ಬೆಂಗಳೂರು: ಪಶ್ಚಿಮ ವಲಯದಲ್ಲಿ ಹೆಚ್ಚು ಹಾಳಾಗಿರುವ ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುತ್ತಿದೆ ಎಂದು ವಲಯ ಆಯುಕ್ತೆ ಅರ್ಚನಾ ತಿಳಿಸಿದರು.
ಪಶ್ಚಿಮ ವಲಯದ ಓಕಳೀಪುರ ಸಮೀಪದ ಸುಜಾತಾ ಟಾಕೀಸ್ ಮುಂಭಾಗ ಮಿಲ್ಲಿಂಗ್‌ನೊಂದಿಗೆ ರಸ್ತೆ ದುರಸ್ತಿ ಕಾಮಗಾರಿಯನ್ನು ಗುರವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಮುಖ ರಸ್ತೆಗಳ ಕೆಲ ಭಾಗವು ಪೂರ್ಣಮಟ್ಟದಲ್ಲಿ ಹಾಳಾಗಿದ್ದಲ್ಲಿ, ಸಮತಟ್ಟಾಗಿ ಇಲ್ಲದಿದ್ದಲ್ಲಿ ಅಥವಾ ಸಡಿಲವಾಗಿದ್ದಲ್ಲಿ ಅಂತಹ ಜಾಗವನ್ನು ಮಿಲ್ಲಿಂಗ್ ಮಾಡಿ, ದೂಳನ್ನು ಸ್ವಚ್ಛಗೊಳಿಸಿ ಡಾಂಬರ್ ಹಾಕಲಾಗುತ್ತಿದೆ ಎಂದು ತಿಳಿಸಿದರು.
‘ಹಾಟ್ ಮಿಕ್ಸ್’ ಹಾಗೂ ‘ಕೋಲ್ಡ್ ಮಿಕ್ಸ್’ ಬಳಸಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತದೆ. ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ಬಗ್ಗೆ ಪ್ರತಿದಿನ ಅಧಿಕಾರಿಗಳಿಂದ ವರದಿ ಪಡೆದುಕೊಳ್ಳಲಾಗುತ್ತಿದೆ ಎಂದರು.
ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರಮುಖ ರಸ್ತೆಗಳು ಹಾಗೂ ವಾರ್ಡ್ ರಸ್ತೆಗಳಿಗೆ ಪ್ರತ್ಯೇಕವಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ರಸ್ತೆ ಗುಂಡಿಗಳನ್ನು ಶೀಘ್ರವಾಗಿ ಮುಚ್ಚಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ವಲಯ ಜಂಟಿ ಆಯುಕ್ತ ಸಂಗಪ್ಪ, ಮುಖ್ಯ ಎಂಜಿನಿಯರ್ ಶಶಿಕುಮಾರ್, ಕಾರ್ಯಪಾಲಕ ಎಂಜಿನಿಯರ್‌ರಾದ ದೇವರಾಜ್, ಕೀರ್ತಿಕುಮಾರ್ ಉಪಸ್ಥಿತರಿದ್ದರು.