ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಿಗೆ ಪ್ರಕರಣ: ಆರೋಪಿ ಜೀವ ಉಳಿಸಿದ ಕಾನ್‌ಸ್ಟೆಬಲ್

ಮೂವರನ್ನು ಬಂಧಿಸಿದ ಪೊಲೀಸರು
Last Updated 12 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ತನ್ನನ್ನು ಬಂಧಿಸಲು ಬಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಬಾವಿಯೊಳಗೆ ಬಿದ್ದ ಆರೋಪಿಯನ್ನು ಯಲಹಂಕದ ಕಾನ್‌ಸ್ಟೆಬಲ್‌ ಶಿವಕುಮಾರ್ ಕಾಪಾಡಿದ್ದಾರೆ.

‘ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಡಿ ಮೂವರನ್ನು ತಮಿಳುನಾಡಿನ ಧರ್ಮಪುರಿಯಲ್ಲಿ ಇತ್ತೀಚೆಗೆ ಬಂಧಿಸಲಾಗಿದೆ. ಆ ಪೈಕಿ ಆರೋಪಿ ಇಮ್ರಾನ್ ಎಂಬಾತನ ಜೀವವನ್ನು ಕಾನ್‌ಸ್ಟೆಬಲ್ ಉಳಿಸಿದ್ದಾರೆ. ಆರೋಪಿಗಳಿಂದ ಚಿನ್ನಾಭರಣ, ಮೊಬೈಲ್, ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ತಿಳಿಸಿದರು.

‘ಮಾರುತಿ ನಗರದಲ್ಲಿ ರೆಡ್ಡಿ ಶೇಖರ್ ಎಂಬುವರನ್ನು ಹಿಂಬಾಲಿಸಿದ್ದ ಆರೋಪಿಗಳು, ಚಾಕುವಿನಿಂದ ಇರಿದು ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಗೋವಿಂದಪುರ ನಿವಾಸಿಗಳು ಎಂಬುದು ತನಿಖೆಯಿಂದ ತಿಳಿಯಿತು. ವಾಸಸ್ಥಳಕ್ಕೆ ಹೋದಾಗ ಆರೋಪಿಗಳು ಕೈಗೆ ಸಿಗಲಿಲ್ಲ.’

‘ತಮಿಳುನಾಡಿನ ಧರ್ಮಪುರಿ ಬಳಿಯ ತೂಪುರು ಗ್ರಾಮಕ್ಕೆ ಆರೋಪಿಗಳು ಹೋಗಿರುವ ಮಾಹಿತಿ ಲಭ್ಯವಾಯಿತು. ಪಿಎಸ್ಐಗಳಾದ ಸುನೀಲ್‌ಕುಮಾರ್, ಹರೀಶ್ ನೇತೃತ್ವದ ತಂಡ, ತೂಪುರು ಗ್ರಾಮಕ್ಕೆ ಹೋಗಿತ್ತು. ತಮಿಳುನಾಡು ಪೊಲೀಸರ ಸಹಾಯದಿಂದ ಮೂವರು ಆರೋಪಿಗಳನ್ನು ಹಿಡಿಯಲು ಮುಂದಾಗಿತ್ತು’ ಎಂದೂ ಹೇಳಿದರು.

‘ಇಬ್ಬರು ಆರೋಪಿಗಳು ಸೆರೆ ಸಿಕ್ಕಿದ್ದರು. ಆರೋಪಿ ಇಮ್ರಾನ್, ತಪ್ಪಿಸಿಕೊಂಡು ಓಡಲಾರಂಭಿಸಿದ್ದ. ಆತನನ್ನು ಪೊಲೀಸರು ಬೆನ್ನಟ್ಟಿದ್ದರು. ಜೋರು ಮಳೆಯಲ್ಲೇ ಕಾರ್ಯಾಚರಣೆ ನಡೆದಿತ್ತು. ಓಡುತ್ತಲೇ ಇಮ್ರಾನ್, ನೀರು ತುಂಬಿದ್ದ ಪಾಳು ಬಾವಿಯೊಳಗೆ ಬಿದ್ದಿದ್ದ. ಮೇಲೆ ಹತ್ತಿ ಬರಲು ಮೆಟ್ಟಿಲು ಸಹ ಇರಲಿಲ್ಲ. ‘ಕಾಪಾಡಿ... ಕಾಪಾಡಿ..’ ಎಂದು ಕೂಗಲಾರಂಭಿಸಿದ್ದ.’

‘ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಬರಲು ಎರಡು ಗಂಟೆ ಬೇಕಾಗಬಹುದೆಂದು ಸಿಬ್ಬಂದಿ ಹೇಳಿದ್ದರು. ಬಾವಿಯಲ್ಲಿ ನೀರು ಹೆಚ್ಚಿದ್ದರಿಂದ ಕೆಳಗೆ ಇಳಿಯದಂತೆ ಸ್ಥಳೀಯರು ಹೇಳಿದ್ದರು. ಅದಕ್ಕೆ ಹೆದರದ ಕಾನ್‌ಸ್ಟೆಬಲ್ ಶಿವಕುಮಾರ್, ತಮ್ಮ ಪ್ರಾಣ ಲೆಕ್ಕಿಸದೇ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಯೊಳಗೆ ಇಳಿದಿದ್ದರು. ನೀರಿನಲ್ಲಿ ಮುಳುಗುತ್ತಿದ್ದ ಆರೋಪಿಯನ್ನು ಮೇಲಕ್ಕೆ ಎತ್ತಿ ತಂದು ಜೀವ ಉಳಿಸಿದರು. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಆರೋಪಿಯನ್ನು ಬೆಂಗಳೂರಿಗೆ ಕರೆತರಲಾಯಿತು’ ಎಂದೂ ಡಿಸಿಪಿ ಬಾಬಾ ತಿಳಿಸಿದರು.

‘ಕಾನ್‌ಸ್ಟೆಬಲ್ ಬಾವಿಗೆ ಇಳಿಯದಿದ್ದರೆ, ಬಾವಿಯೊಳಗೆ ಮುಳುಗಿ ಆರೋಪಿ ಮೃತಪಡುತ್ತಿದ್ದ. ಆ ರೀತಿಯಾಗಿದ್ದರೆ ಕರ್ನಾಟಕ ಪೊಲೀಸರ ಬಗ್ಗೆ ತಮಿಳುನಾಡಿನಲ್ಲಿ ತಪ್ಪು ಸಂದೇಶ ರವಾನೆಯಾಗುತ್ತಿತ್ತು. ಕಾನ್‌ಸ್ಟೆಬಲ್ ಧೈರ್ಯ ಹಾಗೂ ಕರ್ತವ್ಯನಿಷ್ಠೆಯನ್ನು ಮೆಚ್ಚಿ ಬಹುಮಾನ ನೀಡಿ ಸನ್ಮಾನಿಸಲಾಗಿದೆ’ ಎಂದೂ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT