ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBMP: ಗುತ್ತಿಗೆದಾರರಿಗೆ ₹6 ಸಾವಿರ ಕೋಟಿ ಬಾಕಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಹಣವಿದ್ದರೂ ಪಾವತಿಗಿಲ್ಲ ಅವಕಾಶ; ಕೇಂದ್ರ ಸರ್ಕಾರದ ಅನುದಾನದಲ್ಲೂ ಉಳಿಕೆ
Published 23 ಆಗಸ್ಟ್ 2023, 21:46 IST
Last Updated 23 ಆಗಸ್ಟ್ 2023, 21:46 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿಗಳು ಮುಗಿದು, ಬಿಲ್‌ ಪ್ರಕ್ರಿಯೆಗಳೂ ಪೂರ್ಣಗೊಂಡು ಪಾವತಿಗೆ ಬಾಕಿ ಉಳಿರುವ ಮೊತ್ತ ₹6 ಸಾವಿರ ಕೋಟಿ ಮೀರಿದೆ.

ಗುತ್ತಿಗೆದಾರರಿಗೆ ಬಾಕಿ ಇರುವ ಈ ಬೃಹತ್‌ ಮೊತ್ತದಲ್ಲಿ ಅರ್ಧದಷ್ಟನ್ನು ಕೂಡಲೇ ಪಾವತಿಸುವ ಶಕ್ತಿ ಬಿಬಿಎಂಪಿಗೆ ಇದೆ. ಆದರೆ, ತನಿಖೆಗಳ ಆದೇಶ ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ.

ಬಿಬಿಎಂಪಿ ಅನುದಾನದಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳಿಗೆ 2021ರಿಂದ ಪಾವತಿ ಬಾಕಿ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ಕಾಮಗಾರಿಗಳಿಗೆ 2023ರಿಂದ ಪಾವತಿ ಮಾಡಬೇಕಿದೆ. ಇವೆಲ್ಲ ಕಾಮಗಾರಿಗಳಿಗೆ ಬಿಲ್‌ನ ಅಂತಿಮ ಹಂತವಾದ ಸಿಬಿಆರ್‌ (ಸೆಂಟ್ರಲ್‌ ಬಿಲ್‌ ರಿಜಿಸ್ಟ್ರರ್‌) ಸಂಖ್ಯೆ, ದಿನಾಂಕ ನಮೂದಾಗಿದ್ದರೂ ಪಾವತಿ ಬಾಕಿ ಇದೆ.

‘ಬಿಬಿಎಂಪಿಯಲ್ಲಿ ಸುಮಾರು ₹3 ಸಾವಿರ ಕೋಟಿಗೂ ಹೆಚ್ಚು ಹಣ ಇದೆ. ₹6 ಸಾವಿರ ಕೋಟಿ ಬಾಕಿಯಲ್ಲಿ ಬಹುತೇಕ ಅರ್ಧದಷ್ಟನ್ನು ಕೂಡಲೇ ಬಿಡುಗಡೆ ಮಾಡಬಹುದು. ಪಾಲಿಕೆ ನಿರ್ವಹಣೆಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಏಕೆಂದರೆ, ಆರ್ಥಿಕ ವರ್ಷದಲ್ಲಿ ಇನ್ನೂ ಏಳು ತಿಂಗಳು ಬಾಕಿ ಉಳಿದಿರುವುದರಿಂದ ಆದಾಯ ಸಂಗ್ರಹವಾಗುತ್ತದೆ’ ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳುತ್ತಾರೆ.

‘ಬಿಬಿಎಂಪಿ ಮುಖ್ಯ ಆಯುಕ್ತರು ಸೇರಿದಂತೆ ಎಲ್ಲರಿಗೂ ಗುತ್ತಿಗೆದಾರರ ಸಂಕಷ್ಟದ ಅರಿವಿದೆ. ಆದರೆ, ಕೆಲವು ಕಾಮಗಾರಿಗಳು ವಾಸ್ತವದಲ್ಲಿ ಆಗಿಲ್ಲ. ಹೀಗಾಗಿ ಎಲ್ಲರ ಮೇಲೆ ಅನುಮಾನ ಬಂದಿದೆ. ಆದ್ದರಿಂದ ತನಿಖೆ ನಡೆದ ಮೇಲೆಯೇ ಎಲ್ಲರಿಗೂ ಹಣ’ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.

‘ಕೇಂದ್ರ, ರಾಜ್ಯ ಸರ್ಕಾರಗಳು ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕು. ಬಿಬಿಎಂಪಿಯಲ್ಲಿರುವ ಹಣವನ್ನೂ ಬಿಡುಗಡೆ ಮಾಡಿದರೆ ಗುತ್ತಿಗೆದಾರರ ಸಮಸ್ಯೆ ತೀರುತ್ತದೆ’ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಆರ್‌. ರಮೇಶ್‌ ಹೇಳಿದರು.

‘ಕಾಮಗಾರಿಗಳ ನೈಜತೆ ಬಗ್ಗೆ ವರದಿ ನೀಡಲು ಸರ್ಕಾರ ನಾಲ್ಕು ಎಸ್ಐಟಿಗಳನ್ನು ರಚನೆ ಮಾಡಿದೆ. ಇವುಗಳು ವರದಿ ನೀಡಿದ ಮೇಲೆ ಹಣ ಬಿಡುಗಡೆ ಮಾಡುವುದಾಗಿ ಹೇಳಲಾಗಿದೆ. ಆದರೆ, 2019ರಲ್ಲಿ ಮಾಡಿರುವ ಕಾಮಗಾರಿಗಳ ನೈಜತೆಯನ್ನು ಈಗ ಹೇಗೆ ಪರಿಶೀಲಿಸಲಾಗುತ್ತದೆ. ಕಾಮಗಾರಿ ಮುಗಿದ ಮೇಲೆ ಒಂದು ವರ್ಷ ಮಾತ್ರ ‌ದೋಷ ಹೊಣೆಗಾರಿಗೆ ಅವಧಿ (ಡಿಎಲ್‌ಪಿ) ಇರುತ್ತದೆ. ನಂತರ ಗುತ್ತಿಗೆದಾರರಿಗೆ ಅದರ ಹೊಣೆ ಇರುವುದಿಲ್ಲ. ಆದರೂ ಹೇಗೆ ತಪಾಸಣೆ ಮಾಡುತ್ತಾರೆ’ ಎಂದು ಗುತ್ತಿಗೆದಾರರು ಪ್ರಶ್ನಿಸುತ್ತಿದ್ದಾರೆ.

ಕೆಆರ್‌ಐಡಿಎಲ್‌ ಬಿಲ್‌ ಬಾಕಿ: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳ ಬಗ್ಗೆ ತಕರಾರಿದ್ದು, ಸಿಬಿಆರ್‌ ಆಗಿದ್ದರೂ 2018ರಿಂದ ಕೆಲವು ಬಿಲ್‌ ಪಾವತಿಯಾಗಿಲ್ಲ. ಇಂತಹ ಸಮಸ್ಯೆಗಳ ಬಿಲ್‌ ಮೊತ್ತ ₹65.56 ಕೋಟಿಯಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT