ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದರ್ಶನ್‌ಗೆ ಐಷಾರಾಮಿ ಸೇವೆ ಆರೋಪ: ಅನ್ನಪೂರ್ಣೇಶ್ವರಿ ನಗರ ಠಾಣೆ ಸುತ್ತ ಶಾಮಿಯಾನ

ಠಾಣೆಯಲ್ಲಿರುವ ದರ್ಶನ್‌ ಅವರಿಗೆ ಐಷಾರಾಮಿ ಸೇವೆ–ಸಾರ್ವಜನಿಕರ ಆರೋಪ
Published 13 ಜೂನ್ 2024, 16:43 IST
Last Updated 13 ಜೂನ್ 2024, 16:43 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್ ಹಾಗೂ ಇತರರನ್ನು ಅನ್ನಪೂರ್ಣೇಶ್ವರಿನಗರ ಠಾಣೆಯ ಕಟ್ಟಡದಲ್ಲಿ ಇರಿಸಲಾಗಿದ್ದು, ಠಾಣೆ ಸುತ್ತಮುತ್ತ ನಿಷೇಧಾಜ್ಞೆ ಸಹ ಜಾರಿ ಮಾಡಲಾಗಿದೆ. ಜೊತೆಗೆ, ಠಾಣೆಯ ಕಾಂಪೌಂಡ್ ಹಾಗೂ ಪ್ರವೇಶ ದ್ವಾರವನ್ನು ಶಾಮಿಯಾನ ಬಟ್ಟೆಯಿಂದ ಮುಚ್ಚಲಾಗಿದೆ.

‘ಠಾಣೆಯಲ್ಲಿರುವ ದರ್ಶನ್‌ ಅವರಿಗೆ ಐಷಾರಾಮಿ ಸೇವೆ ಒದಗಿಸಲಾಗುತ್ತಿದೆ. ಅವರು ಕೇಳುವ ಊಟವನ್ನೆಲ್ಲ ಪೊಲೀಸರು ತಂದುಕೊಡುತ್ತಿದ್ದಾರೆ. ಜೊತೆಗೆ, ಸೇದಲು ಸಿಗರೇಟ್ ನೀಡುತ್ತಿದ್ದಾರೆ. ಇದನ್ನು ಮರೆಮಾಚಲು ಠಾಣೆಯ ಸುತ್ತಲೂ ಶಾಮಿಯಾನ ಬಟ್ಟೆ ಕಟ್ಟಿದ್ದಾರೆ’ ಎಂದು ಸ್ಥಳೀಯರು ದೂರಿದರು.

ಮಹಜರು ನಡೆಸಲು ಕರೆದೊಯ್ದಿದ್ದ ಸಂದರ್ಭದಲ್ಲಿ ಕೆಲ ಆರೋಪಿಗಳು, ಮೊಬೈಲ್ ಬಳಕೆ ಮಾಡಿದ್ದಾರೆ. ಈ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲೂ ಸೆರೆಯಾಗಿದೆ. ಕೊಲೆ ಪ್ರಕರಣದ ಆರೋಪಿಗಳಿಗೆ ಮೊಬೈಲ್ ನೀಡಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ರೇಣುಕಸ್ವಾಮಿ ತಪ್ಪು ಮಾಡಿದ್ದರೆ ಪೊಲೀಸರಿಗೆ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಂಡಿರುವುದು ದೊಡ್ಡ ತಪ್ಪು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಈ ಘಟನೆಯನ್ನು ಖಂಡಿಸುತ್ತೇವೆ. ಪೊಲೀಸರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು’ ಒತ್ತಾಯಿಸಿದರು.

‘ದರ್ಶನ್‌ ಇರಿಸಿರುವ ಪೊಲೀಸ್‌ ಠಾಣೆಗೆ ಶಾಮಿಯಾನ ಹಾಕಿ ಮುಚ್ಚಿರುವುದು ಖಂಡನೀಯ. ಅಲ್ಲಿ ಮಾಧ್ಯಮಗಳು ಚಿತ್ರೀಕರಣ ಮಾಡದಂತೆ ನಿರ್ಬಂಧ ವಿಧಿಸಿರುವುದು ಸರಿಯಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ಮೃತ ವ್ಯಕ್ತಿಯ ಕುಟುಂಬಕ್ಕೆ ಮಾನವೀಯತೆ ನೆಲೆಯಲ್ಲಿ ಸರ್ಕಾರ ಪರಿಹಾರ ನೀಡಬೇಕು’ ಎಂದರು.

ಸಂಸದೀಯ ಮತ್ತು ಕಾನೂನು ಸಚಿವ ಎಚ್.ಕೆ. ಪಾಟೀಲ, ‘ಪೊಲೀಸ್ ಠಾಣೆಯೊಳಗೆ ಯಾರೇ ಇದ್ದರೂ ಆರೋಪಿಗಳೇ. ನಟ ದರ್ಶನ್ ಅವರಿಗೆ ವಿಶೇಷ ಸೌಲಭ್ಯಗಳನ್ನು ನೀಡಿಲ್ಲ. ಆರೋಪಿಯನ್ನು ವಿಚಾರಣೆ ಮಾಡಲಾಗುತ್ತಿರುವ ಪೊಲೀಸ್ ಠಾಣೆಯನ್ನು ಟೆಂಟ್ ಅಥವಾ ಶಾಮಿಯಾನ ಹಾಕಿ ಮುಚ್ಚುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT