ಬುಧವಾರ, ನವೆಂಬರ್ 25, 2020
21 °C

₹ 42,500 ದಂಡ; ಪೊಲೀಸರಿಗೆ ವಾಹನ ಕೊಟ್ಟು ಹೋದ ಸವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬೈಕ್ ಸವಾರರೊಬ್ಬರಿಗೆ ₹42,500 ದಂಡ ವಿಧಿಸಲಾಗಿದೆ. ಆ ಮೊತ್ತ ಪಾವತಿಸಲಾಗದೇ ಸವಾರ, ದ್ವಿಚಕ್ರ ವಾಹನವನ್ನೇ ಪೊಲೀಸರಿಗೆ ಕೊಟ್ಟು ಹೋಗಿದ್ದಾರೆ.

‘ನಗರದ ನಿವಾಸಿ ಅರುಣ್‌ಕುಮಾರ್ ಎಂಬುವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದಿಂದ 77 ಬಾರಿ ಸಂಚಾರ ನಿಯಮ ಉಲ್ಲಂಘನೆ ಆಗಿತ್ತು. ಹೀಗಾಗಿ, ದಂಡ ವಿಧಿಸಿ ರಶೀದಿ ನೀಡಲಾಗಿದೆ. ವಾಹನ ಜಪ್ತಿ ಮಾಡಲಾಗಿದೆ. ವಾಹನ ಬಿಡಿಸಿಕೊಂಡು ಹೋಗಲು ಇದುವರೆಗೂ ಠಾಣೆಗೆ ಬಂದಿಲ್ಲ’ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಪತ್ತೆಗಾಗಿ ಮಡಿವಾಳ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ನವೀನ್‌ಕುಮಾರ್ ನಿರ್ದೇಶನದಂತೆ ಪಿಎಸ್‌ಐ ಶಿವರಾಜ್‌ಕುಮಾರ್ ಅಂಗಡಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು.’

‘ಮಡಿವಾಳ ವೃತ್ತದಲ್ಲಿ ಬಂದ ಅರುಣ್‌ಕುಮಾರ್ ಅವರ ದ್ವಿಚಕ್ರ ವಾಹನ ತಡೆದು ತಪಾಸಣೆ ನಡೆಸಿದ್ದರು. ಅರುಣ್‌ಕುಮಾರ್ ಇದುವರೆಗೂ 77 ಬಾರಿ ನಿಯಮ ಉಲ್ಲಂಘಿಸಿದ್ದು ತಪಾಸಣೆ ವೇಳೆ ಗೊತ್ತಾಗಿತ್ತು. ಅವರಿಗೆ ಸ್ಥಳದಲ್ಲೇ ದಂಡದ ರಶೀದಿ ನೀಡಿ, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.’

ದಂಡವೇ ಹೆಚ್ಚು: ಸವಾರ ಅರುಣ್‌ಕುಮಾರ್, ಸೆಕೆಂಡ್ ಹ್ಯಾಂಡ್‌ ದ್ವಿಚಕ್ರ ವಾಹನ ಖರೀದಿಸಿದ್ದರು. ಅದರ ಮೌಲ್ಯ ಸದ್ಯ ₹ 20 ಸಾವಿರದಿಂದ ₹ 30 ಸಾವಿರ ಇದೆ. ಅದಕ್ಕಿಂತ ದಂಡವೇ ಹೆಚ್ಚಿದೆ. ಹೀಗಾಗಿಯೇ ದಂಡದ ರಶೀದಿ ತೆಗದುಕೊಂಡು ಹೋದ ಸವಾರ, ವಾಪಸು ಬಂದಿಲ್ಲ.  ಆತ ನ್ಯಾಯಾಲಯದಲ್ಲಿ ದಂಡ ಪಾವತಿಸಿ ವಾಹನ ಬಿಡಿಸಿಕೊಂಡು ಹೋಗಬೇಕು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು