ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೇ ದಾಖಲು

ಸರ್ಕಾರಿ ಆಸ್ಪತ್ರೆಗಳಲ್ಲಿ 1,402 ಹಾಸಿಗೆಗಳು ಖಾಲಿ * ಕೋವಿಡ್‌ ಚಿಕಿತ್ಸೆ ನಿಯಮ ಮಾರ್ಪಾಡು– ಬಿಬಿಎಂಪಿ ಸುತ್ತೋಲೆ
Last Updated 18 ನವೆಂಬರ್ 2020, 21:27 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ರೋಗಿಗಳನ್ನು ಸರ್ಕಾರದ ಅಥವಾ ಬಿಬಿಎಂಪಿ ಶಿಫಾರಸಿನ ಮೇರೆಗೆ ಚಿಕಿತ್ಸೆಗೆ ದಾಖಲಿಸಲು ಸರ್ಕಾರಿ ಆಸ್ಪತ್ರೆ ಅಥವಾ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳನ್ನೇ ಆಯ್ಕೆ ಮಾಡುವಂತೆ ಸೂಚಿಸಿ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸುತ್ತೋಲೆ ಹೊರಡಿಸಿದ್ದಾರೆ.

ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣವೂ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ.ಕೋವಿಡ್‌ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಂಚಿಕೆ ಮಾಡಿರುವ 1,001 ಹಾಸಿಗೆಗಳಲ್ಲಿ 696 ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ ಹಂಚಿಕೆ ಮಾಡಲಾದ 961 ಹಾಸಿಗೆಗಳಲ್ಲಿ 706 ಖಾಲಿ ಇವೆ. ಆದರೂ ಸರ್ಕಾರ ಸೂಚಿಸಿದ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಮೀಸಲಿಟ್ಟ ಹಾಸಿಗೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ಶಿಫಾರಸಿನ ಆಧಾರದಲ್ಲಿ ಚಿಕಿತ್ಸೆ ಪಡೆಯುವ ಕೋವಿಡ್‌ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರದ ಅಂಗಸಂಸ್ಥೆಯಾದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ (ಎಸ್‌ಎಎಸ್‌ಟಿ) ಮರುಪಾವತಿ ಮಾಡುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಖಾಲಿ ಇರುವಾಗಲೂ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್‌ ರೋಗಿಗಳನ್ನು ದಾಖಲು ಮಾಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ಹೊರೆ ಸೃಷ್ಟಿಯಾಗುತ್ತಿದೆ.

ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಕೇಂದ್ರೀಕೃತ ನಿರ್ವಹಣೆ ವ್ಯವಸ್ಥೆ (ಸಿಎಚ್‌ಬಿಎಂಎಸ್‌) ಆಧಾರದಲ್ಲಿ ಕೋವಿಡ್‌ ರೋಗಿಗಳನ್ನು ಚಿಕಿತ್ಸೆಗೆ ದಾಖಲಿಸುವಾಗ ಪಾಲಿಸುತ್ತಿರುವ ನಿಯಮಗಳನ್ನು ಪುನರ್ಪರಿಶೀಲಿಸುವಂತೆ ಕೋರಿ ಎಸ್‌ಎಎಸ್‌ಟಿ ಮುಖ್ಯಸ್ಥರು ಇತ್ತೀಚೆಗೆಸರ್ಕಾರದ ಮುಖ್ಯ ಕಾರ್ಯದರ್ಶಿಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಹಾಗೂ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದರು.

ಸರ್ಕಾರಿ ಆಸ್ಪತ್ರೆಗಳ ಸಾಮಾನ್ಯ ವಾರ್ಡ್‌ಗಳ ಮತ್ತು ಆಮ್ಲಜನಕ ಪೂರಣ ವ್ಯವಸ್ಥೆ ಇರುವ ಎಚ್‌ಡಿ ಘಟಕಗಳ ಹಾಸಿಗೆಗಳನ್ನು ಮಾತ್ರ ಸಿಎಚ್‌ಬಿಎಂಎಸ್‌ ಮೂಲಕ ಕಾಯ್ದಿರಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆಗೆ ಲಭ್ಯ ಇರುವ ಹಾಸಿಗೆಗಳಲ್ಲಿ ಶೇ 90ರಷ್ಟು ಭರ್ತಿ ಆದ ಬಳಿಕ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿನ ಇಂತಹ ಹಾಸಿಗೆಗಳನ್ನು ಕಾಯದರಿಸಬೇಕು. ಆದರೂ, ತೀವ್ರ ನಿಗಾ ಘಟಕ (ಐಸಿಯು) ಅಥವಾ ವೆಂಟಿಲೇಟರ್‌ ಸೌಲಭ್ಯವಿರುವ ಹಾಸಿಗೆಗಳ ಅಗತ್ಯ ಇರುವ ಪ್ರಕರಣಗಳಲ್ಲಿ ಗೊತ್ತುಪಡಿಸಲಾದ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದಕ್ಕೆ ಬೇಕಾದರೂ ರೋಗಿಗಳನ್ನು ದಾಖಲಿಸಲು ಅವಕಾಶ ಕಲ್ಪಿಸಬೇಕು ಎಂದು ಎಸ್‌ಎಎಸ್‌ಟಿ ಮುಖ್ಯಸ್ಥರು ಸಲಹೆ ನೀಡಿದ್ದರು.

ಕೋವಿಡ್‌ ನಿರ್ವಹಣೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪರಾಮರ್ಶೆ ಸಭೆಯಲ್ಲೂ ಈ ಬಗ್ಗೆ ವಿಸ್ತೃತ ಚರ್ಚೆ ನಡೆದಿತ್ತು. ಎಸ್‌ಎಎಸ್‌ಟಿ ನೀಡಿರುವ ಸಲಹೆಗಳನ್ನು ಜಾರಿಗೊಳಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಕೋವಿಡ್‌ ರೋಗಿಗಳ ಸ್ಥಳಾಂತರ ಕಾರ್ಯಪಡೆಯ ಮುಖ್ಯಸ್ಥರಿಗೆ ಹಾಗೂ ಬಿಬಿಎಂಪಿ ಆಯುಕ್ತರಿಗೆ ನಿರ್ದೇಶನ ನೀಡಿದ್ದರು. ಈ ಆಧಾರದಲ್ಲಿ ಬಿಬಿಎಂಪಿ ಆಯುಕ್ತರು ಮಂಗಳವಾರ ಸುತ್ತೋಲೆ ಹೊರಡಿಸಿ, ಈ ಕೆಳಗಿನ ಸೂಚನೆಗಳನ್ನು ನೀಡಿದ್ದಾರೆ.

ಕೋವಿಡ್ ಚಿಕಿತ್ಸೆ ಹೊಸ ನಿಯಮಗಳೇನು?

* ವಲಯಗಳ ಕಮಾಂಡ್‌ ಮತ್ತು ನಿಯಂತ್ರಣ ಕೇಂದ್ರಗಳು (ಜೆಡ್‌ಸಿಸಿಸಿ) ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ಸಿಎಚ್‌ಬಿಎಂಎಸ್‌ನಲ್ಲಿ ಸರ್ಕಾರಿ ಆಸ್ಪತ್ರೆಗಳ ಸಾಮಾನ್ಯ ವಾರ್ಡ್‌ಗಳು ಹಾಗೂ ಎಚ್‌ಡಿ ಘಟಕಗಳ ಹಾಸಿಗೆಗಳನ್ನೇ ಆಯ್ಕೆ ಮಾಡಬೇಕು.

* ಸರ್ಕಾರಿ ಆಸ್ಪತ್ರೆಗಳ ಸಾಮಾನ್ಯ ವಾರ್ಡ್‌ಗಳು ಹಾಗೂ ಎಚ್‌ಡಿ ಘಟಕಗಳ ಹಾಸಿಗೆಗಳ ಲಭ್ಯತೆ ಪ್ರಮಾಣ ಶೇ 10ಕ್ಕಿಂತ ಕಡಿಮೆಯಾಗುವವರೆಗೂ ಈ ನಿಯಮ ಪಾಲಿಸಬೇಕು

* ಐಸಿಯು ಮತ್ತು ವೆಂಟಿಲೇಟರ್‌ ವ್ಯವಸ್ಥೆ ಇರುವ ಹಾಸಿಗೆಗಳ ಅವಶ್ಯಕತೆ ಇದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಈ ಸೌಲಭ್ಯವನ್ನೇ ಬಳಸಿಕೊಳ್ಳಬೇಕು. ತೀರಾ ಗಂಭೀರ ಪ್ರಕರಣಗಳಲ್ಲಿ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿನ ಈ ಸೌಲಭ್ಯಗಳನ್ನು ಬಳಸಬಹುದು

* ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬರುವ ಅನ್ಯ ಜಿಲ್ಲೆಗಳ ರೋಗಿಗಳಿಗೆ ಹಾಸಿಗೆ ಕಾಯ್ದಿರಿಸುವಾಗಲೂ ಇದೇ ನಿಯಮ ಅನುಸರಿಸಬೇಕು

* ಸರ್ಕಾರಿ ಆಸ್ಪತ್ರೆಗಳ ಹಾಸಿಗೆ ಲಭ್ಯತೆ ಪ್ರಮಾಣ ಶೇ 90 ಮೀರಿದ ಬಳಿವಷ್ಟೇ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆಗೆ ಗೊತ್ತುಪಡಿಸಿದ ಹಾಸಿಗೆಗಳನ್ನು ಕಾಯ್ದಿರಿಸಬೇಕು.

* ಜೆಡ್‌ಸಿಸಿಸಿಗಳು ಈ ನಿಯಮಗಳಿಗೆ ಹೊರತಾಗಿ ನಿರ್ಧಾರ ಕೈಗೊಳ್ಳುವ ಅನಿವಾರ್ಯ ಎದುರಾದರೆ, ಅದಕ್ಕೆ ಬಿಬಿಎಂಪಿ ಆಯುಕ್ತರ ಪೂರ್ವಾನುಮತಿ ಪಡೆಯಬೇಕು

***

ಅಂಕಿ ಅಂಶಗಳು

11,593 - ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಚಿಕಿತ್ಸೆಗೆ ಲಭ್ಯ ಇರುವ ಆಸ್ಪತ್ರೆಗಳು

2,058 -ಭರ್ತಿಯಾಗಿರುವವು

9,535 - ಖಾಲಿ ಇರುವವು

18%- ಹಾಸಿಗೆಗಳು ಭರ್ತಿಯಾಗಿರುವ ಪ್ರಮಾಣ

**********


ಕೋವಿಡ್‌ ಚಿಕಿತ್ಸೆ: ಆಸ್ಪತ್ರೆಗೆ ದಾಖಲಾದವರ ವಿವರ (ಬಿಬಿಎಂಪಿ ವ್ಯಾಪ್ತಿಯಲ್ಲಿ)

ಅವಧಿ; ಸೋಂಕು ಪತ್ತೆ ಪ್ರಕರಣ; ಆಸ್ಪತ್ರೆಗೆ ದಾಖಲಾದವರು

ಅ.1ರಿಂದ15; 63,180; 18,364 (ಶೇ 29)

ಅ.16ರಿಂದ 31; 37,778; 10,972 (ಶೇ 29)

ನ.1ರಿಂದ 15; 19,355; 5,894 (ಶೇ 30)

************

ಕೋವಿಡ್‌: ಚಿಕಿತ್ಸೆಗೆ ಲಭ್ಯ‌ವಿರುವ ಹಾಸಿಗೆಗಳು (ಬಿಬಿಎಂಪಿ ವ್ಯಾಪ್ತಿಯಲ್ಲಿ)

ಆಸ್ಪತ್ರೆ; ಹಂಚಿಕೆ; ಬಳಕೆ; ಖಾಲಿ ಇರುವವು; ಭರ್ತಿ ಪ್ರಮಾಣ

ಸರ್ಕಾರಿ ಆಸ್ಪತ್ರೆಗಳು; 1,001; 305; 896; 30%

ಸರ್ಕಾರಿ ವೈದ್ಯ ಕಾಲೇಜುಗಳು; 961; 255; 706; 27%

ಖಾಸಗಿ ಆಸ್ಪತ್ರೆಗಳು; 4,525; 904; 3,621; 20%

ಖಾಸಗಿ ವೈದ್ಯಕಾಲೇಜುಗಳು; 4,906; 460; 4,446; 9%

ಸರ್ಕಾರಿ ಕೋವಿಡ್‌ ಆರೈಕೆ ಕೇಂದ್ರಗಳು; 200; 134; 66; 67%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT