ಭಾನುವಾರ, ಜುಲೈ 25, 2021
22 °C
ವಿ.ವಿ ಆಡಳಿತ ಮಂಡಳಿ ಸದಸ್ಯರ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ

ವಂಚನೆ ಆರೋಪ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ಹೆಬ್ಬಾಳದ ಪಶು ವೈದ್ಯಕೀಯ ಮತ್ತು ಪಶು, ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಹಂಗಾಮಿ ನೌಕರರನ್ನು ಕಾಯಂಗೊಳಿಸುವ ನೆಪದಲ್ಲಿ ವಿಶ್ವವಿದ್ಯಾಲಯದ ಮೂವರು ಆಡಳಿತ ಮಂಡಳಿ ಸದಸ್ಯರು ಹಣಪಡೆದು ವಂಚಿಸಿದ್ದಾರೆಂದು ಆರೋಪಿಸಿ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಹಾಗೂ ನೌಕರರು ವಿಶ್ವವಿದ್ಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಪ್ರಜಾವಿಮೋಚನಾ ಚಳವಳಿ (ಸ್ವಾಭಿಮಾನ) ರಾಜ್ಯ ಘಟಕದ ಅಧ್ಯಕ್ಷ ಮುನಿ ಆಂಜಿನಪ್ಪ ಮಾತನಾಡಿ, ‘ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರೊಬ್ಬರು ನೌಕರರಿಂದ ₹ 1 ಲಕ್ಷದವರೆಗೆ ಹಣ ಪಡೆದು ವಂಚಿಸಿದ್ದಾರೆ’ ಎಂದು ದೂರಿದರು.

‘ವಂಚನೆಗೊಳಗಾದ ನೌಕರರು ಹಣ ವಾಪಸು ಮಾಡುವಂತೆ ಕೇಳಿದರೆ ಬೆದರಿಕೆಯೊಡ್ಡಿದ್ದಾರೆ. ಅವರ ಕೃತ್ಯಕ್ಕೆ ಇನ್ನಿಬ್ಬರು ಸದಸ್ಯರು ಸಹಕರಿಸಿದ್ದು, ಸರ್ಕಾರ ಕೂಡಲೇ ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಈ ಮೂವರ ಸದಸ್ಯತ್ವವನ್ನು ರದ್ದುಗೊಳಿಸಬೇಕು’ ಎಂದು ಅವರು ಆಗ್ರಹಿಸಿದರು. 

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಯೋಜಕ ವಿ.ನಾಗರಾಜ್ ಮಾತನಾಡಿ, ‘50ಕ್ಕೂ ಹೆಚ್ಚು ನೌಕರರಿಂದ ಹಣ ಪಡೆದು ವಂಚಿಸಿರುವ ಈ ಮೂವರ ವಿರುದ್ಧ ಸಂಜಯನಗರ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಪೊಲೀಸರು ಇದುವರೆಗೂ ಎಫ್ಐಆರ್ ದಾಖಲಿಸಿಲ್ಲ’ ಎಂದರು. 

ಪ್ರತಿಭಟನಕಾರರು ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಡಿ.ನಾರಾಯಣಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ದಸಂಸ (ನಾಗವಾರ ಬಣ) ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಗವಾರ, ಮುಖಂಡರಾದ ಹೆಬ್ಬಾಳ ವೆಂಕಟೇಶ್, ನಾಗರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು