ಸೋಮವಾರ, ಡಿಸೆಂಬರ್ 5, 2022
19 °C
‘ಕೃಷಿಯಲ್ಲಿ ನವೋದ್ಯಮಗಳು’ ಘೋಷಣೆ ಅಡಿ ಆಯೋಜನೆ, 700 ಮಳಿಗೆ ಸ್ಥಾಪನೆ

ಇಂದಿನಿಂದ‍ ‘ಕೃಷಿಮೇಳ’ದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಕೃಷಿ ಮೇಳ ಸಂಭ್ರಮ ಮನೆ ಮಾಡಲಿದ್ದು, ಮೇಳಕ್ಕೆ ಮಳೆಯ ಆತಂಕ ಎದುರಾಗಿದೆ.

ಕಳೆದ ಎರಡು ದಿನಗಳಿಂದ ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಗುರುವಾರ ಸಹ ಮಳೆ ಸುರಿದರೆ ಮೇಳದ ವೀಕ್ಷಕರಿಗೆ ಅಡಚಣೆ ಉಂಟಾಗುವ ಸಾಧ್ಯತೆಯಿದೆ.

ಗುರುವಾರ ಬೆಳಿಗ್ಗೆ 11ಕ್ಕೆ ಮೇಳಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಚಾಲನೆ ನೀಡಲಿದ್ದಾರೆ.
ಮೊದಲ ದಿನ ಪ್ರಗತಿ ಪರ ಕೃಷಿಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಪ್ರತಿನಿತ್ಯ ಬೆಳಿಗ್ಗೆ 9ರಿಂದ ಸಂಜೆ 6ರ ತನಕ ಸಾರ್ವಜನಿಕರಿಗೆ ಮೇಳಕ್ಕೆ ಉಚಿತ ಪ್ರವೇಶವಿದೆ. ಜಿ.ಕೆ.ವಿ.ಕೆ ಮಹಾದ್ವಾರದಿಂದ ಕೃಷಿ ಮೇಳದ ಸಭಾಂಗಣ ತಲುಪಲು ಬಸ್ಸುಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು ನಾಲ್ಕು ದಿನಗಳಿಂದ 15 ಲಕ್ಷ ಜನರು ಕೃಷಿ ಮೇಳ ವೀಕ್ಷಿಸುವ ಸಾಧ್ಯತೆಯಿದೆ.

ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಜಿ.ಕೆ.ವಿ.ಕೆ ಮುಂಭಾಗದ ಜಕ್ಕೂರು ಏರೋಡ್ರಮ್‌ನಲ್ಲಿ (ವಿಮಾನ ನಿಲ್ದಾಣ) ಬಸ್‌, ಮಿನಿ ಬಸ್‌, ಟೆಂಪೋ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮೇಳದ ವೀಕ್ಷಕರಿಗೆ ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷಿ ವಿವಿ ತಿಳಿಸಿದೆ. ವಿವಿಧ ಸಾಮಾಜಿಕ ಮಾಧ್ಯಮದಲ್ಲಿ ಮೇಳದ ನೇರ ಪ್ರಸಾರ ಆಗಲಿದೆ.

ಮೊದಲ ದಿನವಾದ ಗುರುವಾರ ರಾಜ್ಯಮಟ್ಟದ ಕೃಷಿ ಪ್ರಶಸ್ತಿ ಪ್ರದಾನದ ಜತೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ರೈತ ಪ್ರಶಸ್ತಿ ಪ್ರದಾನ ನಡೆಯಲಿದೆ.

ಕೃಷಿಯಲ್ಲಿ ಡ್ರೋನ್‌ ಬಳಕೆ, ಆಟೋಮೇಟೆಡ್‌ ಕೃಷಿ ಯಂತ್ರೋಪಕರಣ, ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಈ ಬಾರಿಯ ಆಕರ್ಷಣೆ ಆಗಿರಲಿದೆ.

ಸಿರಿಧಾನ್ಯ ಹಾಗೂ ಅವುಗಳ ಮಹತ್ವ, ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯ, ಜಲಾನಯನ ನಿರ್ವಹಣೆ, ಸಾವಯವ ಕೃಷಿ ಪದ್ಧತಿ, ಸಮಗ್ರ ಪೋಷಕಾಂಶಗಳು, ರೋಗ ನಿರ್ವಹಣೆ, ಹನಿ ಹಾಗೂ ತುಂತುರು ನೀರಾವರಿ ಪದ್ಧತಿ, ಮಳೆ ಮತ್ತು ಚಾವಣಿ ನೀರು ಸಂಗ್ರಹ ಯೋಜನೆಯ ಬಗ್ಗೆ ಮೇಳದಲ್ಲಿ ತಜ್ಞರಿಂದ ರೈತರಿಗೆ ಮಾಹಿತಿ ನೀಡಲಾಗುವುದು ಎಂದು ಕುಲಪತಿ ಡಾ.ಎಸ್‌.ವಿ.ಸುರೇಶ ತಿಳಿಸಿದ್ದಾರೆ.

ಕೊಯ್ಲೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ, ಮೌಲ್ಯವರ್ಧನೆ, ಬಿತ್ತನೆ ಬೀಜ ಪರೀಕ್ಷೆ ಹಾಗೂ ಶೇಖರಣೆ, ಮೀನು ಸಾಕಾಣಿಕೆ, ಹವಾಮಾನ ಚತುರ ಕೃಷಿ, ಕೃಷಿಯಲ್ಲಿ ನೂತನ ಮಾಹಿತಿ ತಂತ್ರಜ್ಞಾನ ಕುರಿತೂ ಮೇಳದಲ್ಲಿ ಪ್ರಾತ್ಯಕ್ಷಿಕೆ ನೀಡಲಾಗುವುದು. ಚರ್ಮಗಂಟು ರೋಗದ ಕಾರಣಕ್ಕೆ ಈ ವರ್ಷ ಜಾನುವಾರು ಪ್ರದರ್ಶನ ಇರುವುದಿಲ್ಲ. ಕುರಿ ಹಾಗೂ ನಾಟಿ ಕೋಳಿ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು