ಬುಧವಾರ, ಆಗಸ್ಟ್ 10, 2022
21 °C

ರೈತರಿಗಾಗಿ ‘ಐಕ್ಯ’ ಹೋರಾಟ; ಬೀದಿಗಿಳಿದ ಸಾರಿಗೆ ನೌಕರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ನಗರದಲ್ಲಿ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ‘ರೈತ–ಕಾರ್ಮಿಕ–ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ’ ಸಹ ಬೆಂಬಲ ಸೂಚಿಸಿದೆ. ಇದರ ನಡುವೆಯೇ ‘ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನಾಗಿ ಪರಿಗಣಿಸಿ’ ಎಂದು ಒತ್ತಾಯಿಸಿ ಸಾರಿಗೆ ನೌಕರರು ಸಹ ಬೀದಿಗಿಳಿದಿದ್ದಾರೆ.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತೃತ್ವದಲ್ಲಿ ಮೂರು ದಿನಗಳಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದೇ ಜಾಗದಲ್ಲೇ ಸರ್ಕಾರಿ ನೌಕರರು ಸಹ ಪ್ರತಿಭಟನೆ ಆರಂಭಿಸಿದ್ದು, ಅದರಲ್ಲಿ ಕೆಲವರನ್ನು ಪೊಲೀಸರು ಗುರುವಾರ ಸಂಜೆ ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು.

ಎರಡೂ ಸಂಘಟನೆಯವರು, ತಮ್ಮ ಬೇಡಿಕೆ ಈಡೇರಿಕೆಗಾಗಿ ಒಟ್ಟಿಗೆ ಪ್ರತಿಭಟನೆ ನಡೆಸುತ್ತಿರುವುದು ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಪ್ರತಿಭಟನಕಾರರನ್ನು ನಿಯಂತ್ರಿಸಲು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಇದಕ್ಕೆ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬ್ಯಾರಿಕೇಡ್‌ ಹಾಕಿ ತಡೆ; ‘ರೈತ ವಿರೋಧಿ ಕಾಯ್ದೆಗಳ ತಿದ್ದುಪಡಿಗೆ ರಾಜ್ಯಪಾಲರು ಸಹಿ ಹಾಕಬಾರದು’ ಎಂದು ಒತ್ತಾಯಿಸಿ ರೈತರು ಬೃಹತ್ ಮೆರವಣಿಗೆ ಮೂಲಕ ರಾಜಭವನಕ್ಕೆ ಮುತ್ತಿಗೆ ಹಾಕಲು ಹೊರಟಿದ್ದರು. ಸ್ವಾತಂತ್ರ್ಯ ಉದ್ಯಾನ ರಸ್ತೆಯುದ್ಧಕ್ಕೂ ಬ್ಯಾರಿಕೇಡ್ ಹಾಕಿದ್ದ ಪೊಲೀಸರು, ಪ್ರತಿಭಟನಕಾರರು ಮುಂದಕ್ಕೆ ಹೋಗದಂತೆ ತಡೆದರು. ಮುತ್ತಿಗೆ ಯತ್ನವನ್ನು ವಿಫಲಗೊಳಿಸಿದರು.

‘ನಮ್ಮ ಹಕ್ಕು ಕೇಳಲು ವಿಧಾನಸೌಧಕ್ಕೆ ಹೊರಟಿದ್ದಾಗಲೂ ಅಡ್ಡಿಪಡಿಸಿದ್ದೀರಾ. ಈಗ ರಾಜ್ಯಪಾಲರ ಬಳಿ ಹೋಗಲು ಬಿಡುತ್ತಿಲ್ಲ’ ಎಂದು ಪ್ರತಿಭಟನಕಾರರು, ಪೊಲೀಸ್ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ದಯವಿಟ್ಟು ಸಹಕರಿಸಿ’ ಎನ್ನುತ್ತಲೇ ಪೊಲೀಸರು, ಪ್ರತಿಭಟನಕಾರರನ್ನು ತಡೆದರು. ಇದೇ ವೇಳೆ ಪರಸ್ಪರ ತಳ್ಳಾಟ ಹಾಗೂ ಮಾತಿನ ಚಕಮಕಿ ನಡೆಯಿತು.

ರಸ್ತೆಯಲ್ಲೇ ಕುಳಿತ ಪ್ರತಿಭಟನಕಾರರು ಧರಣಿ ಮುಂದುವರಿಸಿದರು. ‘ಬಿಜೆಪಿ–ಜೆಡಿಎಸ್ ಪಕ್ಷಗಳು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಬೆಂಬಲಿಸುವ ಮೂಲಕ ರೈತರು ಹಾಗೂ ಶೋಷಿತ ಸಮುದಾಯಗಳಿಗೆ ದ್ರೋಹ ಮಾಡಿವೆ’ ಎಂದು ದೂರಿದರು.

ರಾಜ್ಯಪಾಲರ ಭೇಟಿ; ಐಕ್ಯ ಹೋರಾಟ ಸಮಿತಿ ಸದಸ್ಯರು, ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ‘ಕಾಯ್ದೆ ತಿದ್ದುಪಡಿಯನ್ನು ಪರಿಶೀಲಿಸಿಯೇ ಅಂಕಿತ ಹಾಕಲಾಗುವುದು. ರೈತರು, ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಮುಖಂಡರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಆಶ್ವಾಸನೆ ನೀಡಿದರೆಂದು ಸಮಿತಿ ಸದಸ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಾರಿಗೆ ನೌಕರರಿಗೆ ರೈತ ಸಂಘದ ಬೆಂಬಲ; ‘ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿರುವ ಬೆನ್ನಲ್ಲೇ, ನೌಕರರು ಪ್ರತಿಭಟನೆ ಆರಂಭಿಸಿದ್ದಾರೆ. ಅದಕ್ಕೆ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಹ ಬೆಂಬಲ ನೀಡಿದೆ.

ಪತ್ನಿ, ಮಕ್ಕಳು, ತಂದೆ–ತಾಯಿ ಜೊತೆಯಲ್ಲೇ ನೌಕರರು ಪ್ರತಿಭಟನೆಗೆ ಬಂದಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೂ ಉದ್ಯಾನ ಎದುರೇ ಕುಳಿತಿದ್ದರು. ನೌಕರರ ಪ್ರತಿಭಟನೆ ವಿಷಯ ತಿಳಿದರೂ ಸಾರಿಗೆ ಸಚಿವರು ಸ್ಥಳಕ್ಕೆ ಬರಲಿಲ್ಲ. ಇದಕ್ಕೆ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೆಎಸ್‌ಆರ್‌ಟಿಸಿ, ಈಶಾನ್ಯ ಸಾರಿಗೆ ನಿಗಮ, ವಾಯವ್ಯ ಸಾರಿಗೆ ನಿಗಮ ಹಾಗೂ ಬೆಂಗಳೂರು ಸಾರಿಗೆ ನಿಗಮ ನೌಕರರು ಪ್ರತಿಭಟನೆಯಲ್ಲಿದ್ದರು.

ನೌಕರರ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರೈತರ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ‘ಸಾರಿಗೆ ನೌಕರರನ್ನು ಸರ್ಕಾರ ಕಡೆಗಣಿಸಬಾರದು. ಆ ರೀತಿ ಮಾಡಿದರೆ, ನಾವೂ ಸುಮ್ಮನಿರುವುದಿಲ್ಲ. ಪರಪ್ಪನ ಅಗ್ರಹಾರ ಜೈಲಿಗೆ ಹೋದರೂ ಸಮಸ್ಯೆ ಇಲ್ಲ. ಯಾವಾಗ ಬೇಕಾದರೂ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಾವು ಸಿದ್ಧರಾಗಿದ್ದೇವೆ’ ಎಂದರು ಹೇಳಿದರು.

'ಕುಮಾರಸ್ವಾಮಿಯವರೇ, ನಿಮ್ದು ಬೇನಾಮಿ ಜಮೀನು ಇಲ್ವ’

‘ದೇಶದಲ್ಲಿ ರೈತರ ಪರ ಹೋರಾಟ ಆರಂಭವಾಗಿದ್ದು, ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು. ಎಪಿಎಂಸಿ, ಭೂ ಸುಧಾರಣಾ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಹಾಗೂ ಸುಗ್ರಿವಾಜ್ಞೆಗಳ ಬಗ್ಗೆ ಮುಖಂಡರ ಸಭೆ ನಡೆಸಿ ಚರ್ಚಿಸಲಾಗಿದೆ. ದೇಶವ್ಯಾಪಿ ಹೋರಾಟಕ್ಕೆ ಕಾಂಗ್ರೆಸ್ ಪಕ್ಷವು ಸಂಪೂರ್ಣ ಬೆಂಬಲ ನೀಡುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಕುಮಾರಸ್ವಾಮಿಯವರ ಅಪ್ಪ, ರೈತ ಪರ ಎನ್ನುತ್ತಾರೆ. ರೇವಣ್ಣ ಸಹ ರೈತ ಪರ ಅಂತಾರೆ. ಕುಮಾರಸ್ವಾಮಿ ಮಾತ್ರ, ರೈತರು ಭೂಮಿ ಯಾರಿಗಾದ್ರೂ ಹೋಗಲಿ ಎನ್ನುತ್ತಿದ್ದಾರೆ. ಕುಮಾರಸ್ವಾಮಿಯವರಿಗೆ ನಾಚಿಕೆಯಾಗಬೇಕು. ನೀವೆಲ್ಲ ಮಣ್ಣಿನ‌ ಮಕ್ಳಾ? ನಿಮ್ಮ ಹತ್ತಿರ ಜಮೀನು ಇಲ್ಲವಲ್ಲ? ಇದ್ದರೂ ಎಲ್ಲವೂ ಬೇನಾಮಿ ಜಮೀನು ಅಲ್ವಾ?’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ಬಡವರು, ರೈತರು ಹಾಗೂ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ತಿದ್ದುಪಡಿಗಳನ್ನು ರದ್ದುಪಡಿಸುತ್ತೇವೆ’ ಎಂದೂ ಹೇಳಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್‌. ಅಶೋಕ ವಿರುದ್ಧವೂ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ‘ಬೆಂಗಳೂರು ಸುತ್ತಮುತ್ತಲಿನ ಬೇನಾಮಿ ಜಾಗಗಳ ಪ್ರಕರಣಗಳನ್ನು ಖುಲಾಸೆ ಮಾಡಲಾಗಿದೆ. ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿರುವವರಿಗೆ ನಾಚಿಕೆಯಾಗಬೇಕು. ಇಂದು ರೈತರಿಗೆ ದ್ರೋಹ ಮಾಡಲಾಗುತ್ತಿದೆ’ ಎಂದರು.

‘ಹೋರಾಟಗಾರರನ್ನು ಡೋಂಗಿ ಎನ್ನುತ್ತಿರುವವರೇ ರೈತರಲ್ಲ. ಎಚ್‌.ಡಿ. ದೇವೇಗೌಡರು ನಗರಕ್ಕೆ ಬಂದು ಎಷ್ಟು ವರ್ಷವಾಯ್ತು. ಅವರು ಎಲ್ಲಿ ವ್ಯವಸಾಯ ಮಾಡಿದ್ದಾರೆ? ಯಾವ ವ್ಯವಸಾಯವನ್ನೂ ಮಾಡಿಲ್ಲ. ನೇಗಿಲನ್ನೂ ಹಿಡಿದಿಲ್ಲ’ ಎಂದು ವ್ಯಂಗ್ಯವಾಡಿದರು.

‘ಆರ್‌ಎಸ್ಎಸ್‌ನವರು ಒಂದು ದಿನವಾದರೂ ಗೋವಿನ ಗಂಜಲು ಎತ್ತಿದ್ದಾರಾ?. ಈಗ ಗೋ ಮಾತೆ ರಕ್ಷಣೆ ನಾಟಕ ಆಡುತ್ತಿದ್ದಾರೆ’ ಎಂದು ಸಿದ್ದರಾಮಯ್ಯ, ‘ದೇಶದಲ್ಲಿ ದೊಡ್ಡ ಸಂಕಷ್ಟಗಳಿವೆ. ಜಾನುವಾರುಗಳಿಗೆ ಮೇವು ಇಲ್ಲ. ಮೇವು ಎಲ್ಲಿಂದ ತರಬೇಕೆಂದು ಸರ್ಕಾರ ಚಿಂತಿಸುತ್ತಿಲ್ಲ’ ಎಂದು ದೂರಿದರು.

‘ನಾಟಕ ಕಂಪನಿ ಮುಖ್ಯಸ್ಥ ಕುಮಾರಸ್ವಾಮಿ’

‘ಎಚ್‌.ಡಿ.ಕುಮಾರಸ್ವಾಮಿ ನಾಟಕ ಕಂಪನಿ ಮುಖ್ಯಸ್ಥರಿದ್ದಂತೆ. ಅವರ ಸಿನಿಮಾ ಡೈಲಾಗ್‌ಗಳಿಗೆ ನಾವು ಹೆದರಲ್ಲ’ ಎಂದು ಕುರುಬೂರು ಶಾಂತಕುಮಾರ್ ವಾಗ್ದಾಳಿ ನಡೆಸಿದರು.

‘ಹೋರಾಟಗಾರರ ಬಗ್ಗೆ ಮಾತನಾಡುವುದು ಹಾಗೂ ರೈತ ವಿರೋಧಿ ಕಾಯ್ದೆ ತಿದ್ದುಪಡಿ ಬೆಂಬಲಿಸುವುದು ಕುಮಾರಸ್ವಾಮಿಯವರಿಗೆ ಶೋಭೆ ತರುವುದಿಲ್ಲ. ರಾಜ್ಯಪಾಲರು ತಿದ್ದುಪಡಿಗೆ ಅಂಕಿತ ಹಾಕಿದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು’ ಎಂದು ಹೇಳಿದರು.

‘ಜೆಡಿಎಸ್ ಪಕ್ಷ, ಚಿಹ್ಹೆ ಬದಲಾಯಿಸಿಕೊಳ್ಳಲಿ’

‘ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರೈತ ವಿರೋಧಿ. ಜೆಡಿಎಸ್ ಪಕ್ಷಕ್ಕೆ ತೆನೆಹೊತ್ತ ರೈತ ಮಹಿಳೆ ಚಿಹ್ನೆ ಶೋಭೆ ತರುವುದಿಲ್ಲ. ಅದನ್ನು ಕೂಡಲೇ ಬದಲಾಯಿಸಿಕೊಳ್ಳಲಿ’ ಎಂದು ‘ಐಕ್ಯ ಹೋರಾಟ ಸಮಿತಿ’ ಮುಖಂಡ ಬಡಗಲಪುರ ನಾಗೇಂದ್ರ ಕಿಡಿಕಾರಿದರು.

ಸಾಲು ಸಾಲು ಪ್ರತಿಭಟನೆ; ಸಂಚಾರ ದಟ್ಟಣೆ

ಮೂರು ದಿನಗಳಿಂದ ನಗರದಲ್ಲಿ ರೈತರ ಪ್ರತಿಭಟನೆ ಜೋರಾಗಿದ್ದು, ಸಂಚಾರ ದಟ್ಟಣೆಯೂ ವಿಪರೀತವಾಗಿದೆ.

ಮೆಜೆಸ್ಟಿಕ್‌ ಬಳಿಯ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗಿನ ರಸ್ತೆಯಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಾಗಿದೆ. ಹಗಲಿನಲ್ಲಿ ವಾಹನಗಳ ಸಂಚಾರವೇ ಸ್ಥಗಿತಗೊಳ್ಳುತ್ತಿದ್ದು, ಪರ್ಯಾಯ ಮಾರ್ಗದಲ್ಲಿ ವಾಹನಗಳನ್ನು ಕಳುಹಿಸಲು ಪೊಲೀಸರು ಪರದಾಡುತ್ತಿದ್ದಾರೆ.

ಉದ್ಯಾನ ಎದುರಿನ ರಸ್ತೆಯಲ್ಲೇ ಕುಳಿತು ರೈತರು ಪ್ರತಿಭಟನೆ ನಡೆಸುತ್ತಿದ್ದು, ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.

ಆನಂದರಾವ್ ವೃತ್ತ, ಮೆಜೆಸ್ಟಿಕ್, ಶೇಷಾದ್ರಿ ರಸ್ತೆ, ಕೆ.ಆರ್. ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಕಾರ್ಪೋರೇಷನ್ ವೃತ್ತ, ಹಡ್ಸನ್ ವೃತ್ತ, ಗಾಂಧಿನಗರ ಹಾಗೂ ಸುತ್ತಮುತ್ತ ಸ್ಥಳದಲ್ಲಿ ಗುರುವಾರ ವಾಹನಗಳ ಸಂಚಾರ ದಟ್ಟಣೆ ವಿಪರೀತವಾಗಿದೆ.

ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಸಾರ್ವಜನಿಕರು, ಗಂಟೆಗಟ್ಟಲೇ ರಸ್ತೆಯಲ್ಲೇ ಕಾಯಬೇಕಾಯಿತು. ದಟ್ಟಣೆಯಲ್ಲಿ ಸಿಲುಕಿದ್ದ ಬಸ್ಸಿನಿಂದ ಇಳಿದ ಪ್ರಯಾಣಿಕರು, ನಡೆದುಕೊಂಡೇ ಮುಂದಕ್ಕೆ ಸಾಗಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು