ಶುಕ್ರವಾರ, ಮೇ 27, 2022
22 °C
ಪ್ರಯಾಣಿಕರ ಪರದಾಟ

ಜೆ.ಸಿ. ರಸ್ತೆಯಲ್ಲಿ 8 ಅಡಿ ಆಳದ ಗುಂಡಿ: ಸಂಚಾರ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಜೆ.ಸಿ. ರಸ್ತೆಯ ಟೌನ್‌ಹಾಲ್ ಬಳಿ ಗುರುವಾರ ಆಳವಾದ ಗುಂಡಿ ಬಿದ್ದಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು.

ರಸ್ತೆಯ ಮಧ್ಯದಲ್ಲಿಯೇ ಸುಮಾರು ಎಂಟು ಅಡಿ ಆಳದ ಗುಂಡಿ ದಿಢೀರ್‌ ಸೃಷ್ಟಿಯಾಗಿದ್ದರಿಂದ ಸುತ್ತಮುತ್ತ ಪ್ರದೇಶದಲ್ಲಿ ಹಲವು ಗಂಟೆಗಳ ಕಾಲ ವಾಹನ ಸವಾರರು ಪರದಾಡಬೇಕಾಯಿತು. ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಎಂಜಿನಿಯರ್‌ಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.

ಆಳವಾದ ಗುಂಡಿಗೆ ಖಚಿತವಾದ ಕಾರಣಗಳು ತಿಳಿದು ಬಂದಿಲ್ಲ. ಆದರೆ, ನೀರು ಬಸಿದ ಪರಿಣಾಮ ರಸ್ತೆ ಕೆಳಗಿನ ಮಣ್ಣು ಸಡಿಲಗೊಂಡಿರಬಹುದು. ಇದರಿಂದಾಗಿ, ದಿಢೀರನೆ ಗುಂಡಿ ಸೃಷ್ಟಿಯಾಗಿರುವ ಸಾಧ್ಯತೆಗಳಿವೆ ಎಂದು ಎಂಜಿನಿಯರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ಇಂತಹ ಸಮಸ್ಯೆಗಳನ್ನು ಸುಲಭವಾಗಿ ಪತ್ತೆ ಮಾಡಲು ಸಾಧ್ಯವಿಲ್ಲ. ಇದು ಹಳೆಯ ರಸ್ತೆ. 3 ರಿಂದ 4 ಅಡಿಗಳಷ್ಟು ಕೆಳಗೆ ನೀರು ಬಸಿದಿರುವ ಸಾಧ್ಯತೆ ಇರುವುದರಿಂದ ಪತ್ತೆ ಮಾಡುವುದು ಕಷ್ಟಸಾಧ್ಯ ಎಂದು ತಿಳಿಸಿದ್ದಾರೆ.

 ರಸ್ತೆ ಗುಣಮಟ್ಟ ಕಾಪಾಡಿಲ್ಲ ಎನ್ನುವ ಆರೋಪಗಳನ್ನು ತಳ್ಳಿ ಹಾಕಿರುವ ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್‌, ‘ಈ ರಸ್ತೆ ಉತ್ತಮ ಸ್ಥಿತಿಯಲ್ಲಿತ್ತು. ಒಂದು ವರ್ಷದ ಹಿಂದೆಯೇ ದುರಸ್ತಿ ಮಾಡಿ ಡಾಂಬರೀಕರಣ ಮಾಡಲಾಗಿತ್ತು. ಈಗ ಬಿದ್ದಿರುವ ಗುಂಡಿಯನ್ನು ಶೀಘ್ರ ದುರಸ್ತಿ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.