ಭಾನುವಾರ, ಜನವರಿ 24, 2021
28 °C

ಆರೋಗ್ಯ ಕವಚ–108, ಸಹಾಯವಾಣಿ–104 ಟೆಂಡರ್‌ ಪ್ರಕ್ರಿಯೆ ಪರಿಶೀಲನೆಗೆ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆರೋಗ್ಯ ಕವಚ– 108’ ಮತ್ತು ‘ಆರೋಗ್ಯ ಸಹಾಯವಾಣಿ–104’ ಯೋಜನೆಗಳ ಬಗ್ಗೆ ಪ್ರಮುಖ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಮಾರ್ಗದರ್ಶನ ನೀಡಲು ಉನ್ನತ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಲಹಾ ಸಮಿತಿ ಮತ್ತು ಮಾಹಿತಿ ತಂತ್ರಜ್ಞಾನ ವೃತ್ತಿಪರರನ್ನು ಒಳಗೊಂಡ ತಾಂತ್ರಿಕ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ.

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಉನ್ನತಮಟ್ಟದ ಸಲಹಾ ಸಮಿತಿಯಲ್ಲಿ ಅಭಿವೃದ್ಧಿ ಆಯುಕ್ತರು, ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಐಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸದಸ್ಯರು. ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸದಸ್ಯ ಕಾರ್ಯದರ್ಶಿಯಾಗಿ ಇರಲಿದ್ದಾರೆ.

ಬೆಂಗಳೂರು ಐಐಐಟಿ ನಿರ್ದೇಶಕ ಪ್ರೊ. ಎಸ್‌. ಸಡಗೋಪಾನ್ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಮಿತಿ ರಚಿಸಲಾಗಿದೆ. ನಿಮ್ಹಾನ್ಸ್‌ ನಿರ್ದೇಶಕರು, ಐಐಎಸ್‌ಸಿ ಸಹ ಪ್ರೊಫೆಸರ್‌ ಅಬ್ದುಲ್‌ ರವೂಫ್‌, ಐಐಎಂ–ಬಿ ಉತ್ಪಾದನಾ ಮತ್ತು ನಿರ್ವಹಣಾ ವಿಭಾಗದ ಪ್ರೊ. ಹರಿತ ಸಾರಂಗ, ಇಸ್ರೊದ ಪ್ರೊ. ರತ್ನಾಕರ ಮತ್ತು ಕಾರ್ಮಿಕ ಆಯುಕ್ತ ಸದಸ್ಯರಾಗಿರುತ್ತಾರೆ. ಈ ಸಮಿತಿಗೂ ಆರೋಗ್ಯ ಇಲಾಖೆಯ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸಾರ್ವಜನಿಕ ಆರೋಗ್ಯ, ಮಾಹಿತಿ ತಂತ್ರಜ್ಞಾನ ಮತ್ತು ಸಾರಿಗೆ ದೃಷ್ಟಿಯಿಂದ ಈ ಎರಡೂ ಯೋಜನೆಗಳಿಗೆ ಈಗಾಗಲೇ ಕರೆದಿರುವ ಟೆಂಡರ್‌ ಪ್ರಕ್ರಿಯೆ ಮತ್ತು ಖರೀದಿಯಲ್ಲಿನ ವಿಧಾನಗಳನ್ನು ಉನ್ನತಮಟ್ಟದ ಸಮಿತಿ ನಿರ್ವಹಿಸಲಿದೆ. ಟೆಂಡರ್‌ನಲ್ಲಿರುವ ನ್ಯೂನತೆ, ಆಕ್ಷೇಪಣೆ ಮತ್ತು ತಾಂತ್ರಿಕ ಲೋಪ ದೋಷಗಳನ್ನು ತಾಂತ್ರಿಕ ಸಮಿತಿ ಪರಿಶೀಲಿಸಲಿದೆ. ಸಮಿತಿಗಳು ಈ ಯೋಜನೆಗಳ ಬಗ್ಗೆ ಒಂದು ತಿಂಗಳ ಒಳಗೆ ಸರ್ಕಾರಕ್ಕೆ ಅಭಿಪ್ರಾಯ, ಸಲಹೆಗಳನ್ನು ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.