ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ 73, 74ನೇ ತಿದ್ದುಪಡಿ; ಏಕರೂಪದ ನಿರ್ವಹಣೆ ಅಗತ್ಯ

‘ಸಿವಿಕ್‌’ ಸಂಘಟನೆ ವತಿಯಿಂದ ಸಮಾಲೋಚನಾ ಸಭೆ
Last Updated 28 ಜುಲೈ 2018, 11:10 IST
ಅಕ್ಷರ ಗಾತ್ರ

ಬೆಂಗಳೂರು: ‘ಪಂಚಾಯತ್‌ರಾಜ್‌ ಮತ್ತು ನಗರಾಡಳಿತ ಸಂಸ್ಥೆಗಳ ರಚನೆಗಳಿಗೆ ಸಂಬಂಧಿಸಿದ ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಅಂಶಗಳನ್ನು ಏಕರೂಪದ ಚೌಕಟ್ಟಿನಲ್ಲಿ ಕೊಂಡೊಯ್ಯಬೇಕಿದೆ’ ಎಂದು ಹಿರಿಯ ರಾಜಕಾರಣಿ ಮಣಿಶಂಕರ್ ಅಯ್ಯರ್‌ ಹೇಳಿದರು.

ನಗರದ ‘ಸಿವಿಕ್‌’ (ಸಿಟಿಝನ್ಸ್‌ ವಾಲಂಟರಿ ಇನಿಷಿಯೇಟಿವ್‌ ಫಾರ್‌ ದಿ ಸಿಟಿ) ಸಂಘಟನೆ ಆಶ್ರಯದಲ್ಲಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡ ಸಂವಿಧಾನದ 74ನೇ ತಿದ್ದುಪಡಿಯ 25 ವರ್ಷಗಳು; ಕಳೆದ ಅವಧಿ ಹಾಗೂ ಭವಿಷ್ಯದ ಕುರಿತ ಸಮಾಲೋಚನಾ ಸಭೆಯಲ್ಲಿ ಶನಿವಾರ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವದ ಅಸ್ತಿತ್ವ ಗ್ರಾಮಗಳಲ್ಲಿದೆ. ಗ್ರಾಮಗಳ ಆಡಳಿತ ಬಲವರ್ಧನೆಗೆ ಆದ್ಯತೆ ನೀಡಬೇಕು ಎಂದು ಮಹಾತ್ಮ ಗಾಂಧೀಜಿ ಅವರು ಹೇಳಿದ್ದರು. ಆದರೆ, ಸಂವಿಧಾನದ ಮೂಲ ಕರಡಿನಲ್ಲಿ ಈ ಅಂಶವೇ ಇರಲಿಲ್ಲ. ಈ ಕರಡಿನ ಪರಿಶೀಲನೆ ಸಂದರ್ಭ ಅಂದಿನ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್‌ ಈ ಬಗ್ಗೆ ಪ್ರಶ್ನಿಸಿದರು. ಮತ್ತೆ ಗ್ರಾಮೀಣ ಆಡಳಿತದ ಬಗ್ಗೆ ಅಂಶಗಳನ್ನು ಸೇರಿಸಲಾಯಿತು. ಇಂದು ಎರಡೂ ತಿದ್ದುಪಡಿಗಳನ್ನು ಪರಸ್ಪರ ಜೋಡಿಸಿ ಕಾರ್ಯನಿರ್ವಹಿಸಬೇಕಿದೆ’ ಎಂದರು.

ಗ್ರಾಮಸ್ವರಾಜ್ಯ ವಿಚಾರದಲ್ಲಿ ಕರ್ನಾಟಕ ಸಾಕಷ್ಟು ಹೆಜ್ಜೆ ಮುಂದಿದೆ. ಸ್ಥಳೀಯ ಸರ್ಕಾರಗಳನ್ನು ರೂಪಿಸುವಲ್ಲಿ ಕರ್ನಾಟಕ ಸರಿಯಾದ ಪ್ರದೇಶ. ಆದರೆ, ಈಗಿನ ಪಂಚಾಯಿತಿ ವ್ಯವಸ್ಥೆಯಲ್ಲೇ ಹಾಸುಹೊಕ್ಕಾಗಿರುವ ಭ್ರಷ್ಟಾಚಾರ, ಅಸಮಾನತೆಗಳನ್ನು ನೋಡಿದರೆ ಆತಂಕವೆನಿಸುತ್ತಿದೆ’ ಎಂದರು.

‘ಸರ್ಕಾರೇತರ ಸಂಘಟನೆಗಳು ಮತ್ತು ಅಧಿಕಾರಶಾಹಿ ವ್ಯವಸ್ಥೆ ಮಧ್ಯೆ ಅಪವಿತ್ರ ಮೈತ್ರಿ ಇದೆ. ಅಧಿಕಾರಿಗಳ ಕಾರ್ಯಕ್ಷಮತೆ ಬಗ್ಗೆ ಎನ್‌ಜಿಒಗಳು ಶಿಫಾರಸು ಮಾಡುವುದು, ಅದಕ್ಕೆ ಪ್ರತಿಯಾಗಿ ಅಧಿಕಾರಿಗಳು ಹೊಸ ಯೋಜನೆಯನ್ನು ಅವರಿಗೆ (ಎನ್‌ಜಿಒಗಳಿಗೆ) ನೀಡುವುದು ನಡೆದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತೀಯ ಸಮಾಜ ವಿಜ್ಞಾನ ಸಂಸ್ಥೆಯ ನಿರ್ದೇಶಕ ಜಾರ್ಜ್‌ ಮ್ಯಾಥ್ಯೂ ಮಾತನಾಡಿ, ‘ಸದೃಢ ಸ್ಥಳೀಯ ಸರ್ಕಾರ ರಚನೆಯೇ ಮುಂದಿನ ಭವಿಷ್ಯ. ನವದೆಹಲಿಯಲ್ಲಿ ಸ್ಥಳೀಯ ಸರ್ಕಾರ ಸಚಿವಾಲಯ ಸ್ಥಾಪನೆಗೊಳ್ಳಬೇಕು’ ಎಂದ ಅವರು, ‘ನಗರ ಪ್ರದೇಶಗಳಲ್ಲಿ ಜನಸಾಮಾನ್ಯನ ದ್ವನಿಗೆ ಬೆಲೆ ಇಲ್ಲವಾಗಿದೆ. ಕಂಪೆನಿಗಳು, ಕಾರ್ಪೊರೇಟ್‌ ಶಕ್ತಿಗಳು ಇಡೀ ವ್ಯವಸ್ಥೆಯನ್ನು ನಿಯಂತ್ರಿಸುತ್ತಿವೆ. ಒಟ್ಟಾರೆ ಮಾಫಿಯಾ ಶಕ್ತಿ ಈ ಎಲ್ಲ ವ್ಯವಸ್ಥೆಯ ಹಿಂದೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಸಿವಿಕ್‌ ಸಂಘಟನೆಯ ಟ್ರಸ್ಟಿ ಕಾತ್ಯಾಯಿನಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಮಾಜಿ ನಿರ್ದೇಶಕ ಡಾ.ರಘುನಂದನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT