ಬುಧವಾರ, ಆಗಸ್ಟ್ 17, 2022
26 °C
ಆರ್‌.ಆರ್‌.ನಗರ ಉಪ ನೋಂದಣಿ ಕಚೇರಿ

ಎಸಿಬಿ ದಾಳಿ: ₹ 3.48 ಲಕ್ಷ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಥಿರಾಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಖಚಿತ ಮಾಹಿತಿ ಆಧರಿಸಿ ರಾಜರಾಜೇಶ್ವರಿನಗರ ಉಪ ನೋಂದಣಿ ಕಚೇರಿ ಮೇಲೆ ಶುಕ್ರವಾರ ಸಂಜೆ ದಾಳಿಮಾಡಿದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು, ₹ 3.48 ಲಕ್ಷ ನಗದು ಮತ್ತು ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಸಾರ್ವಜನಿಕರು ನೀಡಿದ ಖಚಿತ ಮಾಹಿತಿ ಆಧರಿಸಿ ಎಸಿಬಿ ಅಧಿಕಾರಿಗಳು ದಿಢೀರ್‌ ಕಾರ್ಯಾಚರಣೆ ನಡೆಸಿದ್ದಾರೆ. ಎಸಿಬಿ ಬೆಂಗಳೂರು ನಗರ ಘಟಕದ ಎಸ್‌ಪಿ ಕುಲದೀಪ್‌ ಕುಮಾರ್ ಆರ್. ಜೈನ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ತಡರಾತ್ರಿಯವರೆಗೂ ಶೋಧಕಾರ್ಯ ನಡೆಸಿದರು.

ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಭಾರಿ ಸಂಖ್ಯೆಯ ಜನರು ಉಪ ನೋಂದಣಿ ಕಚೇರಿಯ ಒಳಗಡೆ ಇದ್ದರು. ಕೆಲಸದ ನಿಮಿತ್ತ ಬಂದಿದ್ದವರನ್ನು ಹೊರಕ್ಕೆ ಕಳುಹಿಸಿದ ತನಿಖಾ ತಂಡ, ಸಂಶಯಾಸ್ಪದ ವ್ಯಕ್ತಿಗಳನ್ನು ಸ್ಥಳದಲ್ಲೇ ಇರಿಸಿಕೊಂಡು ವಿಚಾರಣೆ ನಡೆಸಿದರು. ನೋಂದಣಿ ಶುಲ್ಕ ಸಂಗ್ರಹ ಕಡತ ಮತ್ತು ಕಚೇರಿಯಲ್ಲಿ ಲಭ್ಯವಾದ ನಗದು ತಾಳೆ ಮಾಡಿದರು. ಕಚೇರಿ ಸಂಕೀರ್ಣದ ಕೆಲವು ವಾಣಿಜ್ಯ ಮಳಿಗೆಗಳಲ್ಲೂ ಶೋಧ ನಡೆಸಿದರು.

‘ಒಟ್ಟು ₹ 3.48 ಲಕ್ಷ ನಗದು ಉಪ ನೋಂದಣಿ ಅಧಿಕಾರಿ ಕಚೇರಿಯಲ್ಲಿ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ವಶಪಡಿಸಿಕೊಳ್ಳಲಾಗಿದೆ. ಸ್ಥಿರಾಸ್ತಿ ನೋಂದಣಿಗೆ ಸಂಬಂಧಿಸಿದ ದಾಖಲೆಗಳು, ಖಾಲಿ ದಸ್ತಾವೇಜು ಪತ್ರಗಳು ಖಾಸಗಿ ವ್ಯಕ್ತಿಗಳ ಬಳಿ ಪತ್ತೆಯಾಗಿವೆ. ಎಲ್ಲವನ್ನೂ ವಶಕ್ಕೆ ಪಡೆಯಲಾಗಿದೆ’ ಎಂದು ಎಸಿಬಿ ಎಸ್‌ಪಿ ಕುಲದೀಪ್‌ ಕುಮಾರ್ ಜೈನ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.