ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್ ಶೋ: ವಿಮಾನಗಳ ಕಸರತ್ತು ಆರಂಭ

ಯಲಹಂಕ ವಾಯುನೆಲೆಗೆ ಬಂದಿಳಿದ ಮೂರು ‘ರಫೇಲ್’ * ಕೆಐಎ ರನ್‌ವೇ ಫೆ. 24ರವರೆಗೆ ಭಾಗಶಃ ಬಂದ್‌
Last Updated 15 ಫೆಬ್ರುವರಿ 2019, 6:05 IST
ಅಕ್ಷರ ಗಾತ್ರ

ಬೆಂಗಳೂರು: ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವವನ್ನು ಮೂಡಿಸಲು ಸಜ್ಜಾಗುತ್ತಿರುವ ಪೈಲಟ್‌ಗಳು, ಯಲಹಂಕದ ವಾಯುನೆಲೆಯಲ್ಲಿ ಗುರುವಾರ ವಿಮಾನಗಳ ತಾಲೀಮು ಆರಂಭಿಸಿದರು.

ಫೆ. 20ರಿಂದ ಆರಂಭವಾಗಿರುವ ‘ಏರ್ ಶೋ’ದಲ್ಲಿ ಶಕ್ತಿ ಪ್ರದರ್ಶಿಸುವುದಕ್ಕಾಗಿ ದೇಶ–ವಿದೇಶಗಳ ಸೇನಾ ಪಡೆಯ ವಿಮಾನಗಳು ಈಗಾಗಲೇ ವಾಯುನೆಲೆಗೆ ಲಗ್ಗೆ ಇಟ್ಟಿದ್ದು, ಆ ಪೈಕಿ ಹಲವು ವಿಮಾನಗಳು ಹಾರಾಟ ನಡೆಸಿ ತಾಲೀಮು ಶುರು ಮಾಡಿವೆ.

ಮಧ್ಯಾಹ್ನ 1.30ರಿಂದ ಪರೀಕ್ಷಾರ್ಥ ಹಾರಾಟಕ್ಕೆ ವಾಯುನೆಲೆಯನ್ನು ಮೀಸಲಾಗಿರಿಸಲಾಗಿತ್ತು. ಆರಂಭದಲ್ಲಿ, ‘ಸಿ130ಜೆ ಸೂಪರ್‌ ಹರ್ಕ್ಯುಲಸ್‌ ವಿಮಾನ’ ಹಾರಾಟ ನಡೆಸಿತು.

ಯುದ್ಧದ ವೇಳೆ ಸರಕು ಹಾಗೂ ಸೈನಿಕರನ್ನು ಹೊತ್ತೊಯ್ಯಲು ಬಳಸುವ ಈ ವಿಮಾನ, 10 ಸಾವಿರ ಅಡಿಯಷ್ಟು ಎತ್ತರದಲ್ಲಿ ಹಾರಾಡಿತು. ವಿಮಾನದಲ್ಲಿದ್ದ ಸೇನಾನಿಗಳು, ಪ್ಯಾರಾಚೂಟ್‌ ಸಹಾಯದಿಂದ ಹಾರಿದ ದೃಶ್ಯವನ್ನು ‘ಏರ್‌ಶೋ’ಗೂ ಮುನ್ನವೇ ಸ್ಥಳೀಯ ನಿವಾಸಿಗಳು ಕಣ್ತುಂಬಿಕೊಂಡರು.

ಸಂಜೆ 4.30ರವರೆಗೂ ಭಾರತೀಯ ವಾಯುಸೇನೆ ಸೇರಿದಂತೆ ಹಲವು ಸೇನಾಪಡೆಯಗಳ ತರಹೇವಾರಿ ವಿಮಾನಗಳ ಪರೀಕ್ಷಾರ್ಥ ಹಾರಾಟವಿತ್ತು.

ವಾಯುನೆಲೆಗೆ ಬಂದಿಳಿದ ರಫೇಲ್ ವಿಮಾನಗಳು: ‘ಖರೀದಿ ಹಗರಣ’ದ ಕಾರಣದಿಂದ ದೇಶದಾದ್ಯಂತ ಬಿರುಗಾಳಿ ಎಬ್ಬಿಸಿದೆ ರಫೇಲ್‌ ಸಂಸ್ಥೆ. ಆ ಸಂಸ್ಥೆಯ ಮೂರು ವಿಮಾನಗಳು ವಾಯುನೆಲೆಗೆ ಬಂದಿಳಿದಿವೆ. ದೀರ್ಘ ಪ್ರಯಾಣದ ಕಾರಣಕ್ಕೆ ಗುರುವಾರ ವಿಶ್ರಾಂತಿ ಪಡೆದ ಈ ವಿಮಾನಗಳು ಶುಕ್ರವಾರದಿಂದ ಕಸರತ್ತು ಆರಂಭಿಸುವ ನಿರೀಕ್ಷೆ ಇದೆ.

ಯಕೋವ್ಲೇವ್ಸ್, ಮಿರಾಜ್, ಮಿಗ್– 21 ವಿಮಾನಗಳು ಸಹ ಈಗಾಗಲೇ ಬಂದಿವೆ. ಅವೆಲ್ಲವೂ ಕ್ರಮವಾಗಿ ಕಸರತ್ತು ನಡೆಸಿ, ಏರ್‌ಶೋದಲ್ಲಿ ಪ್ರದರ್ಶನ ನೀಡಲು ಸಜ್ಜಾಗುತ್ತಿವೆ.

ಕೆಐಎ ರನ್‌ವೇ ಫೆ. 24ರವರೆಗೆ ಬಂದ್: ‘ಏರ್‌ಶೋ’ ಹಿನ್ನೆಲೆಯಲ್ಲಿ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನದ ನಿಲ್ದಾಣದ ರನ್‌ವೇ, ಫೆ. 14ರಿಂದ 24ರವರೆಗೆ ಭಾಗಶಃ ಬಂದ್‌ ಆಗಲಿದೆ.

‘ಏರ್‌ ಶೋ’ದಲ್ಲಿ ಭಾಗವಹಿಸಲು ಬಂದಿರುವ ವಿಮಾನಗಳು, ವಾಯುನೆಲೆಯಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಲಿವೆ. ಜೊತೆಗೆ ಏರ್‌ ಶೋ ದಿನದಂದು ಪ್ರದರ್ಶನ ಸಹ ನೀಡಲಿವೆ. ಹೀಗಾಗಿ ಈ ಅವಧಿಯಲ್ಲಿ ರನ್‌ವೇ ಬಂದ್‌ ಮಾಡಲಾಗುತ್ತಿದೆ. ಆ ಅವಧಿಯಲ್ಲಿ ಹಾರಾಟ ನಡೆಸಬೇಕಿದ್ದ ವಿಮಾನಗಳ ವೇಳಾಪಟ್ಟಿಯನ್ನು ತಾತ್ಕಾಲಿಕವಾಗಿ ಬದಲಿಸಲಾಗಿದೆ ಎಂದು ನಿಲ್ದಾಣದ ಆಡಳಿತ ಮಂಡಳಿ ತಿಳಿಸಿದೆ.

ಜಾಹೀರಾತಿಗೆ ಅನುಮತಿ

ಬೆಂಗಳೂರು: ‘ಏರ್ ಇಂಡಿಯಾ–2019’ ವೈಮಾನಿಕ ಪ್ರದರ್ಶನದ ನಿಮಿತ್ತ ನಗರದ ಹಲವೆಡೆ ತಾತ್ಕಾಲಿಕ ಹೋರ್ಡಿಂರ್ಗ್ಸ್ ಅಳವಡಿಸಲು ಎಚ್‌ಎಎಲ್‌ಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.

ಈ ಕುರಿತು ಬಿಬಿಎಂಪಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಬ್ರಿಗೇಡ್ ರಸ್ತೆ, ಯಲಹಂಕ ಕೋಗಿಲು ಜಂಕ್ಷನ್, ಯಲಹಂಕ ಎನ್‌ಇಎಸ್ ಬಸ್ ನಿಲ್ದಾಣ, ಏರ್‌ಪೋರ್ಟ್‌ನಿಂದ ಒಳಬರುವ ಮತ್ತು ಹೊರಹೋಗುವ ಹಾಗೂ ಲಾಲ್‌ಬಾಗ್ ಜಂಕ್ಷನ್‌ಗಳಲ್ಲಿ (ಪಾಸ್‌ಪೋರ್ಟ್‌ ಕಚೇರಿ ಸಮೀಪ) ಜಾಹೀರಾತು ಫಲಕಗಳನ್ನು ಅಳವಡಿಸಲು ನ್ಯಾಯಪೀಠ ಅನುಮತಿ ನೀಡಿದೆ.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ವಿ. ಶೀನಿಧಿ, ‘ಜಾಹೀರಾತು ಫಲಕ ಅಳವಡಿಸಲು ಅನುಮತಿ ನೀಡುವಂತೆ ಎಚ್‌ಎಎಲ್ ಬಿಬಿಎಂಪಿಗೆ ಮನವಿ ನೀಡಿದೆ. ಏರ್ ಶೋ ಮುಗಿದ ಕೂಡಲೇ ತೆರವುಗೊಳಿಸುತ್ತೇವೆ ಎಂದೂ ತಿಳಿಸಿದೆ. ಆದ್ದರಿಂದ ಅನುಮತಿ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಇದೇ 15ರಿಂದ 25ರವರೆಗೆ ಜಾಹೀರಾತು ಫಲಕ ಪ್ರದರ್ಶಿಸಲು ಅನುಮತಿ ನೀಡಿತು.

ಅನಧಿಕೃತ ಜಾಹೀರಾತು : ‘ಕೋರಮಂಗಲ ಪಿವಿಆರ್ ಸಿನಿಮಾ, ಜಾನ್ಸನ್ ಮಾರುಕಟ್ಟೆ ಮತ್ತು ಅರಮನೆ ರಸ್ತೆಯಲ್ಲಿ ಅನಧಿಕೃತ ಜಾಹೀರಾತು ಫಲಗಳನ್ನು ಅಳವಡಿಸಲಾಗಿದೆ’ ಎಂದು ಅರ್ಜಿದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಶ್ರೀನಿಧಿ, ‘ಅನಧಿಕೃತ ಫಲಕಗಳಿದ್ದರೆ ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT