ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಬಸ್‌ ಹರಿದು ಬಾಲಕಿ ಸಾವು

ಕಿತ್ತೂರ ರಾಣಿ ಚನ್ನಮ್ಮ ವೃತ್ತ ಬಳಿ ಅಪಘಾತ: ಚಾಲಕ ಪರಾರಿ
Last Updated 26 ಮೇ 2022, 19:36 IST
ಅಕ್ಷರ ಗಾತ್ರ

ಬೆಂಗಳೂರು: ಬನಶಂಕರಿ ಸಂಚಾರ ಠಾಣೆ ವ್ಯಾಪ್ತಿಯ ಕಿತ್ತೂರ ರಾಣಿ ಚನ್ನಮ್ಮ ವೃತ್ತದ ಬಳಿ ಗುರುವಾರ ಅಪಘಾತ ಸಂಭವಿಸಿದ್ದು, ಶಾಲೆ ಬಸ್ ಮೈ ಮೇಲೆ ಹರಿದು 16 ವರ್ಷದ ಬಾಲಕಿ ಕೀರ್ತನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

‘ಹಾರೋಹಳ್ಳಿ ನಿವಾಸಿ ಕೀರ್ತನಾ, ಇತ್ತೀಚೆಗಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 70 ಫಲಿತಾಂಶ ಪಡೆದಿದ್ದು, ಕಾಲೇಜೊಂದರಲ್ಲಿ ಪಿ.ಯು. ತರಗತಿ ಪ್ರವೇಶಕ್ಕೆ ಸಿದ್ಧತೆ ನಡೆಸುತ್ತಿದ್ದಳು. ಅಕ್ಕ ಹರ್ಷಿತಾ ಹಾಗೂ ಸ್ನೇಹಿತೆ ಜೊತೆ ಗುರುವಾರ ಬೆಳಿಗ್ಗೆ 9.20ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಬನಶಂಕರಿ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ಹರ್ಷಿತಾ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದಲ್ಲಿ ಅಕ್ಕ ತಂಗಿಯ ನಡುವೆ ಸ್ನೇಹಿತೆ ಕುಳಿತಿದ್ದರು. ಅವರ ಹಿಂದೆ ಕೀರ್ತನಾ ಇದ್ದರು. ಮೂವರು ಒಂದೇ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಅತೀ ವೇಗವಾಗಿ ತೆರಳುತ್ತಿದ್ದ ಡೆಲ್ಲಿ ಪಬ್ಲಿಕ್ ಶಾಲೆ ಬಸ್‌ (ಕೆಎ 51 ಬಿ 3877), ದ್ವಿಚಕ್ರ ವಾಹನಕ್ಕೆ ಗುದ್ದಿತ್ತು. ರಸ್ತೆಗೆ ಬಿದ್ದ ಕೀರ್ತನಾ ಮೇಲೆಯೇ ಬಸ್ಸಿನ ಚಕ್ರ ಹರಿದಿತ್ತು. ತೀವ್ರ ಗಾಯಗೊಂಡು ಕೀರ್ತನಾ ಸ್ಥಳದಲ್ಲೇ ಮೃತಪಟ್ಟರು’ ಎಂದೂ ತಿಳಿಸಿದರು.

‘ಅಪಘಾತದಲ್ಲಿ ಕೀರ್ತನಾಳ ಅಕ್ಕ ಹಾಗೂ ಸ್ನೇಹಿತೆಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್‌ ಅನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಗಾಯಾಳು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಯಾರ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದೂ ಹೇಳಿದರು.

ಕೆಲಸಕ್ಕೆ ಹೊರಟಿದ್ದ ಬಾಲಕಿ: ‘ಕೀರ್ತನಾ ತಂದೆ, ಆಟೊ ಚಾಲಕ. ತಾಯಿ, ಮನೆ ಕೆಲಸ ಮಾಡುತ್ತಿದ್ದರು. ಎಸ್ಸೆಸ್ಸೆಲ್ಸಿ ಮುಗಿದ ನಂತರ ಬಾಲಕಿ, ಪೋಷಕರಿಗೆ ನೆರವಾಗಲೆಂದು ನಾಯಂಡಹಳ್ಳಿಯಲ್ಲಿರುವ ಮಳಿಗೆಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಇನ್ನೊಂದು ಮಳಿಗೆಯಲ್ಲಿ ಅಕ್ಕ ಹರ್ಷಿತಾ ಸಹ ಕೆಲಸ ಮಾಡುತ್ತಿದ್ದಳು. ಇಬ್ಬರೂ ನಿತ್ಯವೂ ಒಟ್ಟಿಗೆ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೋಗಿ ಬರುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಗುರುವಾರವೂ ಹರ್ಷಿತಾ ಹಾಗೂ ಕೀರ್ತನಾ, ಹಾರೋಹಳ್ಳಿಯಿಂದ ನಾಯಂಡನಹಳ್ಳಿಗೆ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಮತ್ತೊಬ್ಬ ಸ್ನೇಹಿತೆಯನ್ನು ಹತ್ತಿಸಿಕೊಂಡಿದ್ದರು’ ಎಂದೂ ಹೇಳಿದರು.

‘ಚನ್ನಮ್ಮ ವೃತ್ತದ ಸರ್ವೀಸ್‌ ರಸ್ತೆ ಮೂಲಕ ದ್ವಿಚಕ್ರ ವಾಹನವು ಹೊರವರ್ತುಲ ರಸ್ತೆಗೆ ಬಂದಿತ್ತು. ಅದೇ ಸಂದರ್ಭದಲ್ಲೇ ಮೇಲ್ಸೇತುವೆಯಲ್ಲಿ ಬಂದಿದ್ದ ಶಾಲಾ ಬಸ್, ಸೇತುವೆಯಿಂದ ಇಳಿಯುತ್ತಿದ್ದಂತೆ ದ್ವಿಚಕ್ರ ವಾಹನಕ್ಕೆ ಗುದ್ದಿತ್ತು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT