ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಉಳಿಸಲು ದ್ವಿಭಾಷಾ ನೀತಿ ಜಾರಿಗೊಳಿಸಿ: ಎಎಪಿ

Published 17 ಮೇ 2024, 16:59 IST
Last Updated 17 ಮೇ 2024, 16:59 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡ ಉಳಿಯಬೇಕಾದರೆ ದ್ವಿಭಾಷಾ ನೀತಿ ಜಾರಿಗೊಳಿಸಬೇಕು. ರಾಜ್ಯದಲ್ಲಿ ಶಿಕ್ಷಣ, ಆಡಳಿತ ಮತ್ತು ಸಾಮಾನ್ಯ ಸಂವಹನದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಕಡ್ಡಾಯ ಭಾಷೆಗಳಾಬೇಕು. ಕನ್ನಡ ಮಾಧ್ಯಮ ಶಾಲೆಗಳ ಗುಣಮಟ್ಟ ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಆಗ್ರಹಿಸಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯ ಘಟಕದ ಉಪಾಧ್ಯಕ್ಷ ಡಾ. ರಮೇಶ್‌ ಬೆಳ್ಳಮ್ಕೊಂಡ, ‘ಕನ್ನಡ ಮಾಧ್ಯಮದಲ್ಲಿ ಓದಿದ ಸಾವಿರಾರೂ ವಿದ್ಯಾರ್ಥಿಗಳು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲೇ ಅನುತ್ತೀರ್ಣಗೊಂಡಿದ್ದಾರೆ. ಈ ವರ್ಷ ಕನ್ನಡ ಮಾಧ್ಯಮ ಶಾಲೆಗಳ ಫಲಿತಾಂಶ ಶೇ 52ರಷ್ಟು ದಾಖಲಾಗಿದೆ. ಶೇ 48ರಷ್ಟು ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ’ ಎಂದು ದೂರಿದರು. 

ಕೊಪ್ಪಳ ಜಿಲ್ಲೆಯೊಂದರಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ 22 ಸಾವಿರ ವಿದ್ಯಾರ್ಥಿಗಳ ಪೈಕಿ 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇದು ಕನ್ನಡ ಶಾಲೆಗಳ ಗುಣಮಟ್ಟ, ಶಿಕ್ಷಕರ ಬೋಧನಾ ಗುಣಮಟ್ಟಗಳ ಬಗ್ಗೆ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ. ಕನ್ನಡ ಶಾಲೆಗಳ ಅಗತ್ಯತೆ ಬಗ್ಗೆ ಪೋಷಕರು ಪ್ರಶ್ನಿಸುವಂತಾಗಿದೆ. ರಾಜ್ಯ ಸರ್ಕಾರ ಸಮವಸ್ತ್ರ, ಶೂಗಳು, ಪುಸ್ತಕಗಳು, ಬಿಸಿಯೂಟ, ಮೊಟ್ಟೆ, ಚಿಕ್ಕಿ ಹೀಗೆ ಸಾಕಷ್ಟು ಉಚಿತ ಕೊಡುಗೆಗಳನ್ನು ನೀಡುತ್ತಲೇ ಬಂದಿದೆ. ಆದರೆ, ಏಕೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ಇತರೆ ಅವಕಾಶಗಳು ಹಿಂದಿ ಭಾಷಿಕರಿಗೆ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. ಸದ್ಯ ಯುಪಿಎಸ್‌ಸಿ, ಎಸ್‌ಎಸ್‌ಸಿ ಪರೀಕ್ಷೆಗಳು ಸೇರಿದಂತೆ ಬ್ಯಾಂಕಿಂಗ್‌, ರೈಲ್ವೆ ಪರೀಕ್ಷೆಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ನಡೆಸಲಾಗುತ್ತಿದೆ’ ಎಂದರು.

ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಸುರೇಶ್ ರಾಥೋಡ್, ಇಂಗ್ಲಿಷ್ ಅನ್ನು ದ್ವೇಷಿಸುವುದರಿಂದ ಹಿಂದಿ ಹೇರಿಕೆಯನ್ನು ಸುಗಮಗೊಳಿಸಿದಂತಾಗುತ್ತದೆ. ಹಿಂದಿಯೇತರ ಭಾರತೀಯರನ್ನು ಮತ್ತಷ್ಟು ಕಡೆಗಣಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂಬುದನ್ನು ಕನ್ನಡಿಗರು ಮನಗಾಣಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT