ಏರಿಕೆಯಾಗಿತ್ತು. ರಸ್ತೆ ಮತ್ತು ಸೇತುವೆ ನಿರ್ಮಾಣದ 928, ನೀರಾವರಿಗೆ ಸಂಬಂಧಿಸಿದ 215, ಕಟ್ಟಡ ನಿರ್ಮಾಣದ 25 ಹಾಗೂ ಇತರ 40 ಕಾಮಗಾರಿಗಳು ದೀರ್ಘ ಕಾಲದಿಂದ ಅಪೂರ್ಣ ಸ್ಥಿತಿಯಲ್ಲಿವೆ ಎಂಬ ಮಾಹಿತಿ ವರದಿಯಲ್ಲಿದೆ.

92 ಕಾಮಗಾರಿಗಳು ಐದು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಅಪೂರ್ಣವಾಗಿವೆ. 938 ಕಾಮಗಾರಿಗಳು ಒಂದು ವರ್ಷಕ್ಕಿಂತಲೂ ಹೆಚ್ಚು ಅವಧಿಯಿಂದ ಅಪೂರ್ಣ ಸ್ಥಿತಿಯಲ್ಲಿವೆ. 178 ಕಾಮಗಾರಿಗಳು ಒಂದು ವರ್ಷಕ್ಕಿಂತ ಕಡಿಮೆ ಅವಧಿಯಿಂದ ಬಾಕಿ ಇವೆ. ಲೋಕೋಪಯೋಗಿ ಮತ್ತು ಜಲ ಸಂಪನ್ಮೂಲ ಇಲಾಖೆಗಳು ಈ ವಿಳಂಬಕ್ಕೆ ಸರಿಯಾದ ಕಾರಣ ನೀಡಿಲ್ಲ ಎಂದು ಸಿಎಜಿ ಆಕ್ಷೇಪಿಸಿದೆ.

ಪಿ.ಡಿ ಖಾತೆಯಲ್ಲಿ ಠೇವಣಿ ಹೆಚ್ಚಳ

ವಿವಿಧ ಉದ್ದೇಶಗಳಿಗಾಗಿ ಸರ್ಕಾರ ಬಿಡುಗಡೆ ಮಾಡುವ ಅನುದಾನವನ್ನು ಅಧಿಕಾರಿಗಳ ವೈಯಕ್ತಿಕ ಠೇವಣಿ (ಪಿ.ಡಿ) ಖಾತೆಗಳಲ್ಲಿ ಉಳಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿರುವುದು ಕಂಡುಬಂದಿದೆ. 2021ರ ಮಾರ್ಚ್‌ ಅಂತ್ಯಕ್ಕೆ ಪಿ.ಡಿ ಖಾತೆಗಳಲ್ಲಿ ₹3,989.23 ಕೋಟಿ ಠೇವಣಿ ಇತ್ತು. 2022ರ ಮಾರ್ಚ್‌ ಅಂತ್ಯಕ್ಕೆ ಪಿ.ಡಿ ಖಾತೆಗಳಲ್ಲಿನ ಠೇವಣಿ ಮೊತ್ತ ₹ 4,105.61 ಕೋಟಿಗೆ ಏರಿಕೆಯಾಗಿದೆ ಎಂಬುದು ವರದಿಯಲ್ಲಿದೆ.

2022ರ ಮಾರ್ಚ್‌ ಅಂತ್ಯದಲ್ಲಿ 25 ಪ್ರಕರಣಗಳಲ್ಲಿ ₹ 10,849.61 ಕೋಟಿ ಅನುದಾನ ಬಳಕೆಯಾಗದೇ ಉಳಿದಿತ್ತು. ಅದರಲ್ಲಿ ₹ 5,998.67 ಕೋಟಿಯನ್ನು ಮಾತ್ರ ಹಿಂದಿರುಗಿಸಲಾಗಿತ್ತು. ₹ 4,850.94 ಕೋಟಿಯನ್ನು ಹಿಂದಿರುಗಿಸಿರಲಿಲ್ಲ ಎಂದು ವರದಿ ಹೇಳಿದೆ.

34 ಸಂಸ್ಥೆಗಳ ಆಸ್ತಿ ಶೂನ್ಯ

ರಾಜ್ಯ ಸರ್ಕಾರಿ ಸ್ವಾಮ್ಯದ 125 ಸಾರ್ವಜನಿಕ ವಲಯದ ಉದ್ದಿಮೆಗಳ ಪೈಕಿ 34 ಸಂಸ್ಥೆಗಳ ನಿವ್ವಳ ಆಸ್ತಿ ಮೌಲ್ಯ ಮತ್ತು ಒಟ್ಟು ನಷ್ಟದ ಪ್ರಮಾಣ ಸಮಸ್ಥಿತಿಗೆ ಬಂದಿದೆ. 34 ಸಂಸ್ಥೆಗಳೂ ಶೂನ್ಯ ಆಸ್ತಿಯನ್ನು ಹೊಂದಿದ ಸ್ಥಿತಿಯಲ್ಲಿವೆ ಎಂಬ ಅಂಶ ವರದಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT