ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶವಾಣಿ: ಮರೆಯಾಗಲಿದೆ ಸ್ಥಳೀಯ ಸೊಗಡು

ಕಾರ್ಯಕ್ರಮಗಳಿಗೆ ಕತ್ತರಿ *ರಾಜ್ಯದಾದ್ಯಂತ ಏಕರೂಪದ ಸೇವೆ ಒದಗಿಸಲು ಪ್ರಸಾರ ಭಾರತಿ ಸಿದ್ಧತೆ
Last Updated 16 ಡಿಸೆಂಬರ್ 2020, 21:23 IST
ಅಕ್ಷರ ಗಾತ್ರ

ಬೆಂಗಳೂರು: ಆಕಾಶವಾಣಿ ಸೇವೆಗಳನ್ನು ಮರು ಬ್ರ್ಯಾಂಡಿಂಗ್‌ ಮಾಡಲು ಹೊರಟಿರುವ ಪ್ರಸಾರ ಭಾರತಿ, ರಾಜ್ಯದ ಪ್ರಾದೇಶಿಕ ಆಕಾಶವಾಣಿ ಕೇಂದ್ರಗಳಿಂದ ಬಿತ್ತರವಾಗುತ್ತಿದ್ದ ಕಾರ್ಯಕ್ರಮಗಳಿಗೆ ಕತ್ತರಿ ಹಾಕಲು ಮುಂದಾಗಿದೆ.

ನಿಗದಿತ ಕಾರ್ಯಕ್ರಮಗಳಿಗೆ ಇನ್ನು ಇಡೀ ರಾಜ್ಯಕ್ಕೆ ಒಂದೇ ವೇಳಾಪಟ್ಟಿ ಇರಲಿದೆ. ಸ್ಥಳೀಯ ಸೊಗಡಿನ ಕಾರ್ಯಕ್ರಮಗಳಿಗೆ ಈಗ ಸಿಗುತ್ತಿರುವ ಮಹತ್ವ ಕಡಿಮೆ ಆಗಲಿದೆ.

ರಾಜ್ಯದಲ್ಲಿ ಬೆಂಗಳೂರು ಆಕಾಶವಾಣಿ ಕೇಂದ್ರವೇ ನಿಗದಿತ ಕಾರ್ಯಕ್ರಮಗಳ ವೇಳಾಪಟ್ಟಿ ರೂಪಿಸಿ ಅದಕ್ಕನುಗುಣವಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ಭದ್ರಾವತಿ, ಬಳ್ಳಾರಿ, ಧಾರವಾಡ, ಕಲಬುರ್ಗಿ, ಹಾಸನ, ಮಂಗಳೂರು, ಮಡಿಕೇರಿ ಹಾಗೂ ಮೈಸೂರು ಆಕಾಶವಾಣಿ ಕೇಂದ್ರಗಳ ಕಾರ್ಯಕ್ರಮಗಳು ಇದರ ಮೂಲಕವೇ ಪ್ರಸಾರವಾಗಲಿದೆ. ಸ್ಥಳೀಯ ಭಾಷೆ, ಸಂಸ್ಕೃತಿ, ಜಾನಪದ, ಕಲೆಗಳಿಗೆ ಉತ್ತೇಜನ ನೀಡುವಲ್ಲಿ ಆಕಾಶವಾಣಿಯ ಕೊಡುಗೆಯೂ ಮಹತ್ತರವಾದುದು. ಪ್ರಸಾರ ಭಾರತಿಯ ಈ ನಡೆಯಿಂದ ಸ್ಥಳೀಯ ಸೊಗಡಿನ ಕಾರ್ಯಕ್ರಮಗಳಿಗೆ ಕಾಲಾವಕಾಶ ಗಣನೀಯವಾಗಿ ಕಡಿಮೆಯಾಗಲಿದೆ. ಹೊಸ ವ್ಯವಸ್ಥೆಯನ್ನು 2021ರ ಜನವರಿಯಲ್ಲಿ ಜಾರಿಗೊಳಿಸಲು ಸಿದ್ಧತೆ ನಡೆದಿದೆ.

ಆಕಾಶವಾಣಿಯಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 11ರವರೆಗೆ ಸತತ 17 ತಾಸು ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ವಾರ್ತಾ ಪ್ರಸಾರ, ಪ್ಯಾಕೇಜ್‌ ಕಾರ್ಯಕ್ರಮಗಳು ಹಾಗೂ ಮರುಪ್ರಸಾರಗಳ ಹೊರತಾಗಿ ಸ್ಥಳೀಯ ಆಕಾಶವಾಣಿ ಕೇಂದ್ರವೇ ರೂಪಿಸಿದ ಕಾರ್ಯಕ್ರಮಗಳು ದಿನದಲ್ಲಿ 8ರಿಂದ 10 ತಾಸು ಪ್ರಸಾರವಾಗುತ್ತಿವೆ. ರಾಜ್ಯದಾದ್ಯಂತ ಒಂದೇ ವೇಳಾಪಟ್ಟಿ ಜಾರಿಯಾದರೆ ಒಂಬತ್ತು ಕೇಂದ್ರಗಳು ರೂಪಿಸುವ ಕಾರ್ಯಕ್ರಮಗಳಿಗೆ ಈ ಅವಧಿಯನ್ನು ಹಂಚಿಕೆ ಮಾಡಬೇಕಾಗುತ್ತದೆ. ಆಗ ಪ್ರತಿಯೊಂದು ಆಕಾಶವಾಣಿ ಕೇಂದ್ರದ ಕಾರ್ಯಕ್ರಮಗಳಿಗೆ ಒಂದೂವರೆ ತಾಸು ಕೂಡಾ ಲಭಿಸದು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಆಕಾಶವಾಣಿ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ವಿವರಿಸಿದರು.

‘ಈಗಿನ ಮಾರುಕಟ್ಟೆ ವ್ಯವಸ್ಥೆಯಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳಲು ಆಕಾಶವಾಣಿಯನ್ನು ಮರುಬ್ರ್ಯಾಂಡಿಂಗ್‌ ಮಾಡಲಾಗುತ್ತಿದೆ. ಸಾರ್ವಜನಿಕ ಪ್ರಸಾರ ಸೇವೆಯ ಧ್ಯೇಯವನ್ನು ಉಳಿಸಿಕೊಳ್ಳುವುದರೊಂದಿಗೆ ವಾಣಿಜ್ಯ ಹಿತವನ್ನೂ ಕಾಪಾಡಬೇಕಿದೆ. ಕಾರ್ಯಕ್ರಮಗಳ ಸಂಖ್ಯೆಗಿಂತ ಗುಣಮಟ್ಟಕ್ಕೆ ಆದ್ಯತೆ ನೀಡುವ ಕಾರ್ಯತಂತ್ರ ರೂಪಿಸಿದ್ದೇವೆ’ ಎಂದು ಪ್ರಸಾರ ಭಾರತೀಯ ಉಪ ಮಹಾ ನಿರ್ದೇಶಕ ಪ್ರಕಾಶ್‌ ವೀರ್‌ ಅವರು ಆಕಾಶವಾಣಿ ಕೇಂದ್ರಗಳಿಗೆ ನ.18ರಂದು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

‘ರಾಜ್ಯಗಳಲ್ಲಿನ ವಿವಿಧ ಆಕಾಶವಾಣಿ ಕೇಂದ್ರಗಳು ಸ್ವತಂತ್ರವಾಗಿ ಬಿತ್ತರಿಸುತ್ತಿರುವ ಅನೇಕ ಕಾರ್ಯಕ್ರಮಗಳು ಒಂದೇ ತೆರನಾದ ವಿಷಯವನ್ನು ಒಳಗೊಂಡಿದ್ದು, ಒಂದೇ ಕೆಲಸಕ್ಕೆ ವಿವಿಧೆಡೆ ಶ್ರಮ ಹಾಕಲಾಗುತ್ತಿದೆ. ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾದ ಭಾಷೆ ಅಥವಾ ಉಪಭಾಷೆಗಳ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ತಲುಪಿಸಲು ಸಾಧ್ಯವಾಗುತ್ತಿಲ್ಲ. ಭಾಷಾ ವೈವಿಧ್ಯದ ಸೊಗಡು ತಲುಪಬೇಕಾದಷ್ಟು ಮಂದಿಯನ್ನು ತಲುಪುತ್ತಿಲ್ಲ. ಹಾಗಾಗಿ ಈ ಬದಲಾವಣೆ’ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

‘ನಿರ್ದಿಷ್ಟ ಭಾಷೆ ಅಥವಾ ಉಪಭಾಷೆಯನ್ನಾಡುವವರು ಆರ್ಥಿಕ ಚಲನಶೀಲತೆಯಿಂದಾಗಿ ಈಗ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿ ಉಳಿದಿಲ್ಲ. ಕಾರ್ಯಕ್ರಮಗಳನ್ನು ರಾಜ್ಯದ ಯಾವುದೇ ಭಾಗದಿಂದ ಅಥವಾ ಹೊರರಾಜ್ಯಗಳಲ್ಲೂ ಆಲಿಸುವಂತಾಗಬೇಕು ಎಂಬ ನಿರೀಕ್ಷೆಗಳು ಸ್ಮಾರ್ಟ್‌ಫೋನ್‌ಗಳ ಹಾಗೂ ಡಿಜಿಟಲ್‌ ವೇದಿಕೆಗಳ ಆವಿಷ್ಕಾರದ ಬಳಿಕ ಹೆಚ್ಚುತ್ತಿವೆ. ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಿಸಿ ಇದನ್ನು ಕಾರ್ಯಗತಗೊಳಿಸಬೇಕಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಕಾರ್ಯಕ್ರಮಗಳಿಗೆ ರಾಜ್ಯದಾದ್ಯಂತ ಒಂದೇ ವೇಳಾಪಟ್ಟಿ ಇರುತ್ತದೆಯಾದರೂ, ಕಾರ್ಯಕ್ರಮಗಳನ್ನು ರೂಪಿಸಲು ಎಲ್ಲ ಆಕಾಶವಾಣಿ ಕೇಂದ್ರಗಳ ಸ್ಟುಡಿಯೊಗಳ ಕೊಡುಗೆಯೂ ಇರಲಿದೆ. ರಾಜಧಾನಿಯ ಆಕಾಶವಾಣಿ ಕೇಂದ್ರವು ಇತರ ಕೇಂದ್ರಗಳ ನಡುವೆ ಸಮನ್ವಯ ಕಾಯ್ದುಕೊಳ್ಳಲಿದೆ. ವಲಯ ಮುಖ್ಯಸ್ಥರು ಪ್ರಾದೇಶಿಕ ಅಗತ್ಯಕ್ಕೆ ಅನುಗುಣವಾಗಿ ಗುಣಮಟ್ಟದ ಕಾರ್ಯಕ್ರಮಗಳನ್ನು ಬಿತ್ತರಿಸಬೇಕಿದೆ. ಕಾರ್ಯಕ್ರಮಗಳನ್ನು ರೂಪಿಸುವ ಕೇಂದ್ರಗಳ ಸಿಬ್ಬಂದಿ ಜೊತೆ ಚರ್ಚಿಸಿ ಕಾರ್ಯಕ್ರಮಗಳ ನಿಗದಿತ ವೇಳಾಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ಸಿಬ್ಬಂದಿ ಕಡಿತದ ಹುನ್ನಾರ’
‘ಮರು ಬ್ರ್ಯಾಂಡಿಂಗ್‌ ಎಂಬುದು ಸಿಬ್ಬಂದಿ ಕಡಿತ ಮಾಡುವ ಹುನ್ನಾರ. ದಶಕಗಳಿಂದ ಜನರ ಪ್ರೀತಿ ಗಳಿಸಿದ್ದ ಆಕಾಶವಾಣಿಯ ಈಗಿನ ಹೆಸರಿಗೆ ಮಸಿ ಬಳಿಯುವ ಪ್ರಯತ್ನವಿದು. ಕ್ರಮೇಣ, ಆಕಾಶವಾಣಿ ಕೇಂದ್ರಗಳ ಜಾಗವನ್ನೂ ಪ್ರಸಾರ ಭಾರತಿ ಹರಾಜಿಗೆ ಇಡಲಿದೆ’ ಎಂದು ಆಕಾಶವಾಣಿ ಸಿಬ್ಬಂದಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT