ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಕೆರೆ ಪುನರುಜ್ಜೀವನ ಆರಂಭ

Last Updated 11 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಕಾಲದಲ್ಲಿ ಸಮೃದ್ಧಿಯಿಂದ ಕೂಡಿದ್ದ ‘ಅರಕೆರೆ ಕೆರೆ’ ಈಗ ಅಳಿವಿನ ಅಂಚಿನಲ್ಲಿದ್ದು, ಇದರ ‍ಪುನರುಜ್ಜೀವನಕ್ಕೆ ಬಿಬಿಎಂಪಿ ಪ್ರಯತ್ನ ಆರಂಭಿಸಿದೆ.‌

ಬನ್ನೇರುಘಟ್ಟ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಈ ಜಲಕಾಯ ರಾಜರ ಕಾಲದಲ್ಲಿ ನಿರ್ಮಾಣವಾಗಿದೆ. ಈ ಕೆರೆ ನೀರನ್ನು ಸುತ್ತಮುತ್ತಲ ಗ್ರಾಮಗಳ ಜನರು ಕುಡಿಯಲು ಕೂಡ ಬಳಸುತ್ತಿದ್ದರು. ದಿನ ಕಳೆದಂತೆ ಕೆರೆಯಲ್ಲಿ ಜೀವಸೆಲೆ ಬತ್ತಲಾರಂಭಿಸಿತು. ನಗರ ಬೆಳೆದಂತೆ ಒಳಚರಂಡಿ ನೀರು ಜಲಕಾಯದ ಒಡಲು ಸೇರಲಾರಂಭಿಸಿತು. ತಿಳಿ ನೀರಿನ ಕೊಳದಂತೆ ನಳನಳಿಸುತ್ತಿದ್ದ ಕೆರೆಗೆ ಒಳಚರಂಡಿ ನೀರು ಹರಿಯಲು ಆರಂಭವಾದ ಬಳಿಕ ಅದರ ಸ್ವರೂಪವೇ ಬದಲಾಗತೊಡಗಿತು. ಈಗ ಅಕ್ಷರಶಃ ಮಲದ ಗುಂಡಿಯಾಗಿ ಬದಲಾಗಿದೆ.

ಕೆರೆಯ ನೀರೆಲ್ಲವೂ ಕಪ್ಪು ಬಣ್ಣಕ್ಕೆ ತಿರುಗಿದೆ, ಇಡೀ ಜಲಮೂಲ ದುರ್ವಾಸನೆ ಬೀರುತ್ತಿದೆ. ಅದರ ಮೇಲೆ ಬೆಳೆದು ನಿಂತಿರುವ ಕಳೆ ಸಸ್ಯ ಕೆರೆಯಲ್ಲಿ ನೀರಿದೆ ಎಂಬುದೇ ಕಾಣದಂತೆ ಆವರಿಸಿಕೊಂಡಿತ್ತು. ಒಂದೆಡೆ ಹೂಳು, ಇನ್ನೊಂದೆಡೆ ಒತ್ತುವರಿಯಿಂದ ಕೆರೆಯ ಸ್ವರೂಪವೇ ಬದಲಾಗಿದೆ. ಸಮೃದ್ಧಿಯಿಂದ ಕೂಡಿದ್ದ ಜಲಕಾಯವನ್ನು ಸರ್ಕಾರವೇ ಹಾಳು ಮಾಡಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ಇದರ ಪುನರುಜ್ಜೀವನಕ್ಕೆ ಬಿಬಿಎಂಪಿ ಹೊಸದಾಗಿ ಯೋಜನೆ ರೂಪಿಸಿದೆ. ಮೊದಲ ಹಂತದಲ್ಲಿ ಒಳಚರಂಡಿ ನೀರು ಕೆರೆಗೆ ಹರಿಯುವುದನ್ನು ತಪ್ಪಿಸಿ, ನೀರು ಶುದ್ಧೀಕರಣ ಮಾಡಲು ಉದ್ದೇಶಿಸಿದೆ. ಅದರ ಭಾಗವಾಗಿ ಕೆರೆಯನ್ನೇ ಆವರಿಸಿದ್ದ ಜೊಂಡು ತೆಗೆಯುವ ಕೆಲಸ ಆರಂಭಿಸಲಾಗಿದೆ. ಒಂದೂವರೆ ತಿಂಗಳಿಂದ ಈ ಕಾಮಗಾರಿ ಆರಂಭವಾಗಿದ್ದು, ಕಳೆ ಸಸ್ಯವನ್ನು ಜೆಸಿಬಿ ಮೂಲಕ ಎಳೆದು ಸುತ್ತಲೂ ಕೆರೆಯ ದಡಕ್ಕೆ ರಾಶಿ ಮಾಡಲಾಗುತ್ತಿದೆ. ಇಡೀ ಜಲಕಾಯವನ್ನು ಕಳೆ ಸಸ್ಯದಿಂದ ಮುಕ್ತಿಗೊಳಿಸಲು ಇನ್ನೂ ಒಂದೂವರೆ ತಿಂಗಳ ಕಾಲಾವಕಾಶ ಬೇಕಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

ಕೆರೆ ಅಭಿವೃದ್ಧಿಯ ಜತೆಗೆ ಸುತ್ತಲೂ ಆಗಿರುವ ಒತ್ತುವರಿಯನ್ನೂ ತೆರವುಗೊಳಿಸಬೇಕು. ಸರ್ವೆ ನಡೆಸಿ ಜಲಮೂಲದ ಜಾಗದಲ್ಲಿ ನಿರ್ಮಾಣ ಆಗಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಮೊದಲ ಹಂತದಲ್ಲಿ ಶುದ್ಧೀಕರಣ

ಸಂಪೂರ್ಣ ಮಲೀನಗೊಂಡಿರುವ ಕೆರೆಯ ನೀರನ್ನು ಶುದ್ಧೀಕರಣಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ (ಕೆರೆ) ಬಿ.ಟಿ. ಮೋಹನಕೃಷ್ಣ ತಿಳಿಸಿದರು.

ಒಳಚರಂಡಿ ನೀರು ಹರಿಯುವುದನ್ನು ಮೊದಲಿಗೆ ತಪ್ಪಿಸಲಾಗುವುದು. ಸೂಕ್ಷ್ಮ ಪೋಷಕಾಂಶಗಳನ್ನು ಬಳಸಿ ಆಮ್ಲಜನಕ ಪ್ರಮಾಣ ಹೆಚ್ಚಿಸಲಾಗುವುದು. ಅದರ ಭಾಗವಾಗಿ ಸೂರ್ಯನ ಬೆಳಕು ನೀರಿನ ಮೇಲೆ ನೇರವಾಗಿ ಬೀಳುವಂತೆ ಮಾಡಲು ಕಳೆ ಸಸ್ಯ ತೆಗೆಯಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಈ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಕೆರೆ ಸುತ್ತಲೂ ಅಭಿವೃದ್ಧಿಪಡಿಸುವ ಯೋಜನೆ ಬಗ್ಗೆ ಮುಂದಿನ ದಿನಗಳಲ್ಲಿ ಆಲೋಚಿಸಲಾಗುವುದು ಎಂದರು.

ಕೆರೆ ಜಾಗ ಕೆಲವಡೆ ಒತ್ತುವರಿ ಕೂಡ ಆಗಿದ್ದು, ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT