ಅಂಜನಪ್ಪ ಗಾರ್ಡನ್‌ನಲ್ಲಿ ನೆಲೆಸಿದ್ದ ಪರಿಚಯಸ್ಥರೊಬ್ಬರು ಮೃತಪಟ್ಟಿದ್ದರು. ಅವರ ಅಂತಿಮ ದರ್ಶನ ಪಡೆಯಲು ಗುರುವಾರ ಬೆಳಿಗ್ಗೆ 6.30ರ ಸುಮಾರಿಗೆ ಶರತ್ ತೆರಳಿದ್ದರು. ಅಂತಿಮ ದರ್ಶನ ಪಡೆದು, ಸಮೀಪದಲ್ಲಿರುವ ಅಣ್ಣ ಪ್ರಭು ಅವರ ಮನೆಗೆ ಹೋಗಿದ್ದರು. ಆ ನಂತರ ಕೆ.ಪಿ.ಅಗ್ರಹಾರದ ಮನೆಗೆ ಹೋಗುವಾಗ ನಾಲ್ಕೈದು ಮಂದಿ ಶರತ್ ಜತೆ ಜಗಳ ಮಾಡಿದ್ದರು. ಅದು ವಿಕೋಪಕ್ಕೆ ಹೋದಾಗ ಕೋಪಗೊಂಡ ಆರೋಪಿಗಳು, ಶರತ್ ಹೊಟ್ಟೆಯ ಎಡಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟರು ಎಂದು ಪೊಲೀಸರು ಹೇಳಿದರು.