ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾನ್ವೆಂಟ್‌ನಂತೆ ಹೈಟೆಕ್‌ ಆದ ಸರ್ಕಾರಿ ಶಾಲೆ

ಬ್ಯಾಟರಾಯನಪುರದ ‘ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಇಂದು ಲೋಕಾರ್ಪಣೆ
Published : 26 ಸೆಪ್ಟೆಂಬರ್ 2024, 1:14 IST
Last Updated : 26 ಸೆಪ್ಟೆಂಬರ್ 2024, 1:14 IST
ಫಾಲೋ ಮಾಡಿ
Comments

ಬೆಂಗಳೂರು: ಎಂಟು ದಶಕಗಳ ಹಿಂದೆ ಸ್ಥಾಪನೆಯಾದ ಬ್ಯಾಟರಾಯನಪುರದ ‘ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ಯು ಕಾನ್ವೆಂಟ್‌ಗಳನ್ನು ಮೀರಿಸುವಂತೆ ಹೈಟೆಕ್‌ ಆಗಿ ನಿರ್ಮಾಣಗೊಂಡಿದೆ. ದಾನಿಗಳ ನೆರವಿನಿಂದ ಪುನರ್‌ನಿರ್ಮಾಣಗೊಂಡಿರುವ ಈ ಶಾಲೆ ಸೆ.26ರಂದು ಲೋಕಾರ್ಪಣೆಗೊಳ್ಳಲಿದೆ.

ಸ್ಥಳೀಯ ಶಾಸಕರೂ ಆಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಉದ್ಘಾಟಿಸಲಿದ್ದಾರೆ.

ಸ್ವಾತಂತ್ರ್ಯಪೂರ್ವದ ಶಾಲೆ: ಊರಿನ ಹಿರಿಯರ ಮುತುವರ್ಜಿಯಿಂದಾಗಿ 1945ರಲ್ಲಿ ಶಾಲೆ ಆರಂಭವಾಗಿತ್ತು. ಆಗ 22 ಮಕ್ಕಳು ಇದ್ದರು. ಬ್ಯಾಟರಾಯನಪುರದ ಸುತ್ತಮುತ್ತ ಬೇರೆ ಯಾವುದೇ ಶಾಲೆ ಇಲ್ಲದ ಕಾರಣ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಾ ಹೋಗಿತ್ತು. ಈ ಶಾಲೆಯಲ್ಲಿ ವರ್ಷಕ್ಕೆ 600ರಿಂದ 700 ಮಕ್ಕಳು ಕಲಿಯುತ್ತಿದ್ದರು. ಕಾಲಾನಂತರದಲ್ಲಿ ಸುತ್ತಮುತ್ತ ಖಾಸಗಿ ಶಾಲೆಗಳು ಆರಂಭವಾದ ಮೇಲೆ, ಮಕ್ಕಳ ಸಂಖ್ಯೆ ಇಳಿಮುಖವಾಗತೊಡಗಿತ್ತು. ಕಟ್ಟಡ ಹಳತಾಗಿ ಶಿಥಿಲವಾಗಿತ್ತು.

ದತ್ತು ಸ್ವೀಕಾರ: ವಿದ್ಯಾಶಿಲ್ಪ್‌ ಕಲ್ಯಾಣನಿಧಿ ಟ್ರಸ್ಟ್‌ 2022ರಲ್ಲಿ ಈ ಶಾಲೆಯನ್ನು ದತ್ತು ತೆಗೆದುಕೊಂಡಿತ್ತು. ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ₹6 ಕೋಟಿ ವೆಚ್ಚದಲ್ಲಿ ಕಟ್ಟಡವನ್ನು ನವೀಕರಿಸಲು ಮುಂದಾಯಿತು. ಅದೇ ವರ್ಷದ ಜೂನ್‌ನಲ್ಲಿ ನೂತನ ಕಟ್ಟಡ ನಿರ್ಮಾಣ ಕಾರ್ಯವೂ ಆರಂಭವಾಗಿತ್ತು. ನೆಲ ಅಂತಸ್ತು ಮತ್ತು ಎರಡು ಮಹಡಿ ಕಟ್ಟಡಗಳಲ್ಲಿ ಕಲಿಕಾ ಕೊಠಡಿಗಳು, ಪ್ರೊಜೆಕ್ಟರ್‌, ಕಂಪ್ಯೂಟರ್, ನಲಿಕಲಿ ಕೊಠಡಿಗಳು ಸೇರಿ ಅತ್ಯಾಧುನಿಕ ಸೌಲಭ್ಯಗಳಿರುವ 17 ಕೊಠಡಿಗಳು ನಿರ್ಮಾಣಗೊಂಡಿವೆ. ಪ್ರತಿ ಮಹಡಿಯಲ್ಲಿ 12 ಶೌಚಾಲಯಗಳಂತೆ ಒಟ್ಟು 36 ಆಧುನಿಕ ಶೌಚಾಲಯಗಳು ನಿರ್ಮಾಣಗೊಂಡಿವೆ. ಅಮೃತಹಳ್ಳಿ ಕಡೆಗೆ ಒಂದು, ಬ್ಯಾಟರಾಯನಪುರ ಕಡೆಗೆ ಒಂದು ಪ್ರವೇಶದ್ವಾರಗಳು ನಿರ್ಮಾಣವಾಗಿವೆ. 

270 ವಿದ್ಯಾರ್ಥಿಗಳು: 1ರಿಂದ 8ನೇ ತರಗತಿವರೆಗೆ ಸದ್ಯ 140 ಬಾಲಕರು, 130 ಬಾಲಕಿಯರು ಸೇರಿ 270 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ‘ಕಾಮಗಾರಿ ಆರಂಭವಾದ ನಂತರ ವಿದ್ಯಾರ್ಥಿಗಳನ್ನು ಆಡಿಟೋರಿಯಂ ಮತ್ತು ಹಿಂದೆ ಇರುವ ಹೆಚ್ಚುವರಿ ಕೊಠಡಿಗಳಲ್ಲಿ ಕೂರಿಸಿ ಪಾಠ ಮಾಡಲಾಗುತ್ತಿತ್ತು. ಗುರುವಾರ ಹೊಸ ಕಟ್ಟಡ ಉದ್ಘಾಟನೆಗೊಂಡ ಬಳಿಕ ಮಕ್ಕಳು ನೂತನ ಕೊಠಡಿಗಳಿಗೆ ಸ್ಥಳಾಂತರಗೊಳ್ಳಲಿದ್ದಾರೆ’ ಎಂದು ಮುಖ್ಯಶಿಕ್ಷಕ (ಪ್ರಭಾರ) ರವಿಕುಮಾರ್ ಮಾಹಿತಿ ನೀಡಿದರು.

ಸದ್ಯ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಬಹುತೇಕರು ಹೊರಜಿಲ್ಲೆ, ಹೊರರಾಜ್ಯದವರಾಗಿದ್ದಾರೆ. ವಿಜಯಪುರ, ರಾಯಚೂರು, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹಾಗೂ ಉತ್ತರ ಪ್ರದೇಶ, ಆಂಧ್ರ ಪ್ರದೇಶ ಸೇರಿ ವಿವಿಧ ರಾಜ್ಯಗಳಿಂದ ದುಡಿಯಲು ಬಂದ ಕಾರ್ಮಿಕರ ಮಕ್ಕಳೇ ಇಲ್ಲಿ ವಿದ್ಯಾರ್ಥಿಗಳಾಗಿದ್ದಾರೆ ಎಂದು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮಣಮೂರ್ತಿ ತಿಳಿಸಿದರು.

ಶಿಕ್ಷಣ ಇಲಾಖೆಯ ಮೇಲಧಿಕಾರಿಗಳ ಮುತುವರ್ಜಿ, ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ, ದಾನಿಗಳ ಕೊಡುಗೆಯಿಂದ ಅತ್ಯುತ್ತಮ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ವಿದ್ಯಾರ್ಥಿಗಳಿಗೆ ಆಧುನಿಕ ಸೌಲಭ್ಯ ದೊರೆಯಲಿದೆ ಎಂದು ತಾಲ್ಲೂಕು ದೈಹಿಕ ಪರಿವೀಕ್ಷಕ ಗಂಗಪ್ಪ ಮಲಗಣ್ಣ ವಿವರ ನೀಡಿದರು.

ಉದ್ಘಾಟನೆಗೊಳ್ಳಲಿರುವ ಬ್ಯಾಟರಾಯನಪುರದ ‘ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ಯ ಕಟ್ಟಡ
ಉದ್ಘಾಟನೆಗೊಳ್ಳಲಿರುವ ಬ್ಯಾಟರಾಯನಪುರದ ‘ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ಯ ಕಟ್ಟಡ

ದಿವಂಗತ ಕಮಲಾಕರ್‌ ಮುತುವರ್ಜಿ ಬ್ಯಾ

ಟರಾಯನಪುರ ಸೇರಿದಂತೆ ಸುತ್ತಲಿನ ಎಲ್ಲ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂಬ ಕನಸು ಹೊತ್ತಿದ್ದ ಕಮಲಾಕರ್‌ ಯಲಹಂಕ ಕ್ಷೇತ್ರದ ಶಿಕ್ಷಣಾಧಿಕಾರಿಯಾಗಿ ಬಂದಿದ್ದರು. ವಿದ್ಯಾಶಿಲ್ಪ್‌ ಕಲ್ಯಾಣನಿಧಿ ಟ್ರಸ್ಟ್‌ ಅನ್ನು ಸಂಪರ್ಕಿಸಿದ್ದರು. ಅದರ ಮುಖ್ಯಸ್ಥರಾದ ದಯಾನಂದ ಪೈ ಅವರಿಗೆ ಮನವರಿಕೆ ಮಾಡಿ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ ಈ ಶಾಲೆಯನ್ನು ಟ್ರಸ್ಟ್‌ನವರು ದತ್ತು ತೆಗೆದುಕೊಳ್ಳುವಂತೆ ಮಾಡಿದ್ದರು. ಅದರ ಫಲವನ್ನು ನೋಡುವ ಮೊದಲೇ ಇಹಲೋಕ ತ್ಯಜಿಸಿದರೂ ಕಮಲಾಕರ್‌ ಅವರನ್ನು ಶಿಕ್ಷಕರು ಪೋಷಕರು ವಿದ್ಯಾಭಿಮಾನಿಗಳು ತುಂಬು ಹೃದಯದಿಂದ ಸ್ಮರಿಸಿಕೊಳ್ಳುತ್ತಿದ್ದಾರೆ ಎಂದು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಪ್ರಕಾಶ್‌ ಬಿ.ಕೆ. ನೆನಪು ಮಾಡಿಕೊಂಡರು.

ಇಂಗ್ಲಿಷ್‌ ಮಾಧ್ಯಮ ಆರಂಭ

‘ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ಯನ್ನು ‘ನಮ್ಮೂರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ’ಯಾಗಿ ಈಗ ಮೇಲ್ದರ್ಜೆಗೆ ಏರಿಸಲಾಗಿದೆ. ಮುಖ್ಯೋಪಾಧ್ಯಾಯರ ಹುದ್ದೆ ಖಾಲಿ ಇದೆ. ಉಳಿದಂತೆ ಅಗತ್ಯ ಇರುವ 9 ಶಿಕ್ಷಕರು ಇದ್ದಾರೆ. ಈ ವರ್ಷ ಇಂಗ್ಲಿಷ್‌ ಮಾಧ್ಯಮ ಆರಂಭಿಸಲಾಗಿದ್ದು 30 ಮಕ್ಕಳು ಕಲಿಯುತ್ತಿದ್ದಾರೆ. ಇಂಗ್ಲಿಷ್‌ ಮಾಧ್ಯಮ ಆರಂಭಿಸಿದ ಬಳಿಕ ಸ್ಥಳೀಯರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಆರಂಭಿಸಿದ್ದಾರೆ. ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಪ್ರಭಾರ ಮುಖ್ಯೋಪಾಧ್ಯಾಯ ರವಿಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT