ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯನ ಮೇಲೆ ಹಲ್ಲೆ: ಇನ್‌ಸ್ಪೆಕ್ಟರ್‌ ವಿರುದ್ಧ ತನಿಖೆ

Last Updated 17 ಮೇ 2021, 12:07 IST
ಅಕ್ಷರ ಗಾತ್ರ

ಬೆಂಗಳೂರು: ರೆಮ್‌ಡಿಸಿವಿರ್ ಚುಚ್ಚುಮದ್ದು ಅಕ್ರಮ ಮಾರಾಟದ ವಿಚಾರಣೆ ಹೆಸರಿನಲ್ಲಿ ವೈದ್ಯ ನಾಗರಾಜ್ ಎಂಬುವರ ಮೇಲೆ ಸಂಜಯನಗರ ಠಾಣೆ ಇನ್‌ಸ್ಪೆಕ್ಟರ್ ಕಾತ್ಯಾಯಿನಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಎಸಿಪಿ ತನಿಖೆಗೆ ಆದೇಶಿಸಲಾಗಿದೆ.

ಆರೋಪದ ಬಗ್ಗೆ ವಿಡಿಯೊ ಹರಿಬಿಟ್ಟಿರು ವೈದ್ಯ ನಾಗರಾಜ್, ‘ನನಗೂ ರೆಮ್‌ಡಿಸಿವಿರ್ ಚುಚ್ಚುಮದ್ದು ಮಾರಾಟಕ್ಕೂ ಯಾವುದೇ ಸಂಬಂಧವಿಲ್ಲ. ಯಾರೋ ನನ್ನ ಹೆಸರು ಹೇಳಿದರೆಂಬ ಕಾರಣಕ್ಕೆ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ನನ್ನನ್ನು ಠಾಣೆಗೆ ಕರೆದೊಯ್ದು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿದ್ದರು’ ಎಂದು ದೂರಿದ್ದಾರೆ.

‘ನಾನು ಮಾಡದೇ ಇರುವ ತಪ್ಪು ಒಪ್ಪಿಕೊಳ್ಳುವಂತೆ ಇನ್‌ಸ್ಪೆಕ್ಟರ್ ಕಾತ್ಯಾಯಿನಿ ಹಾಗೂ ಸಿಬ್ಬಂದಿ ಒತ್ತಾಯಿಸಿದ್ದರು. ಅದಕ್ಕೆ ಒಪ್ಪದಿದ್ದಾಗ, ಮನಬಂದಂತೆ ದೇಹದ ಹಲವು ಭಾಗಗಳಿಗೆ ಹೊಡೆದಿದ್ದಾರೆ. ಎರಡು ದಿನ ಠಾಣೆಯಲ್ಲಿಟ್ಟುಕೊಂಡು ನಂತರ ಬಿಟ್ಟು ಕಳುಹಿಸಿದ್ದಾರೆ’ ಎಂದೂ ವೈದ್ಯ ಆರೋಪಿಸಿದ್ದಾರೆ.

‘ನಾನು ಯಾವುದೇ ತಪ್ಪು ಮಾಡಿಲ್ಲವೆಂದು ಗೊತ್ತಾದ ನಂತರ ಮನೆಗೆ ಕಳುಹಿಸಿದ್ದಾರೆ. ಠಾಣೆಯಲ್ಲಾದ ಹಲ್ಲೆ ಬಗ್ಗೆ ಯಾರಿಗೂ ಹೇಳದಂತೆ, ಹೇಳಿದರೆ ಸುಮ್ಮನೇ ಬಿಡುವುದಿಲ್ಲವೆಂದು ಇನ್‌ಸ್ಪೆಕ್ಟರ್‌ ಬೆದರಿಕೆ ಸಹ ಹಾಕಿದ್ದಾರೆ. ನಾನೀಗ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಹಾಸಿಗೆಯಿಂದ ಮೇಲೇಳಲು ಆಗುತ್ತಿಲ್ಲ. ಅಧಿಕಾರ ದುರುಪಯೋಗಪಡಿಸಿಕೊಂಡು ಹಲ್ಲೆ ಮಾಡಿ ಬೆದರಿಕೆ ಹಾಕಿರುವ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದೂ ನಾಗರಾಜ್ ಒತ್ತಾಯಿಸಿದ್ದಾರೆ.

ನಾಗರಾಜ್ ಹರಿಬಿಟ್ಟಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಾಗಿದ್ದು, ‘ಕೋವಿಡ್ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ವೈದ್ಯರ ಮೇಲೆ ಸುಖಾಸುಮ್ಮನೇ ಹಲ್ಲೆ ಮಾಡಿರುವುದು ಸರಿಯಲ್ಲ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ, ‘ಘಟನೆ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಅವರಿಗೆ ಸೂಚನೆ ನೀಡಿದ್ದೇನೆ. ಇನ್‌ಸ್ಪೆಕ್ಟರ್‌ ಅವರದ್ದು ತಪ್ಪು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT