ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು |ನಗರದಲ್ಲಿ ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಐದು ಅಂಶಗಳ ಕಾರ್ಯಕ್ರಮ

ನಗರದಲ್ಲಿ ಕುಡಿಯುವ ನೀರು ಗುಣಮಟ್ಟ ಖಾತರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ
Published 24 ಮೇ 2024, 0:39 IST
Last Updated 24 ಮೇ 2024, 0:39 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಜನರ ಸಮಸ್ಯೆಗಳ ನಿವಾರಣೆಗೆ ಐದು ಅಂಶಗಳ ಕಾರ್ಯಕ್ರಮ ಜಾರಿಗೊಳಿಸಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸೂಚಿಸಿದರು.

ಬಿಬಿಎಂಪಿ, ಜಲಮಂಡಳಿ, ಬಿಡಿಎ ಹಾಗೂ ಬಿಎಂಟಿಎಫ್‌ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಶಿವಕುಮಾರ್‌, ಈ ಐದೂ ಅಂಶಗಳ ಕಾರ್ಯಕ್ರಮಗಳನ್ನು ಸದ್ಯದಿಂದಲೇ ಜಾರಿಗೊಳಿಸಬೇಕು ಎಂದು ಆದೇಶಿಸಿದರು.

ನಗರದಲ್ಲಿ ನಾಗರಿಕರಿಗೆ ಪೂರೈಕೆಯಾಗುತ್ತಿರುವ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಖಾತರಿ ಇರಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಜಲಮಂಡಳಿ ಪ್ರತ್ಯೇಕ ತಂಡ ರಚಿಸಬೇಕು. ಬಿಬಿಎಂಪಿ ಸಿಬ್ಬಂದಿ ನಗರದ ಎಲ್ಲ ಭಾಗಗಳಲ್ಲಿ ನಿತ್ಯವೂ ನೀರಿನ ಮಾದರಿ ಸಂಗ್ರಹಿಸಿ ಜಲಮಂಡಳಿಗೆ ಪರೀಕ್ಷೆಗೆ ನೀಡಬೇಕು ಎಂದು ಸೂಚಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ನಗರದಲ್ಲಿ 2016-17ರಲ್ಲಿ ರಾಜಕಾಲುವೆಗಳಲ್ಲಿ 2,626 ಒತ್ತುವರಿಗಳನ್ನು ಗುರುತಿಸಲಾಗಿತ್ತು. 2022- 23ರ ಹೊತ್ತಿಗೆ 556 ಒತ್ತುವರಿ ತೆರವು ಮಾಡಲಾಗಿತ್ತು. ಈಗ 1,136 ಹೊಸದಾಗಿ ಒತ್ತುವರಿಗಳನ್ನು ಗುರುತಿಸಲಾಗಿದ್ದು, ಒಟ್ಟು 4,316 ಒತ್ತುವರಿಗಳಿವೆ. ಉಪಗ್ರಹ, ಗೂಗಲ್ ಇಮೇಜ್‌ ಮತ್ತು ಸರ್ವೆ ಇಲಾಖೆ ಮೂಲಕ ಈ ಒತ್ತುವರಿ ಮಾಹಿತಿ ಸಂಗ್ರಹಿಸಿದೆ. ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಲವು ಪ್ರಕರಣಗಳು ನ್ಯಾಯಾಲಯದಲ್ಲಿದ್ದು, ಅವುಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ರಾಜಕಾಲುವೆಯ ಒತ್ತುವರಿ ತೆರವುಗೊಳಿಸಲು ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ನೆರವು ಪಡೆದುಕೊಳ್ಳಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಲೋಕಸಭಾ ಚುನಾವಣೆಯ ಹಿಂದೆ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ, ಅಧಿಕಾರಿಗಳ ದೌರ್ಜನ್ಯ ಸೇರಿದಂತೆ ನಾಗರಿಕರು ಹಲವು ರೀತಿಯ ದೂರುಗಳನ್ನು ನೀಡಿದ್ದರು. ಈ ದೂರುಗಳ ಬಗ್ಗೆ ಚುನಾವಣೆ ಫಲಿತಾಂಶದ ನಂತರ ಪುನರ್‌ವಿಮರ್ಶೆ ಸಭೆ ನಡೆಸಲಾಗುತ್ತದೆ. ಜನರಿಗೆ ಪರಿಹಾರ ಕಲ್ಪಿಸಿರುವ ವಿವರ ಅಥವಾ ಯಾವ ಕಾರಣಕ್ಕೆ ಪರಿಹಾರ ಸಾಧ್ಯವಾಗಿಲ್ಲ ಎಂಬ ಪ್ರಮಾಣೀಕೃತ ಮಾಹಿತಿಯನ್ನು ಒದಗಿಸಲು ಎಲ್ಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ 182 ಕೆರೆಗಳಿವೆ. ಅದರಲ್ಲಿ 116 ಕೆರೆಗಳ ಸರ್ವೆ ನಡೆಯಬೇಕಿದೆ. ಎಲ್ಲ ರೀತಿಯ ಡಿಜಿಟಲ್‌ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಸರ್ವೆ ಕಾರ್ಯ ಮುಗಿಸಲು ಬಿಬಿಎಂಪಿ ಹಾಗೂ ಸರ್ವೆ ಇಲಾಖೆಗೆ ಸೂಚಿಸಲಾಗಿದೆ. ನಗರದಲ್ಲಿ 7,000 ಕೊಳವೆಬಾವಿಗಳು ಬತ್ತಿದ್ದವು. ಅಂತರ್ಜಲ ಕುಸಿತವಾಗಿರುವುದರಿಂದ ಅದನ್ನು ವೃದ್ಧಿಸಲು ಕೆರೆಗಳನ್ನು ತುಂಬಿಸಬೇಕಿದೆ. ವರ್ಷದ ಎಲ್ಲ ಸಮಯದಲ್ಲೂ ಕೆರೆಗಳು ಸಂಸ್ಕರಿಸಿದ ನೀರಿನಿಂದ ತುಂಬಿರಬೇಕು. ಇದಕ್ಕೆ ಅಗತ್ಯವಾದ ಕೊಳವೆಮಾರ್ಗ ಸೇರಿದಂತೆ ಎಲ್ಲ ರೀತಿಯ ನಿರ್ವಹಣೆಯನ್ನೂ ಜಲಮಂಡಳಿಗೆ ವಹಿಸಲಾಗಿದೆ ಎಂದು ಶಿವಕುಮಾರ್‌ ಮಾಹಿತಿ ನೀಡಿದರು.

ಬಿಬಿಎಂಪಿ ಆಸ್ತಿಗಳ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಹೀಗಾಗಿ ಪಾಲಿಕೆ ಆಸ್ತಿಗಳು ಎಷ್ಟಿವೆ, ಎಲ್ಲಿವೆ, ಬಾಡಿಗೆ ಅಥವಾ ಗುತ್ತಿಗೆಗೆ ನೀಡಲಾಗಿದೆಯೇ, ಒತ್ತುವರಿಯಾಗಿದೆಯೇ ಎಂಬ ಪ್ರತ್ಯೇಕ ಮಾಹಿತಿ ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ನಗರದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳು ಇವೆ ಎಂದು ಮುಖ್ಯಮಂತ್ರಿಯವರು ಬುಧವಾರ ಮಾಹಿತಿ ನೀಡಿದ್ದರು. ಈ ಎಲ್ಲ ಗುಂಡಿಗಳನ್ನು 15 ದಿನಗಳಲ್ಲಿ ಮುಚ್ಚಲು ಈಗಾಗಲೇ ಸೂಚಿಸಲಾಗಿದೆ.  ಲೋಕಸಭಾ ಚುನಾವಣಾ ಫಲಿತಾಂಶ ಬಂದ ನಂತರ ಸಾರ್ವಜನಿಕರೇ ರಸ್ತೆಗುಂಡಿಗಳ ಚಿತ್ರ ತೆಗೆದು ಮಾಹಿತಿ ನೀಡುವ ಆ‍್ಯಪ್‌ ಬಿಡುಗಡೆ ಮಾಡಲಾಗುತ್ತದೆ ಎಂದು ಶಿವಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT