ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಪಿತೂರಿ, ಕಮಿಷನರ್ ಕುತಂತ್ರ: ರಂಗನಾಥ್

ನ್ಯಾಯಾಲಯ ಆವರಣದಲ್ಲಿ ಗಲಾಟೆ: ಆರೋಪ
Last Updated 15 ಫೆಬ್ರುವರಿ 2022, 20:48 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿಟಿ ಸಿವಿಲ್ ನ್ಯಾಯಾಲಯ ಆವರಣದಲ್ಲಿ ನಡೆದಿರುವ ಗಲಾಟೆ ಹಿಂದೆ ಪೊಲೀಸ್ ಪಿತೂರಿ ಹಾಗೂ ಪೊಲೀಸ್ ಕಮಿಷನರ್ ಕುತಂತ್ರವಿದೆ’ ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರೂ ಆದ ವಕೀಲ ಎ.ಪಿ.ರಂಗನಾಥ್ ಆರೋಪಿಸಿದ್ದಾರೆ.

ಫೆ.10 ಹಾಗೂ 11ರಂದು ನಡೆದಿರುವ ಘಟನೆ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಗಲಾಟೆ ಆಗುವ ಮಾಹಿತಿ ಪೊಲೀಸರಿಗೆ ಹಾಗೂ ವಕೀಲರ ಸಂಘಕ್ಕೆ ಮೊದಲೇ ಗೊತ್ತಿತ್ತು. ಅಷ್ಟಾದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಎಡವಿದರು’ ಎಂದಿದ್ದಾರೆ.

‘ವಕೀಲ ಜಗದೀಶ್ ಕೆ.ಎನ್.ಮಹಾದೇವ್, ವಕೀಲರು ಹಾಗೂ ವೃತ್ತಿ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ನಾನು ಸಹಿಸುವುದಿಲ್ಲ. ಆ ರೀತಿ ಮಾತನಾಡದಂತೆ ಆತನಿಗೆ ಬುದ್ದಿವಾದ ಹೇಳಿದ್ದೇನೆ. ವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ವಕೀಲ ಜಗದೀಶ್ ಕೆ.ಎನ್‌.ಮಹಾದೇವ್ ನ್ಯಾಯಾಲಯಕ್ಕೆ ಬಂದಿದ್ದಾಗ ಗಲಾಟೆ ನಡೆದಿದೆ. ಅದರ ವಿಡಿಯೊ ನೋಡಿದ್ದೇನೆ. ಉದ್ವೇಗಕ್ಕೆ ಒಳಗಾಗಿ ಜಗದೀಶ್ ಕೂಗಾಡಿರಬಹುದು. ಆದರೆ, ಕೊಲೆ ಯತ್ನ ಎಲ್ಲಿ ಆಗಿದೆ? ಈ ಬಗ್ಗೆ ಜನ ಪ್ರಶ್ನಿಸುತ್ತಿದ್ದಾರೆ’ ಎಂದೂ ತಿಳಿಸಿದ್ದಾರೆ.

‘ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಜಗದೀಶ್ ವಿರುದ್ಧ ದೂರು ಬರೆದುಕೊಂಡು ವಕೀಲರ ಸಂಘದ ಪದಾಧಿಕಾರಿಗಳು, ಕಮಿಷನರ್ ಬಳಿ ಹೋಗಿದ್ದರು. ಕೊಲೆ ಯತ್ನ (ಐಪಿಸಿ 307) ಆರೋಪದಡಿ ದೂರು ನೀಡಿದರೆ, ಜೈಲಿಗೆ ಕಳುಹಿಸುವುದಾಗಿ ಕಮಿಷನರ್ ಹೇಳಿರುವುದು ನನಗೆ ಗೊತ್ತಿದೆ.’

‘ಜಗದೀಶ್ ವಿರುದ್ಧ ಹೊರಗಡೆ ಕ್ರಮ ಕೈಗೊಳ್ಳಲಾಗದ ಪೊಲೀಸರು, ವಕೀಲರ ಮೂಲಕ ತಮ್ಮ ಕೆಲಸ ಸಾಧಿಸುತ್ತಿದ್ದಾರೆ. ಸಮಯ ಸಿಕ್ಕಾಗೆಲ್ಲ ವಕೀಲರನ್ನು ಒಡೆದು ಆಳುತ್ತಿದ್ದಾರೆ. ವಕೀಲರನ್ನೇ ಜೈಲಿಗೆ ಕಳುಹಿಸುವುದು ಸಂಘದ ಉದ್ದೇಶವಲ್ಲವೆಂಬುದನ್ನು ಅಧ್ಯಕ್ಷರು ಅರ್ಥ ಮಾಡಿಕೊಳ್ಳಬೇಕು’ ಎಂದೂ ರಂಗನಾಥ್ ಹೇಳಿದ್ದಾರೆ.

‘ಗಲಾಟೆ ವೇಳೆ 40 ರೌಡಿಗಳು ಬಂದಿದ್ದರೆಂದು ಪೊಲೀಸರು ಹೇಳುತ್ತಿದ್ದಾರೆ. ಅವರೆಲ್ಲ ಯಾರು? ಅವರನ್ನೇಕೆ ಬಂಧಿಸಿಲ್ಲ? ಹೋರಾಟಗಾರರು, ವ್ಯಕ್ತಿಯ ಅಭಿಮಾನಿಗಳಿಗೆ ರೌಡಿಗಳ ಪಟ್ಟ ಕಟ್ಟುವುದನ್ನು ಪೊಲೀಸರು ಮೊದಲು ಬಿಡಬೇಕು’ ಎಂದೂ ತಿಳಿಸಿದ್ದಾರೆ.

ಜಾಮೀನು ಅರ್ಜಿ ವಿಚಾರಣೆ 18ಕ್ಕೆ

ಕೊಲೆ ಯತ್ನ ಪ್ರಕರಣದಲ್ಲಿ ಬಂಧಿತರಾಗಿರುವ ವಕೀಲ ಜಗದೀಶ್ ಕೆ.ಎನ್. ಮಹಾದೇವ್ ಅವರಿಗೆ ಜಾಮೀನು ಕೋರಿ ನಗರದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಜಗದೀಶ್ ಪರ ವಕೀಲರ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ನಡೆಸಿರುವ ನ್ಯಾಯಾಲಯ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಪೊಲೀಸರಿಗೆ ಕಾಲಾವಕಾಶ ನೀಡಿದೆ. ಮುಂದಿನ ವಿಚಾರಣೆಯನ್ನು ಫೆ.18ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT