ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಷ್ಪಪ್ರಿಯರ ಸೆಳೆಯಲು ಲಾಲ್‌ಬಾಗ್‌ನಲ್ಲಿ ಸಿದ್ಧತೆ

ಡಾ.ರಾಜ್, ಪುನೀತ್‌ ರಾಜ್‌ಕುಮಾರ್ ಪರಿಕಲ್ಪನೆಯ ವಿಶೇಷ ಫಲಪುಷ್ಪ ಪ್ರದರ್ಶನಕ್ಕೆ ತಯಾರಿ
Last Updated 1 ಆಗಸ್ಟ್ 2022, 21:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿಲಿಕಾನ್‌ ಸಿಟಿ’ಯಲ್ಲಿನ ಪ್ರೇಮಿಗಳ ನೆಚ್ಚಿನ ತಾಣ, ವಾಯುವಿಹಾರಿಗಳ ಸ್ವರ್ಗ ಲಾಲ್‌ಬಾಗ್‌ ಈ ವರ್ಷದ ಫಲಪುಷ್ಪ ಪ್ರದರ್ಶನಕ್ಕೆ ಅಣಿಯಾಗುತ್ತಿದೆ. ನಾಡಿನ ಪುಷ್ಪಪ್ರಿಯರನ್ನು ಸೆಳೆಯಲು ಕಾರ್ಮಿಕರು
ಶ್ರಮಿಸುತ್ತಿದ್ಧಾರೆ.

ಕನ್ನಡ ಚಿತ್ರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿರುವ ನಟರಾದ ದಿವಂಗತ ಡಾ.ರಾಜ್‌ಕುಮಾರ್ ಮತ್ತು ಪುನೀತ್‌ ರಾಜ್‌ಕುಮಾರ್ ಅವರಿಗೆ ಈ ವರ್ಷ ಪುಷ್ಪ ಗೌರವ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಮಳೆಯಿಂದ ಲಾಲ್‌ಬಾಗ್‌ ಹಸಿರಾಗಿದ್ದು, ಸಹಜವಾಗಿಯೇ ತನ್ನ ಸೌಂದರ್ಯ ಹೆಚ್ಚಿಸಿಕೊಂಡಿದೆ. ಕೋವಿಡ್‌ ಸಾಂಕ್ರಾಮಿಕದ ಬಳಿಕ ಜನಜೀವನ ಸಹಜ ಸ್ಥಿತಿಗೆ ಮರಳಿರುವ ಈ ಹೊತ್ತಿನಲ್ಲಿ 10 ದಿನಗಳ ಕಾಲ ಪುಷ್ಪರಾಶಿಯ ದರ್ಶನಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇದೇ 5ರಿಂದ 15ರ ತನಕ ಲಾಲ್‌ಬಾಗ್‌ನಲ್ಲಿ ಪುಷ್ಪ ವೈಭವ ಮನೆ ಮಾಡಿರಲಿದೆ.

ತೋಟಗಾರಿಕೆ ಇಲಾಖೆ, ಮೈಸೂರು ಉದ್ಯಾನ ಕಲಾ ಸಂಘವು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿ
ಕೊಂಡಿರುವ 212ನೇ ಫಲಪುಷ್ಪ ಪ್ರದರ್ಶನ ಇದಾಗಿದೆ. ಲಾಲ್‌ಬಾಗ್‌ ಉದ್ಯಾನದ ಗಾಜಿನ ಮನೆಯಲ್ಲಿ ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ರ ಹೂವಿನ ಪ್ರತಿಕೃತಿ ರೂಪಿಸಲಾಗುತ್ತಿದೆ.

ಗಾಜನೂರಿನಲ್ಲಿರುವ ರಾಜ್‌ಕುಮಾರ್ ಅವರ ಪೂರ್ವಜರ ಮನೆ, ಮೈಸೂರಿನ ಶಕ್ತಿಧಾಮದ ಮಾದರಿಗಳು ಪುಷ್ಪಗಳಲ್ಲಿ ಅರಳಲಿವೆ.ಕಬ್ಬನ್ ಪಾರ್ಕ್‌, ಊಟಿಯ ಖಾಸಗಿ ಸಸ್ಯತೋಟಗಳು ಸೇರಿ ವಿದೇಶದಿಂದ ಬರುವ ಬಗೆಬಗೆಯ ತರಹೇವಾರಿ ಆಲಂಕಾರಿಕ ಪುಷ್ಪ ಬಳಸಲಾಗುವುದು ಎಂದು ಲಾಲ್‌ಬಾಗ್‌ ಉಪನಿರ್ದೇಶಕಿ ಕುಸಮಾ ಮಾಹಿತಿ ನೀಡಿದರು

ಸುಮಾರು ₹ 30 ಲಕ್ಷ ವೆಚ್ಚದಲ್ಲಿ ಬೇಡರ ಕಣ್ಣಪ್ಪ ಪರಿಕಲ್ಪನೆಯ ’ವರ್ಟಿಕಲ್ ವಾಲ್‌‘ ಮಾಡಿ, ಮೆಗಾ ಕ್ಯಾಮೆರಾ ಸ್ಥಾಪಿಸಲಾಗುತ್ತಿದೆ ಎಂದು ’ಭಾಗ್ಯಲಕ್ಷ್ಮಿ ವರ್ಟಿಕಲ್‌ ವಾಲ್‌‘ನ ಟೆಕ್ನಿಕಲ್ ಮುಖ್ಯಸ್ಥ ಶಿವರಾಮ ರೆಡ್ಡಿ ಮಾಹಿತಿ ನೀಡಿದರು.

ಗಾಜಿನ ಮನೆ ಆವರಣದಲ್ಲಿ ಪುನೀತ್‌ ರಾಜ್‌ಕುಮಾರ್, ರಾಜ್‌ ಕುಮಾರ್, ರಾಘವೇಂದ್ರ ಸ್ವಾಮಿ, ಬೇಡರ ಕಣ್ಣ‍ಪ್ಪ, ರಣಧೀರ ಕಂಠೀರವ ಎಲ್ಲರ ವಿಶೇಷ ಪ್ರತಿಮೆ ಸ್ಥಾಪಿಸಿ ಪುಷ್ಪಾಲಂಕಾರ ಮಾಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದು ’ಸ್ನೀಲ್ ಫ್ಲವರ್ಸ್‌‘ನ ವ್ಯವಸ್ಥಾಪಕ ಸತ್ಯ ಅಗರ್‌ವಾಲ್‌ ತಿಳಿಸಿದರು.

ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ

ರಜೆ ದಿನಗಳಲ್ಲಿ ₹ 100 ಮತ್ತು ಇತರೆ ದಿನಗಳಲ್ಲಿ ₹80, ಮಕ್ಕಳಿಗೆ ₹ 30 ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ. 1–10ನೇ ತರಗತಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT