ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರಮ, ಅವಕಾಶದಿಂದ ಸಾಧನೆ ಸಾಧ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಜ್ಞಾನಿ, ಎಂಜಿನಿಯರ್‌ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Published : 26 ಸೆಪ್ಟೆಂಬರ್ 2024, 20:00 IST
Last Updated : 26 ಸೆಪ್ಟೆಂಬರ್ 2024, 20:00 IST
ಫಾಲೋ ಮಾಡಿ
Comments

ಬೆಂಗಳೂರು: ‘ಪ್ರತಿಭೆ ಆನುವಂಶೀಯವಾಗಿ ಬರುವುದಿಲ್ಲ. ಸರಿಯಾದ ಅವಕಾಶ ಮತ್ತು ಸತತ ಪರಿಶ್ರಮದಿಂದ ಸಾಧನೆ ಮಾಡಲು ಸಾಧ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಗುರುವಾರ ನಡೆದ ಕಾರ್ಯಕ್ರಮದಲ್ಲಿ,  2022 ಮತ್ತು 2023ನೇ ಸಾಲಿನ ವಿಜ್ಞಾನಿ ಮತ್ತು ಎಂಜಿನಿಯರ್ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಹಿಂದೆ ಎಲ್ಲರಿಗೂ ಅವಕಾಶ ಸಿಗುತ್ತಿರಲಿಲ್ಲ. ಸಮಾಜದ ತಾರತಮ್ಯ ಅಳಿಯಬೇಕಾದರೆ ಎಲ್ಲ ಜಾತಿ, ಧರ್ಮ, ವರ್ಗಗಳಿಗೆ ಸಮಾನ ಅವಕಾಶ ಸಿಗಬೇಕು. ಅವಕಾಶ ಸಿಕ್ಕಾಗ ಶ್ರಮ ವಹಿಸಿ ಕೆಲಸ ಮಾಡಿದರೆ ಯಾರೂ ಪ್ರಶಸ್ತಿ ಪಡೆಯಬಹುದು ಎಂಬುದಕ್ಕೆ ಇಂದು ಪ್ರಶಸ್ತಿ ಪಡೆದವರಲ್ಲಿ ಗ್ರಾಮೀಣ ಪ್ರದೇಶದವರೂ ಇರುವುದು ಸಾಕ್ಷಿ’ ಎಂದು ವಿವರಿಸಿದರು.

‘ಯಾವುದೇ ದೇಶ ಅಥವಾ ರಾಜ್ಯ ಸರ್ವತೋಮುಖ ಅಭಿವೃದ್ಧಿಯಾಗಬೇಕಿದ್ದರೆ ವಿಜ್ಞಾನ, ತಂತ್ರಜ್ಞಾನಗಳ ಬೆಳವಣಿಗೆ ಅಗತ್ಯ. ಕರ್ನಾಟಕವು ಈ ವಿಚಾರದಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಜನಸಂಖ್ಯೆಯಲ್ಲಿ ವಿಶ್ವದಲ್ಲಿಯೇ ಭಾರತ ಮೊದಲ ಸ್ಥಾನದಲ್ಲಿದ್ದರೂ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ವಿಜ್ಞಾನ ಕಾರಣ’ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಮಾತನಾಡಿ, ‘ಯುವಜನರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ತೆರೆಯಲಾಗುವುದು. ನಗರದಲ್ಲಿ ₹300 ಕೋಟಿ ವೆಚ್ಚದಲ್ಲಿ ವಿಜ್ಞಾನ ನಗರ ಯೋಜನೆ ಆರಂಭಿಸಲಾಗುವುದು. ಅಂತರಿಕ್ಷ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸಲು ರಾಜ್ಯದ 833 ವಸತಿಶಾಲೆಗಳಿಗೆ ದೂರದರ್ಶಕ ನೀಡುವ ಯೋಜನೆ ಚಾಲ್ತಿಯಲ್ಲಿದೆ. ಈ ಯೋಜನೆಯನ್ನು ಎಲ್ಲ ಪ್ರೌಢಶಾಲೆಗಳಿಗೆ ವಿಸ್ತರಿಸಲಾಗುವುದು’ ಎಂದು ತಿಳಿಸಿದರು.

ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಸೌಕರ್ಯಗಳ ಅಭಿವೃದ್ಧಿಗೆ 2023ನೇ ಸಾಲಿನಲ್ಲಿ ₹16.45 ಕೋಟಿ ಅನುದಾನ ನೀಡಲಾಗಿದೆ ಎಂದರು.

ಸರ್‌ ಎಂ. ವಿಶ್ವೇಶ್ವರಯ್ಯ ಹಿರಿಯ ವಿಜ್ಞಾನಿ ರಾಜ್ಯ ಪ್ರಶಸ್ತಿ, ಡಾ. ರಾಜಾರಾಮಣ್ಣ ವಿಜ್ಞಾನಿ ರಾಜ್ಯ ಪ್ರಶಸ್ತಿ, ಸಿ.ವಿ. ರಾಮನ್‌ ಯುವ ವಿಜ್ಞಾನಿ ರಾಜ್ಯ ಪ್ರಶಸ್ತಿ, ಸತೀಶ್‌ಧವನ್‌ ಯುವ ಎಂಜಿನಿಯರ್‌ ರಾಜ್ಯ ಪ್ರಶಸ್ತಿ, ಕಲ್ಪನಾ ಚಾವ್ಲಾ ಮಹಿಳಾ ಯುವ ವಿಜ್ಞಾನಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಲಿನಸ್‌ ಪೌಲಿಂಗ್‌ ಸಂಶೋಧನಾ ಪ್ರಾಧ್ಯಾಪಕ ಸಿ.ಎನ್‌.ಆರ್‌. ರಾವ್‌, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಎ.ಎಸ್‌. ಕಿರಣ್‌ ಕುಮಾರ್‌, ಐಐಎಸ್‌ಸಿ ನಿರ್ದೇಶಕ ಗೋವಿಂದನ್‌ ರಂಗರಾಜನ್‌, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕಾರ್ಯದರ್ಶಿ ಅಶೋಕ್‌ ಎಂ. ರಾಯಚೂರ, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕ್‌ರೂಪ್‌ ಕೌರ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT