ಅರ್ಕಾವತಿ ಬಡಾವಣೆಯಲ್ಲಿ ಮಣ್ಣಿನ ರಸ್ತೆಯಲ್ಲಿ ಸಾಗಬೇಕಾದ ಸ್ಥಿತಿ.
ಡಾಂಬರು ಕಾಣದ ಮಣ್ಣಿನ ರಸ್ತೆ.
'ಹಂತ ಹಂತವಾಗಿ ಮೂಲಸೌಕರ್ಯ'
‘ಬಡಾವಣೆಯ ಸಮಸ್ಯೆ ನನ್ನ ಗಮನದಲ್ಲಿದೆ. ಮೊದಲಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಬೇಕಾಗಿದೆ. ಆ ಬಳಿಕ ಒಳಚರಂಡಿ ಮತ್ತು ರಸ್ತೆಗೆ ಡಾಂಬರೀಕರಣ ಮಾಡುತ್ತೇವೆ. ಈ ಎಲ್ಲ ವ್ಯವಸ್ಥೆಯನ್ನು ಹಂತ ಹಂತವಾಗಿ ಕಾರ್ಯಗತಗೊಳಿಸುತ್ತೇವೆ’ ಎಂದು ಸ್ಥಳೀಯ ಶಾಸಕರೂ ಆದ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು. ‘ಈ ಸಂಬಂಧ ಬಿಡಿಎ ಸೇರಿ ಸಂಬಂಧಿಸಿದ ಸಂಸ್ಥೆಗಳ ಜತೆ ಸಂಪರ್ಕದಲ್ಲಿದ್ದೇನೆ. ಒಳಚರಂಡಿಗೆ ಅಗೆಯುವ ಕೆಲಸ ಇರುತ್ತದೆ. ಛೇಂಬರ್ ಕಟ್ಟಬೇಕು ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಬೇಕಾಗಿದೆ. ಹಂತ ಹಂತವಾಗಿ ಮಾಡುತ್ತೇವೆ’ ಎಂದು ಅವರು ಹೇಳಿದರು.
8212 ನಿವೇಶನ ಅಭಿವೃದ್ಧಿ
2004ರಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ 3339.12 ಎಕರೆ ಭೂ ಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಪ್ರಾಥಮಿಕ ಅಧಿಸೂಚನೆಯಂತೆ 2750 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಅದರಲ್ಲಿ 1766 ಎಕರೆ ಜಮೀನಿನಲ್ಲಿ ಬಡಾವಣೆ ರಚಿಸಲಾಗುತ್ತಿದೆ. ಆರಂಭದಲ್ಲಿ 13689 ನಿವೇಶನ ರಚಿಸಲು ಉದ್ದೇಶಿಸಲಾಗಿತ್ತು. ಸದ್ಯ 8212 ರಲ್ಲಿ ನಿವೇಶನ ರಚನೆ ಮಾಡಿ ಹಂಚಿಕೆ ಮಾಡಲಾಗಿದೆ. ಭೂಸ್ವಾಧೀನ ತಕರಾರಿನಿಂದ 5477 ನಿವೇಶನಗಳನ್ನು ರಚಿಸಲಾಗಿಲ್ಲ ಎಂದು ಬಿಡಿಎ ಮಾಹಿತಿ ನೀಡಿದೆ.