ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನಧಿಕೃತ ಜಾಹೀರಾತುಗಳ ತೆರವು | ದಕ್ಷಿಣದಲ್ಲಿ ಜಾಹೀರಾತು ಮುಕ್ತ ಅಭಿಯಾನ

ಅಕ್ರಮಕ್ಕೆ ಕಾನೂನು ಕ್ರಮ ಕೈಗೊಳ್ಳಲು ಬಿಬಿಎಂಪಿ ವಲಯ ನಿರ್ಧಾರ
Published 28 ಮೇ 2024, 15:54 IST
Last Updated 28 ಮೇ 2024, 15:54 IST
ಅಕ್ಷರ ಗಾತ್ರ

ಬೆಂಗಳೂರು: ಅನಧಿಕೃತ ಜಾಹೀರಾತುಗಳ ತೆರವು ಹಾಗೂ ಅವುಗಳನ್ನು ನಿಯಂತ್ರಿಸಲು ಬಿಬಿಎಂಪಿ ದಕ್ಷಿಣ ವಲಯ ‘ಜಾಹೀರಾತು ಮುಕ್ತ ಅಭಿಯಾನ’ ಆರಂಭಿಸಿದೆ.

ಯಾವುದೇ ರೀತಿಯ ಅನಧಿಕೃತ ಜಾಹೀರಾತು ಪ್ರದರ್ಶನ ಮತ್ತು ಜಾಹೀರಾತು ಫಲಕಗಳನ್ನು ಅಳವಡಿಸಿದ್ದರೆ ಪಾಲಿಕೆಯು ಸಂಬಂಧಪಟ್ಟವರಿಗೆ ದಂಡ ವಿಧಿಸಿ ತಕ್ಷಣವೇ ತೆರವುಗೊಳಿಸಲಾಗುವುದು. ಅಲ್ಲದೆ, ಕರ್ನಾಟಕ ಮುಕ್ತ ಸ್ಥಳಗಳ(ವಿರೂಪಗೊಳಿಸುವಿಕೆ ತಡೆ) ಕಾಯ್ದೆ 1981ರ ಅಡಿಯಲ್ಲಿ ಅಪರಾಧ ಎಸಗಿರುವವರ ಮೇಲೆ ಎಫ್‌ಐಆರ್ ದಾಖಲಿಸಿ, ಕಾನೂನು ರೀತಿಯ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ವಲಯ ಜಂಟಿ ಆಯುಕ್ತ ಶಿವಕುಮಾರ್‌ ತಿಳಿಸಿದ್ದಾರೆ.

ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ‘ಬಿಬಿಎಂಪಿ ಹೊರಾಂಗಣ ಜಾಹೀರಾತು ಫಲಕ ಮತ್ತು ಸಾರ್ವಜನಿಕ ಸಂದೇಶದ ಉಪ ವಿಧಿಗಳು-2018’ರಲ್ಲಿ ಅಂಗಡಿಗಳ ಜಾಹೀರಾತುಗಳು, ವಾಹನ ಸ್ವ-ಜಾಹೀರಾತು ಇನ್ನಿತರೆ ಸಣ್ಣಪುಟ್ಟ ಜಾಹೀರಾತುಗಳನ್ನು ಸೀಮಿತ ಅವಧಿಗೆ ಮತ್ತು ಸೀಮಿತ ಅಳತೆಗೆ (ಪಿಪಿಪಿ ಯೋಜನೆಗಳು ಸೇರಿದಂತೆ) ಅನುಮತಿಸಲು ಮಾತ್ರ ಅವಕಾಶವಿರುತ್ತದೆ. ಇವುಗಳನ್ನು ಹೊರತುಪಡಿಸಿ ಇತರೆ ಯಾವುದೇ ವಸತಿ ಪ್ರದೇಶಗಳಲ್ಲಿ, ಖಾಸಗಿ ಸ್ವತ್ತುಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸುವಂತಿಲ್ಲ.

ವಾಣಿಜ್ಯ ಜಾಹೀರಾತುಗಳು, ಎಲ್‌ಇಡಿ ಜಾಹೀರಾತುಗಳ ಪ್ರದರ್ಶನ ಹಾಗೂ ಸಾರ್ವಜನಿಕ, ವೈಯಕ್ತಿಕ ಜಾಹೀರಾತುಗಳು, ಶುಭಾಶಯಗಳು, ಸಭೆ–ಸಮಾರಂಭಗಳ ಕುರಿತ ಜಾಹೀರಾತು / ಪ್ರಕಟಣೆಗಳ ಫ್ಲೆಕ್ಸ್‌, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರ, ಬಾವುಟಗಳು ಇತ್ಯಾದಿ ಅಳವಡಿಸುವುದನ್ನು ನಿಷೇಧಿಸಲಾಗಿದೆ. ಆದರೂ ಮತ್ತೆ ಮತ್ತೆ ಅಳವಡಿಸುತ್ತಿರುವುದರಿಂದ ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದು ಅಲ್ಲದೇ ನಗರದ ಸೌಂದರ್ಯ ಹಾಳಾಗುತ್ತಿದೆ ಮತ್ತು ಪರಿಸರಕ್ಕೆ ಮಾರಕವಾಗಿರುತ್ತದೆ.

ಆದ್ದರಿಂದ ನಗರದ ವಸತಿ ಪ್ರದೇಶ, ಖಾಸಗಿ ಸ್ವತ್ತುಗಳಲ್ಲಿ ಅನಧಿಕೃತ ವಾಣಿಜ್ಯ ಜಾಹೀರಾತುಗಳು, ಇನ್ನಿತರೆ ಮುದ್ರಣ ಪ್ರಕಟಣೆ/ಜಾಹೀರಾತು ಹಾಗೂ ಸೈಕಲ್ ಜಾಹೀರಾತುಗಳು, ವಾಹನ ಜಾಹೀರಾತು ಅಳವಡಿಸಿದವರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಶಿವಕುಮಾರ್‌ ಮಾಹಿತಿ ನೀಡಿದ್ದಾರೆ.

ಪರಿಸರ(ಸಂರಕ್ಷಣೆ) ಕಾಯ್ದೆ 1986ರ ಸೆಕ್ಷನ್ 5ರ ಅಡಿಯಲ್ಲಿ 2016ರ ಮಾರ್ಚ್‌ 11ರಂದು ಸರ್ಕಾರ ಅಧಿಸೂಚನೆ ಹೊರಡಿಸಿ ಪ್ಲಾಸ್ಟಿಕ್‌ ಬಳಸುವುದನ್ನೂ ನಿಷೇಧಿಸಿದೆ. ಆದ್ದರಿಂದ ಜಾಹೀರಾತು ಅಥವಾ ಪ್ರಕಟಣೆಗಳಲ್ಲಿ ಪ್ಲಾಸ್ಟಿಕ್‌ ಬಳಕೆಯ ದೂರನ್ನೂ ದಾಖಲಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT