ಭಾನುವಾರ, ಅಕ್ಟೋಬರ್ 24, 2021
23 °C
ಖಾಸಗಿ ಬ್ಯಾಂಕ್‌ನಲ್ಲಿ ಚಾಲ್ತಿ ಖಾತೆ, ಹಣ ವರ್ಗಾವಣೆಯಲ್ಲಿ ವಿಳಂಬ: ಸಿಎಜಿ ವರದಿಯಲ್ಲಿ ಉಲ್ಲೇಖ

ಬೆಂಗಳೂರು ವಿ.ವಿಗೆ ₹55 ಲಕ್ಷ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖಾಸಗಿ ಬ್ಯಾಂಕ್‌ನಲ್ಲಿ ಚಾಲ್ತಿ ಖಾತೆ ತೆರೆಯುವ ಮೂಲಕ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ₹55.22 ಲಕ್ಷ ಆದಾಯ ನಷ್ಟವಾಗಿದೆ.

ರಾಜ್ಯ ಸರ್ಕಾರದ 2020ರ ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಮಹಾಲೇಖಪಾಲರು (ಸಿಎಜಿ) ಸಲ್ಲಿಸಿರುವ ಲೆಕ್ಕಪರಿಶೋಧನಾ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.

2017, 2018 ಮತ್ತು 2019ರ ಅವಧಿಯಲ್ಲಿ ವಿಶ್ವವಿದ್ಯಾಲಯಕ್ಕೆ ನಷ್ಟವಾಗಿದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ ರೂಪಿಸಿದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉನ್ನತ ಶಿಕ್ಷಣ ಇಲಾಖೆಗೆ ಸಿಎಜಿ ನಿರ್ದೇಶನ ನೀಡಿದೆ.

ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ‘ಬೆಂಗಳೂರು ವಿಶ್ವವಿದ್ಯಾಲಯವು ಕಾನೂನುಬದ್ಧವಾಗಿ ಭಾರತೀಯ ಸ್ಟೇಟ್‌ ಬ್ಯಾಂಕ್‌ನಿಂದ ಆನ್‌ಲೈನ್‌ ಮೂಲಕ ಶುಲ್ಕವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸಬೇಕಾಗಿತ್ತು. ಟೆಂಡರ್‌ ಪ್ರಕ್ರಿಯೆಯಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಅತಿ ಕಡಿಮೆ ಬಿಡ್‌ ಮಾಡಿತ್ತು. ಹೀಗಾಗಿಯೇ, ಎಸ್‌ಬಿಐಗೆ ವಹಿಸಬೇಕಾಗಿತ್ತು. ಆದರೆ, ಬಿಡ್‌ನಲ್ಲಿ ಅನರ್ಹಗೊಂಡಿದ್ದ ಎಕ್ಸಿಸ್‌ ಬ್ಯಾಂಕ್‌ಗೆ ಈ ಕಾರ್ಯ ವಹಿಸಲಾಗಿದೆ. ವಿಶ್ವವಿದ್ಯಾಲಯದ ಈ ಕ್ರಮ
ಕೆಟಿಪಿಪಿ ಕಾಯ್ದೆ–1999ರ ಉಲ್ಲಂಘನೆಯಾಗಿದೆ ಮತ್ತು ನಿಯಮಾನುಸಾರ ವಿಶ್ವವಿದ್ಯಾಲಯದ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ’ ಎಂದು ರಾಜ್ಯ ಸರ್ಕಾರ 2021ರ ಮಾರ್ಚ್‌ನಲ್ಲಿ ಹೇಳಿತ್ತು.

ಎಕ್ಸಿಸ್‌ ಬ್ಯಾಂಕ್‌ನಲ್ಲಿ ಚಾಲ್ತಿ ಖಾತೆ ತೆರೆಯಲು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅನುಮೋದನೆ ನೀಡಿರಲಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.

ನಷ್ಟವಾಗಿದ್ದು ಹೇಗೆ: ಒಪ್ಪಂದದಂತೆ ಶುಲ್ಕ ಸಂಗ್ರಹಿಸಿರುವುದನ್ನು ಜಮೆ ಮಾಡಲು ಎಕ್ಸಿಸ್‌ ಬ್ಯಾಂಕ್‌ ಕಾಲಮಿತಿಗೆ ಬದ್ಧವಾಗಿರಲಿಲ್ಲ. ಪ್ರತಿನಿತ್ಯದ ಸಂಗ್ರಹವಾಗುವ ಹಣವನ್ನು ವಿಶ್ವವಿದ್ಯಾಲಯದ ಎಸ್‌ಬಿಎಂ ಖಾತೆಗೆ ವರ್ಗಾಯಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. 2017ರಲ್ಲಿ 12, 2018ರಲ್ಲಿ 15 ಮತ್ತು 2019ರಲ್ಲಿ 9 ದಿನಗಳನ್ನು ತೆಗೆದುಕೊಂಡಿತ್ತು. ಈ ರೀತಿಯ ವಿಳಂಬದಿಂದಾಗಿ ವಿಶ್ವವಿದ್ಯಾಲಯಕ್ಕೆ ₹17.43 ಲಕ್ಷ ಬಡ್ಡಿ ನಷ್ಟವಾಗಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

ವಿಶ್ವವಿದ್ಯಾಲಯವು ಮುಚ್ಚಿದ ಲಕೋಟೆಯಲ್ಲಿ ಕೊಟೇಷನ್‌ಗಳನ್ನು ಆಹ್ವಾನಿಸಿತ್ತು. ಆದರೆ, ಇತರ ಬ್ಯಾಂಕ್‌ಗಳು ಕೊಟೇಷನ್‌ಗಳಲ್ಲಿ ಪ್ರಸ್ತಾಪಿಸಿದ್ದ ಆಕರ್ಷಕ ಕೊಡುಗೆಗಳನ್ನು ಪರಿಗಣಿಸಿಲ್ಲ. ಖಾಸಗಿ ಬ್ಯಾಂಕ್‌ಗೆ ಮಾತ್ರ ಆದ್ಯತೆ ನೀಡಿರುವ ಬಗ್ಗೆಯೂ ದಾಖಲಿಸಿಲ್ಲ ಎಂದು ವರದಿ ತಿಳಿಸಿದೆ.

ಜತೆಗೆ, ‘ಸ್ವೀಪ್‌–ಇನ್‌–ಸ್ವೀಪ್‌ ಔಟ್‌’ ಖಾತೆ ಬದಲು ಚಾಲ್ತಿ ಖಾತೆ ತೆರೆಯುವ ಮೂಲಕ ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸುವ ಮೂಲಕ ₹ 37.79 ಲಕ್ಷ ಬಡ್ಡಿ ನಷ್ಟವಾಗಿದೆ ಎಂದು ಉಲ್ಲೇಖಿಸಲಾಗಿದೆ.

ಎಕ್ಸಿಸ್‌ ಬ್ಯಾಂಕ್‌ನಲ್ಲಿ 2017ರ ಫೆಬ್ರುವರಿಯಲ್ಲಿ ವಿಶ್ವವಿದ್ಯಾಲಯವು, ಎಲ್ಲ ರೀತಿಯ ಆನ್‌ಲೈನ್‌ ಶುಲ್ಕ ಸಂಗ್ರಹಿಸಲು ಚಾಲ್ತಿ ಖಾತೆಯನ್ನು ತೆರೆಯಿತು. ಈ ಹಣವನ್ನು ಕಾಲಮಿತಿಯಲ್ಲಿ ವಿಶ್ವವಿದ್ಯಾಲಯದ ಖಾತೆಗೆ ವರ್ಗಾವಣೆ ಮಾಡುವಂತೆ ಬ್ಯಾಂಕ್‌ ಜತೆ ಒಪ್ಪಂದ ಸಹ ಮಾಡಿಕೊಳ್ಳಲಾಗಿತ್ತು. ಆದರೆ, ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಂದ ಅನುಮತಿ ಪಡೆಯದೆಯೇ ಈ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿತ್ತು ಎಂದು ತಿಳಿಸಿದೆ.

ಆಕ್ಷೇಪ ವ್ಯಕ್ತಪಡಿಸಿದ್ದ ಸಿಂಡಿಕೇಟ್‌ ಸದಸ್ಯರು

ಎಕ್ಸಿಸ್‌ ಬ್ಯಾಂಕ್‌ನಲ್ಲಿ ಖಾತೆ ತೆರೆದಿರುವ ಬಗ್ಗೆ ಹಲವು ಸಿಂಡಿಕೇಟ್‌ ಸದಸ್ಯರು ಮತ್ತು ಹಣಕಾಸು ಅಧಿಕಾರಿಗಳು ಸಿಂಡಿಕೇಟ್‌ ಸಭೆಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಲು ಕುಲಪತಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಸಹ ರಚಿಸಲಾಗಿತ್ತು. ಆದರೆ, ಕಳೆದ ಒಂದು ವರ್ಷದಲ್ಲಿ ಸಮಿತಿಯು ಒಂದೂ ಸಭೆಯನ್ನು ನಡೆಸಿಲ್ಲ.

‘ಮೊದಲು ಎಸ್‌ಬಿಐನಲ್ಲಿ ಆನ್‌ಲೈನ್‌ ಮೂಲಕ ಹಣ ಸಂಗ್ರಹಿಸಲಾಗುತ್ತಿತ್ತು. ಆದರೆ, ವಿಶ್ವವಿದ್ಯಾಲಯು ಆ್ಯಕ್ಸಿಸ್‌ ಬ್ಯಾಂಕ್‌ಗೆ ಬದಲಾಯಿಸಿತು. ಅಂದಿನಿಂದಲೂ ನಾವು ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿದ್ದೇವೆ. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ಸಿಂಡಿಕೇಟ್‌ ಸದಸ್ಯರೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು