ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜನಾಪುರ ರಸ್ತೆಗೆ ಬಿಡದ ಗ್ರಹಣ

ರಸ್ತೆ ಅಭಿವೃದ್ಧಿಗೆ ಕಾವೇರಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಅಡ್ಡಿ
Last Updated 14 ಏಪ್ರಿಲ್ 2022, 19:03 IST
ಅಕ್ಷರ ಗಾತ್ರ

ಬೆಂಗಳೂರು: ಅಂಜನಾಪುರ 80 ಅಡಿ ರಸ್ತೆ ಅಭಿವೃದ್ಧಿಗೆ ಹಿಡಿದಿರುವ ಗ್ರಹಣ ಸದ್ಯಕ್ಕೆ ಬಿಡುಗಡೆಯಾಗುವ ಲಕ್ಷಣ ಇಲ್ಲ. ಕಳೆದ ಎರಡು ವರ್ಷಗಳಿಂದ ರಸ್ತೆ ಇದ್ದರೂ ಇಲ್ಲದ ಸ್ಥಿತಿಯಲ್ಲಿದ್ದು, ವಾಹನ ಸವಾರರು ಬದಲಿ ರಸ್ತೆಗಳಲ್ಲೂ ಸುತ್ತು ಬಳಸಿ ಸಂಚರಿಸುತ್ತಿದ್ದಾರೆ.

ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರದಿಂದ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಸಂಪರ್ಕಿಸುವ ಅಂಜನಾಪುರ ಮುಖ್ಯ ರಸ್ತೆ ವಾಹನ ಸಂಚಾರಕ್ಕೆ ಯೋಗ್ಯವಿಲ್ಲದಂತೆ ಆಗಿದೆ. ಒಟ್ಟು 6.7 ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ಒಂದೂವರೆ ಕಿಲೋ ಮೀಟರ್ ಮಾತ್ರ ಅಭಿವೃದ್ಧಿಯಾಗಿದೆ. ಉಳಿದಂತೆ 5.2 ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿದೆ.

ವೈಟ್‌ಫೀಲ್ಡ್‌ಗೆ ಕಾವೇರಿ ನೀರು ಪೂರೈಸಲು ಜಲಮಂಡಳಿಯಿಂದ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಿರ್ವಹಿಸಲಾಗುತ್ತದೆ. ದೊಡ್ಡ ದೊಡ್ಡ ಪೈಪ್‌ಗಳನ್ನು ರಸ್ತೆ ಮಧ್ಯದಲ್ಲಿ ನೆಲದೊಳಕ್ಕೆ ಹೂಳಲಾಗುತ್ತಿದೆ.

ರಸ್ತೆ ಮಧ್ಯದಲ್ಲಿ ಪೈಪ್‌ಲೈನ್ ಅಳವಡಿಕೆ ಮಾರ್ಗದಲ್ಲಿ ದೊಡ್ಡ ಬಂಡೆಯೊಂದು ಕಾಣಿಸಿದ್ದು, ಅದನ್ನು ಕತ್ತರಿಸಿ ಪೈಪ್‌ಲೈನ್ ಅಳವಡಿಕೆ ಮಾಡಬೇಕಿದೆ. ಆದ್ದರಿಂದ ಕಾಮಗಾರಿಯ ವೇಗಕ್ಕೆ ತೊಡಕಾಗಿದೆ. ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳದೆ ರಸ್ತೆ ಅಭಿವೃದ್ಧಿ ಅಸಾಧ್ಯ. ಕಾಮಗಾರಿ ನಡೆಯುತ್ತಿರುವ ವೇಗ ನೋಡಿದರೆ ವರ್ಷಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ.

ಒಂದೇ ಒಂದು ವಾಹನವೂ ಸಂಚರಿಸಲು ಸಾಧ್ಯವಿಲ್ಲದಷ್ಟು ರಸ್ತೆ ಹಾಳಾಗಿದೆ. ಆದ್ದರಿಂದ ಪರ್ಯಾಯ ಮಾರ್ಗಗಳಲ್ಲಿ ಸುತ್ತು ಬಳಸಿ ವಾಹನಗಳು ಸಂಚರಿಸುತ್ತಿವೆ. 80 ಅಡಿ ರಸ್ತೆಯ ಅಕ್ಕ–ಪಕ್ಕದ ನಿವಾಸಿಗಳು ಅನಿವಾರ್ಯವಾಗಿ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಒಂದು ವಾಹನ ಹಾದು ಹೋದರೂ ರಸ್ತೆಯ ತುಂಬ ದೂಳು ತುಂಬಿಕೊಳ್ಳುತ್ತದೆ. ರಸ್ತೆ ಅಕ್ಕ–ಪಕ್ಕದ ಮನೆಗಳಿಗೆ ದೂಳು ತುಂಬಿಕೊಂಡು ಗೋಡೆಗಳೆಲ್ಲವೂ ಕೆಂಪು ಬಣ್ಣಕ್ಕೆ ತಿರುಗಿವೆ.ರಸ್ತೆ ಬದಿಯ ಅಂಗಡಿಗಳಿಗೆ ವ್ಯಾಪಾರವೇ ಇಲ್ಲವಾಗಿದೆ.

‘ಎರಡು ವರ್ಷಗಳಿಂದ ದೂಳಿನ ನಡುವೆಯೇ ಜೀವನ ನಡೆಸುತ್ತಿರುವುದರಿಂದ ಅನಾರೋಗ್ಯಕ್ಕೆ ತುತ್ತಾಗಿದ್ದೇನೆ. ನಮ್ಮ ಕಷ್ಟ ಯಾರಿಗೆ ಹೇಳುವುದೋ ಗೊತ್ತಿಲ್ಲ’ ಎಂದು 80 ಅಡಿ ರಸ್ತೆ ಬದಿಯಲ್ಲಿ ಅಂಗಡಿ ನಡೆಸುತ್ತಿರುವ ಲೋಕೇಶ್ ಬೇಸರ ವ್ಯಕ್ತಪಡಿಸಿದರು.

ಇದೇ ರಸ್ತೆ ಬದಿಯಲ್ಲಿ ಬಿಎಂಟಿಸಿ ಬಸ್ ಘಟಕ ಕೂಡ ಇದೆ. ಅಲ್ಲಿಗೆ ಬಸ್‌ಗಳು ಬರುವುದು ಮತ್ತು ಹೋಗುವುದೇ ದೊಡ್ಡ ಸಮಸ್ಯೆ. ರಸ್ತೆಯ ಒಂದು ಬದಿಯಲ್ಲಾದರೂ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರ ಒತ್ತಾಯ.

ಪೈಪ್‌ಲೈನ್ ಕಾಮಗಾರಿ ಮುಗಿದರೆ ರಸ್ತೆ ಅಭಿವೃದ್ಧಿ

‘ಕಾವೇರಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡ ಕೂಡಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗುವುದು’ ಎಂದು ಬಿಡಿಎ ಎಂಜಿನಿಯರಿಂಗ್ ಸದಸ್ಯ ಶಾಂತರಾಜಣ್ಣ ತಿಳಿಸಿದರು.

‘ಮೊದಲೇ ರಸ್ತೆ ಅಭಿವೃದ್ಧಿಪಡಿಸಿದರೆ ಜಲಮಂಡಲಿಯವರು ಮತ್ತೆ ಅಗೆಯುವ ಸಾಧ್ಯತೆ ಇದೆ. ಆದ್ದರಿಂದ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳ್ಳಲಿ ಎಂದು ಕಾಯುತ್ತಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT