ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘನೆ ಪತ್ತೆಗೆ ಎಎನ್‌ಪಿಆರ್‌ ಕ್ಯಾಮೆರಾ: ಬೆಂಗಳೂರಿನ ಹಲವೆಡೆ ಕಾರ್ಯಾರಂಭ

ಕಳುವಾದ ವಾಹನಗಳ ಪತ್ತೆಗೂ ಅನುಕೂಲ
Last Updated 24 ಫೆಬ್ರುವರಿ 2022, 16:22 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ಹಳೇ ಪ್ರಕರಣ ಹಾಗೂ ಕಳವಾದ ವಾಹನಗಳ ಪತ್ತೆಗೆ ಹೊಸ ಮಾರ್ಗ ಕಂಡುಕೊಂಡಿರುವ ಪೊಲೀಸರು, ಸ್ವಯಂಪ್ರೇರಿತ ನೋಂದಣಿ ಸಂಖ್ಯೆ ಗುರುತಿಸುವ (ಎಎನ್‌ಪಿಆರ್‌) ಕ್ಯಾಮೆರಾ ಉಪಕರಣ ಬಳಸಲು ಮುಂದಾಗಿದ್ದಾರೆ.

‘ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಪೊಲೀಸರು ಕಿರುಕುಳ ನೀಡುತ್ತಾರೆ’ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದಿದ್ದವು. ಕಣ್ಣಿಗೆ ಕಾಣುವ ರೀತಿಯಲ್ಲಿ ನಿಯಮ ಉಲ್ಲಂಘನೆಯಾದರೆ ಮಾತ್ರ ವಾಹನ ನಿಲ್ಲಿಸಿ ತಪಾಸಣೆ ನಡೆಸುವಂತೆ ಹಿರಿಯ ಅಧಿಕಾರಿಗಳು, ಪೊಲೀಸರಿಗೆ ಸೂಚನೆ ನೀಡಿದ್ದರು.

ಇದರ ನಡುವೆಯೂ ಹಲವು ಪೊಲೀಸರು ಸೂಚನೆ ಪಾಲಿಸುತ್ತಿರಲಿಲ್ಲ. ಹೀಗಾಗಿ, ಸಂಚಾರ ಪೊಲೀಸರ ವಿರುದ್ಧ ನಿತ್ಯವೂ ದೂರುಗಳು ಬರುತ್ತಿದ್ದವು. ಇದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಸಂಚಾರ ಪೊಲೀಸರು, ಎಎನ್‌ಪಿಆರ್‌ ಕ್ಯಾಮೆರಾ ಮೊರೆ ಹೋಗಿದ್ದಾರೆ.

‘500 ಮೀಟರ್ ದೂರದಲ್ಲಿ ಎದುರಿಗೆ ಬರುವ ವಾಹನಗಳ ನೋಂದಣಿ ಸಂಖ್ಯೆಯನ್ನು ಗ್ರಹಿಸಿ, ವಾಹನದ ಮೇಲಿರುವ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಮಾಡುವ ಸಾಮರ್ಥ್ಯ ಎಎನ್‌ಪಿಆರ್‌ ಕ್ಯಾಮೆರಾಗಳಿಗೆ ಇದೆ. ಉಪ್ಪಾರಪೇಟೆ, ಚಾಮರಾಜಪೇಟೆ, ಚಿಕ್ಕಪೇಟೆ, ಹೈಗ್ರೌಂಡ್ಸ್, ಬಸವನಗುಡಿ, ರಾಜಾಜಿನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಈ ಕ್ಯಾಮೆರಾ ಬಳಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ವಾಹನಗಳ ಸಂಪೂರ್ಣ ಮಾಹಿತಿ ಸಾರಿಗೆ ಇಲಾಖೆಯ ಸರ್ವರ್‌ನಲ್ಲಿದೆ. ನಿಯಮ ಉಲ್ಲಂಘನೆ ಪುರಾವೆಗಳು ಸಂಚಾರ ನಿರ್ವಹಣಾ ಕೇಂದ್ರದ (ಟಿಎಂಸಿ) ಸರ್ವರ್‌ನಲ್ಲಿ ದಾಖಲಾಗುತ್ತಿವೆ. ಎರಡೂ ಸರ್ವರ್‌ಗಳನ್ನು ಎಎನ್‌ಪಿಆರ್ ಕ್ಯಾಮೆರಾ ಉಪಕರಣಕ್ಕೆ ಜೋಡಿಸಲಾಗಿದೆ. ಇದರ ಸಹಾಯದಿಂದ ಕ್ಯಾಮೆರಾ ಕೆಲಸ ಮಾಡಲಿದೆ.’

‘ಉಪಕರಣ ನಿರ್ವಹಣೆ ಜವಾಬ್ದಾರಿಯನ್ನು ನಿರ್ದಿಷ್ಟ ಸಿಬ್ಬಂದಿಗೆ ವಹಿಸಲಾಗಿದೆ. ಅವರ ಮೊಬೈಲ್‌ಗೆ ‘ಉಪಕರಣ ನಿರ್ವಹಣೆ ಆ್ಯಪ್‌’ ಇನ್‌ಸ್ಟಾಲ್ ಮಾಡಲಾಗಿದೆ. ಎಎನ್‌ಪಿಆರ್‌ ಕ್ಯಾಮೆರಾ ಉಪಕರಣದಲ್ಲಿ ಕಾಣವ ಎಲ್ಲ ದೃಶ್ಯಗಳು, ಮೊಬೈಲ್‌ನಲ್ಲಿ ಗೋಚರಿಸಲಿವೆ. ಯಾವುದಾದರೂ ವಾಹನದ ಮೇಲೆ ಹಳೇ ಪ್ರಕರಣಗಳು ಬಾಕಿ ಇರುವುದು ಖಾತ್ರಿಯಾಗುತ್ತಿದ್ದಂತೆ, ಅಂಥ ವಾಹನವನ್ನು ಪೊಲೀಸರು ತಡೆದು ದಂಡ ವಿಧಿಸಲಿದ್ದಾರೆ’ ಎಂದೂ ತಿಳಿಸಿದರು.

ಕಳವಾದ ವಾಹನಗಳೂ ಪತ್ತೆ: ‘ರಾಜ್ಯ ಹಾಗೂ ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕಗಳು ತಮ್ಮದೇ ಸರ್ವರ್‌ ಹೊಂದಿವೆ. ಅವುಗಳನ್ನೂ ಎಎನ್‌ಪಿಆರ್‌ ಉಪಕರಣಕ್ಕೆ ಜೋಡಿಸಲಾಗಿದೆ. ಹೀಗಾಗಿ, ಕಳುವಾದ ವಾಹನಗಳ ಮಾಹಿತಿಯೂ ಲಭ್ಯವಾಗಲಿದೆ’ ಎಂದು ಪೊಲೀಸ್ ಅಧಿಕಾರಿ ವಿವರಿಸಿದರು.

‘ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ಇದ್ದರೆ ಉಪಕರಣದಲ್ಲಿ ‘ಹಸಿರು’ ಬಣ್ಣದ ಸೂಚನೆ ಸಿಗುತ್ತದೆ. ಕದ್ದ ವಾಹನವಾಗಿದ್ದರೆ ಕೆಂಪು ಬಣ್ಣದ ಸೂಚನೆ ಲಭ್ಯವಾಗುತ್ತದೆ. ಉಪಕರಣದ ಬಗ್ಗೆ ಸಿಬ್ಬಂದಿಗೂ ತರಬೇತಿ ನೀಡಲಾಗಿದೆ. ಬಾಡಿವೋರ್ನ್‌ ಕ್ಯಾಮೆರಾ ಧರಿಸಲು ಸೂಚಿಸಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT