ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಅತ್ತಿಬೆಲೆಯಲ್ಲಿ ಬಾಯ್ಲರ್ ಸ್ಫೋಟ: ಮೂವರು ಕಾರ್ಮಿಕರಿಗೆ ಗಾಯ

Last Updated 24 ಸೆಪ್ಟೆಂಬರ್ 2021, 22:04 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನ ಅತ್ತಿಬೆಲೆ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ವಡ್ಡರಪಾಳ್ಯದ ಲೇಕ್ಕೆಮಿಕಲ್‌ ಕಾರ್ಖಾನೆಯಲ್ಲಿ ಶುಕ್ರವಾರ ಬಾಯ್ಲರ್‌ ಸ್ಫೋಟಗೊಂಡು, ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ.

ಅಸ್ಸಾಂ ಮೂಲದ ಸೂರ್ಯನಾಥ್‌ (27), ಹೊಸೂರಿನ ಮೂಕಂಡಪಲ್ಲಿಯ ಜ್ಞಾನವೇಲ್‌ (22) ಹಾಗೂ ಆನೇಕಲ್‌ನ ಮುನೇಗೌಡ (30) ಗಾಯಗೊಂಡವರು. ಈ ಮೂವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಅತ್ತಿಬೆಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರ್ಖಾನೆಯಲ್ಲಿ ಮಧ್ಯಾಹ್ನ 1.10ರ ಸುಮಾರಿಗೆ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಬಾಯ್ಲರ್‌ ಸ್ಫೋಟಗೊಂಡಿದೆ. ಇದರಿಂದ ಕೆಮಿಕಲ್‌ನ ಹೊಗೆ ಕಾರ್ಖಾನೆಯನ್ನು ಆವರಿಸಿಕೊಂಡು ಕಾರ್ಮಿಕರು ಉಸಿರಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಫೋಟದ ರಭಸಕ್ಕೆ ಕಾರ್ಖಾನೆಯ ಚಾವಣಿ ಹಾರುಹೋಗಿದೆ. ಕಾರ್ಖಾನೆಯಲ್ಲಿನ ರಾಸಾಯನಿಕ ದ್ರವವು ಗ್ರಾಮದ ಜನರ ಮೇಲೆ ಹಾರಿ ಬಿದ್ದಿದ್ದು, ಗ್ರಾಮಸ್ಥರು ಭಯಗೊಂಡಿದ್ದಾರೆ.

ಸ್ಫೋಟದಿಂದಾಗಿ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಸ್ಥಳಕ್ಕೆ ಎರಡು ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ ಎರಡು ಗಂಟೆಗೂ ಹೆಚ್ಚು ಕಾಲ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದವು. ಪೊಲೀಸ್‌ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಬೆಂಕಿ ನಂದಿಸಲು ಸಹಕರಿಸಿದರು.

ತಹಶೀಲ್ದಾರ್‌ ಪಿ. ದಿನೇಶ್‌ ಮಾತನಾಡಿ, ‘ಲೇಕ್‌ ಕಾರ್ಖಾನೆಯಲ್ಲಿ ಅನಾಹುತ ಸಂಭವಿಸಿದ್ದು ಪ್ರಾಥಮಿಕವಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಫ್ಯಾಕ್ಟರೀಸ್‌ ಅಂಡ್‌ ಬಾಯ್ಲರ್‌ ಇಲಾಖೆಯು ಸುರಕ್ಷತಾ ಕ್ರಮಗಳ ಬಗ್ಗೆ ವರದಿ ನೀಡುವವರೆಗೂ ಕಾರ್ಖಾನೆಗೆ ಬೀಗಮುದ್ರೆ ಹಾಕಲಾಗಿದೆ’ ಎಂದರು.

‘ವಿವಿಧ ಕಂಪನಿಗಳಲ್ಲಿಯೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವ ಬಗ್ಗೆ ಮಾಹಿತಿಗಳಿವೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ವರದಿ ನೀಡಲು ಫ್ಯಾಕ್ಟರೀಸ್‌ ಆ್ಯಂಡ್‌ ಬಾಯ್ಲರ್‌ ಇಲಾಖೆಗೆ ತಿಳಿಸಲಾಗಿದೆ. ರಾಸಾಯನಿಕ ಕಾರ್ಖಾನೆಗಳಿಗೆ ಪ್ರದೇಶಗಳಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವಂತೆ ತಿಳಿಸಲಾಗಿದೆ’ ಎಂದು ತಿಳಿಸಿದರು.

ಡಿವೈಎಸ್ಪಿ ಎಂ. ಮಲ್ಲೇಶ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ. ವಿಶ್ವನಾಥ್‌ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮಸ್ಥರ ಪ್ರತಿಭಟನೆ
ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಕೈಗಾರಿಕಾ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗ್ರಾಮಕ್ಕೆ ಹೊಂದಿಕೊಂಡಂತೆ ಕೈಗಾರಿಕೆಗಳಿರುವುದರಿಂದ ಸಮಸ್ಯೆ ಉಂಟಾದರೆ ಇಡೀ ಗ್ರಾಮಕ್ಕೆ ತೊಂದರೆಯಾಗುತ್ತದೆ. ಲೇಕ್‌ ಕೆಮಿಕಲ್‌ ಕಂಪನಿಯಲ್ಲಿ ಈ ಹಿಂದೆ ಮೂರು ಬಾರಿ ಅನಾಹುತ ಸಂಭವಿಸಿವೆ. ಪ್ರಾಣಹಾನಿಯೂ ಉಂಟಾಗಿದೆ. ಆದರೆ, ಕಂಪನಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕಂಪನಿಯನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಎ. ಗೋಪಾಲ್‌, ಚೇತನ್, ನೆರಳೂರು ಮುನಿರಾಜು, ಬ್ಯಾಟರಾಜು, ಪುಷ್ಪಾ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ದಿನೇಶ್‌ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT