ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ಪಲ್ಟಿ; ತುಂಡರಿಸಿದ ಬಾಲಕಿ ಕೈ

ಮೈಸೂರು ರಸ್ತೆಯಲ್ಲಿ ಘಟನೆ; 9 ಪ್ರಯಾಣಿಕರಿಗೆ ಗಾಯ
Last Updated 10 ಆಗಸ್ಟ್ 2019, 9:31 IST
ಅಕ್ಷರ ಗಾತ್ರ

ಬೆಂಗಳೂರು: ನಗರದಿಂದ ಕೊಳ್ಳೆಗಾಲಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದಿದ್ದು, ಬಾಲಕಿ ಸೇರಿ 9 ಪ್ರಯಾಣಿಕರು ಗಾಯಗೊಂಡಿದ್ದಾರೆ.

‘ಮೈಸೂರು ರಸ್ತೆಯ ನೆಕ್ಸಾ ಶೋರೂಮ್ ಸಮೀಪದಲ್ಲಿ ಶುಕ್ರವಾರ ಬೆಳಿಗ್ಗೆ 8.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಅಪಘಾತದಿಂದಾಗಿ ಮೂರುವರೆ ವರ್ಷದ ದಿಯಾಪ್ರಸಾದ್ ಎಂಬಾಕೆಯ ಎಡಗೈ ತುಂಡರಿಸಿದ್ದು, ಜೈನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ’ ಎಂದು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಹೇಳಿದರು.

‘ಚನ್ನಪಟ್ಟಣ ಡಿಪೊಗೆ ಸೇರಿದ್ದ ಬಸ್ಸಿನಲ್ಲಿ 17 ಪ್ರಯಾಣಿಕರು ಇದ್ದರು. ಮೆಟ್ರೊ ಕಂಬಗಳ ಮಧ್ಯೆ ರಸ್ತೆ ವಿಭಜಕ ನಿರ್ಮಾಣ ಮಾಡಲಾಗಿದೆ. ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿದ್ದ ಚಾಲಕ ಶ್ರೀನಿವಾಸ್, ಆ ವಿಭಜಕಕ್ಕೆ ಗುದ್ದಿಸಿದ್ದ. ರಸ್ತೆಯಲ್ಲೇ ಬಸ್‌ ಉರುಳಿಬಿದ್ದಿತ್ತು’ ಎಂದು ವಿವರಿಸಿದರು.

‘ಬಸ್ಸಿನೊಳಗಿದ್ದ ಬಾಲಕಿಯ ಎಡಗೈ ತುಂಡರಿಸಿ, ಕಿಟಕಿಯಿಂದ ಹೊರಗೆ ಹಾರಿ ಬಂದು ರಸ್ತೆಯಲ್ಲಿ ಬಿದ್ದಿತ್ತು. ಬಾಲಕಿಯ ತಾಯಿ ಸೇರಿ ಹಲವು ಪ್ರಯಾಣಿಕರು ಬಸ್ಸಿನೊಳಗೆ ಸಿಲುಕಿಕೊಂಡಿದ್ದರು.ರಕ್ಷಣೆಗೆ ತೆರಳಿದ್ದ ಸಿಬ್ಬಂದಿ ಹಾಗೂ ಸ್ಥಳೀಯರು, ಬಸ್ಸಿನಲ್ಲಿದ್ದವರನ್ನು ಹೊರಗೆ ತಂದು ಆಸ್ಪತ್ರೆಗೆ ಕರೆದೊಯ್ದರು’ ಎಂದು ಹೇಳಿದರು.

‘ಬಾಲಕಿಯ ಕೈಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ’ ಎಂದು ವಿವರಿಸಿದರು.

ಚಾಲಕನ ವಿರುದ್ಧ ಎಫ್‌ಐಆರ್: ‘ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಚಾಲಕ ಶ್ರೀನಿವಾಸ್‌ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಚಾಲಕ ಹಾಗೂ ನಿರ್ವಾಹಕರಿಗೂ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT