ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಕೇಳಿದ್ದಕ್ಕೆ ಪೊಲೀಸರಿಂದ ಕಿರುಕುಳ: ವಿಡಿಯೊ ಹರಿಬಿಟ್ಟ ಸಾಮಾಜಿಕ ಕಾರ್ಯಕರ್ತ

Last Updated 4 ಜೂನ್ 2021, 13:29 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ಲಸಿಕೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಆಡಿಯೊ ಸಮೇತ ದೂರು ಕೊಟ್ಟಿದ್ದಕ್ಕೆ ಗಿರಿನಗರ ಹಾಗೂ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು, ವಿನಾಕಾರಣ ನೋಟಿಸ್ ನೀಡಿ ನನಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಎಚ್‌.ಎಂ. ವೆಂಕಟೇಶ್ ಅವರು ವಿಡಿಯೊ ಹರಿಬಿಟ್ಟಿದ್ದಾರೆ.

‘ಕೋವಿಡ್ ಲಸಿಕೆ ಮಾರಾಟ ಮಾಡಿ, ಅದರಲ್ಲಿ ಶಾಸಕ ರವಿ ಸುಬ್ರಹ್ಮಣ್ಯ ಅವರಿಗೆ ಕಮಿಷನ್ ನೀಡುತ್ತಿದ್ದಾರೆ’ ಎಂಬ ಆರೋಪ ಹೊತ್ತಿರುವ ಹೊಸಕೆರೆಹಳ್ಳಿಯ ಎ.ವಿ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಡಳಿತ ಮಂಡಳಿ, ‘ಆಸ್ಪತ್ರೆ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿ ಗಿರಿನಗರ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ತನಿಖೆ ಆರಂಭಿಸಿರುವ ಪೊಲೀಸರು, ಆರೋಪಿ ಸ್ಥಾನದಲ್ಲಿರುವ ಎಚ್.ಎಂ. ವೆಂಕಟೇಶ್ ಅವರಿಗೆ ವಿಚಾರಣೆಗೆ ಬರುವಂತೆ ನೋಟಿಸ್‌ ನೀಡಿದ್ದಾರೆ. ಇದೇ ನೋಟಿಸ್‌ ಉಲ್ಲೇಖಿಸಿ ವೆಂಕಟೇಶ್ ಅವರು ವಿಡಿಯೊ ಹರಿಬಿಟ್ಟಿದ್ದಾರೆ.

‘ಸರ್ಕಾರದಿಂದ ಉಚಿತವಾಗಿ ಜನರಿಗೆ ನೀಡಬೇಕಾದ ಲಸಿಕೆಯನ್ನು ಹೊಸಕೆರೆಹಳ್ಳಿಯ ಎ.ವಿ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮೂಲಕ ಮಾರಲಾಗುತ್ತಿದೆ. ಆಸ್ಪತ್ರೆಯವರು ಪ್ರತಿ ಲಸಿಕೆಗೆ ₹ 900 ಪಡೆಯುತ್ತಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ, ಅದರಲ್ಲಿ ₹ 700 ಸ್ಥಳೀಯ
ಶಾಸಕರಿಗೆ ಹೋಗುತ್ತದೆ ಎಂದು ಆಸ್ಪತ್ರೆಯವರೇ ಹೇಳಿದ್ದರು. ಅದೇ ಆಡಿಯೊ ಸಮೇತ ಕಮಿಷನರ್‌ ಅವರಿಗೆ ದೂರು ನೀಡಿದ್ದೆ’ ಎಂದು ವಿಡಿಯೊದಲ್ಲಿ ವೆಂಕಟೇಶ್ ಹೇಳಿದ್ದಾರೆ.

ಕೋವಿಡ್ ಲಸಿಕೆ ಮಾರಾಟದ ಸುದ್ದಿ ಎಲ್ಲೆಡೆ ಹರುಡುತ್ತಿದ್ದಂತೆ ಸ್ಥಳೀಯ ಶಾಸಕ ನನ್ನ ಮೇಲೆ ಗರಂ ಆಗಿದ್ದರು. ಅವರಿಂದ ರಕ್ಷಣೆ ಕೋರಿ ಇ–ಮೇಲ್ ಮೂಲಕ ಗಿರಿನಗರ ಠಾಣೆಗೆ ದೂರು ನೀಡಿದ್ದೆ. ಅದರನ್ವಯ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರು, ಆಸ್ಪತ್ರೆಯವರು ದೂರು ನೀಡುತ್ತಿದ್ದಂತೆ ನನ್ನ ವಿರುದ್ಧವೇ ತನಿಖೆ ಆರಂಭಿಸಿದ್ದಾರೆ.

‘ಇಲಾಖೆಯ ವಾಹನದ ಬದಲಿಗೆ ಖಾಸಗಿ ವಾಹನದಲ್ಲಿ ಮನೆಗೆ ಬಂದಿದ್ದ ಪೊಲೀಸರು, ನೋಟಿಸ್‌ ಕೊಟ್ಟು ಹೋಗಿದ್ದರು. ನಾನು ಇ–ಮೇಲ್ ಮೂಲಕವೇ ಉತ್ತರ ಕಳುಹಿಸಿದ್ದೆ. ಇದು ದಕ್ಷಿಣ ವಿಭಾಗದ ಡಿಸಿಪಿ ಅವರಿಗೆ ಗೊತ್ತಿದೆ. ಇಷ್ಟಾದರೂ ಪೊಲೀಸರು, ಪುನಃ ನೋಟಿಸ್‌ ನೀಡಿ ಕಿರುಕುಳ ನೀಡುತ್ತಿದ್ದಾರೆ’ ಎಂದು ವೆಂಕಟೇಶ್ ವಿಡಿಯೊದಲ್ಲಿ ಆರೋಪಿಸಿದ್ದಾರೆ.

‘ತಪ್ಪು ಮಾಡಿರುವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪೊಲೀಸರು, ದೂರು ಕೊಟ್ಟಿರುವ ನನಗೆ ಕಿರುಕುಳ ನೀಡುತ್ತಿದ್ದಾರೆ. ಕಾಣದ ಕೈಗಳ ಒತ್ತಡದಿಂದಾಗಿ ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ. ಹಾಗಾದರೆ, ನಾನು ಕೋವಿಡ್‌ ಲಸಿಕೆ ಕೇಳಿದ್ದೆ ತಪ್ಪಾಯ್ತಾ’ ಎಂದೂ ಅವರು ಪ್ರಶ್ನಿಸಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT