ಶನಿವಾರ, ಏಪ್ರಿಲ್ 4, 2020
19 °C
ಕೆ.ಆರ್.ರಮೇಶ್‌ ಕುಮಾರ್ ಪ್ರಶ್ನೆ

ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜಕೀಯ ಪಕ್ಷಗಳಲ್ಲಿ ಆಂತರಿಕ ‍ಪ್ರಜಾಪ್ರಭುತ್ವ ನಾಶವಾದಾಗ ಪ್ರಜಾಪ್ರಭುತ್ವವೂ ನಾಶವಾಗುತ್ತದೆ. ನಮ್ಮ ರಾಜಕೀಯ ಪಕ್ಷಗಳು ಕುಟುಂಬಗಳ ಹಿಡಿತದಲ್ಲಿವೆ. ಅವುಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆಯಾ’ ಎಂದು ಕಾಂಗ್ರೆಸ್‌ನ ಹಿರಿಯ ಸದಸ್ಯ ಕೆ.ಆರ್.ರಮೇಶ್‌ ಕುಮಾರ್ ಪ್ರಶ್ನಿಸಿದರು.

ವಿಧಾನಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಸಂಬಂಧಿಗಳನ್ನು ವಿಧಾನಸೌಧದಿಂದ ದೂರ ಇಡುತ್ತೇವೆ ಎಂಬುದಾಗಿ ಶಾಸಕರು ಪ್ರಮಾಣ ಮಾಡಬೇಕು ಎಂದು ಶಿವಮೂರ್ತಿ ಶಿವಾಚಾರ್ಯರು ಸಲಹೆ ನೀಡಿದ್ದರು. ಆದರೆ, ಈಗ ನಾವು ಕುಟುಂಬ ಸದಸ್ಯರನ್ನೇ ಉತ್ತರಾಧಿಕಾರಿಗಳನ್ನಾಗಿ ಮಾಡುತ್ತಿದ್ದೇವೆ’ ಎಂದರು.

‘ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಆರಂಭದಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ಗೆಲ್ಲುತ್ತಾರೆ. ಮರುವರ್ಷವೇ ವಿಧಾನಸೌಧ ಪ್ರವೇಶಿಸುತ್ತಾರೆ. ಚುನಾವಣಾ ಆಯೋಗದ ಧೋರಣೆಯೂ ಇಂತಹ ಬೆಳವಣಿಗೆಗೆ ಕಾರಣ. ನಾಮಪತ್ರ ಸಲ್ಲಿಕೆಯ ವೇಳೆಗೆ ನಾವು ಆಸ್ತಿ ಘೋಷಣೆ ಮಾಡುತ್ತೇವೆಯಲ್ಲ. ನಾವು ₹360 ಕೋಟಿ ಆಸ್ತಿ ಘೋಷಣೆ ಮಾಡಿದರೂ ಆಯೋಗ ತನಿಖೆ ನಡೆಸುವುದಿಲ್ಲ. ಐದು ವರ್ಷಗಳಲ್ಲಿ ಆಸ್ತಿ ಹೆಚ್ಚಳ ಹೇಗಾಯಿತು ಎಂದು ತನಿಖೆ ಮಾಡಿಸಲಿ. ಆಗ ಎಲ್ಲವೂ ಸುಧಾರಣೆಯಾಗುತ್ತದೆ’ ಎಂದು ಅವರು ಪ್ರತಿಪಾದಿಸಿದರು.

ಅವರು ಹೇಳಿದ್ದಿಷ್ಟು:
*ಇಲ್ಲಿ ಪರಿಶಿಷ್ಟ ಜಾತಿಯ ಹಲವಾರು ಶಾಸಕರು ಇದ್ದಾರೆ. ಸವರ್ಣಿಯರ ಮತಗಳಿಲ್ಲದೆ ಗೆದ್ದು ಬರುವ ಧೈರ್ಯ ಯಾರಿಗಾದರೂ ಇದೆಯಾ?
*ಗ್ರಾಮ ಪಂಚಾಯಿತಿ ಚುನಾವಣೆಯಾದ ಬಳಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟಿಸುತ್ತೇವೆ. ಅದರ ಬದಲು, ಸದಸ್ಯರ ಆಯ್ಕೆಗೆ ಚುನಾವಣೆ ವೇಳೆಯೇ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನ ಮೀಸಲಾತಿ ಪ್ರಕಟಿಸಿ.
*‍ಪುಣೆ ಒಪ್ಪಂದ ಜಾರಿಗೆ ಬಾರದೇ ಇದ್ದಿದ್ದರೆ ಅಂಬೇಡ್ಕರ್ ಸೋಲುತ್ತಿರಲಿಲ್ಲ. ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ದೊಡ್ಡ ಮನಸ್ಸು ಕಾಂಗ್ರೆಸ್‌ ನಾಯಕರಿಗೆ ಇರಲಿಲ್ಲ.
*ಅಂಬೇಡ್ಕರ್ ನಿಧನರಾದಾಗ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಸ್ಥಳ ನೀಡಲಿಲ್ಲ. ಪಾರ್ಥೀವ ಶರೀರವನ್ನು ಮುಂಬೈಗೆ ತರಲು ನೆರವು ನೀಡಲಿಲ್ಲ. ಇದು ಕಾಂಗ್ರೆಸ್ ಪಕ್ಷ ಮಾಡಿದ ಬಹುದೊಡ್ಡ ತಪ್ಪು‌. ಈಗ ಅಂಬೇಡ್ಕರ್ ಅವರನ್ನು ಹಾಡಿ ಹೊಗಳಬಹುದು. ಪ್ರಶಸ್ತಿಗಳನ್ನು ಕೊಟ್ಟಿರಬಹುದು‌‌. ಆದರೆ, ಅಂದು ಮಾಡಿದ ತಪ್ಪು ಅಕ್ಷಮ್ಯ‌.
*ಅಂಬೇಡ್ಕರ್ ಹಣತೆ ಇದ್ದಂತೆ. ಅವರನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೀಮಿತ ಮಾಡಿದ್ದೇವೆ. ಅವರೊಬ್ಬ ಮಾನವತಾವಾದಿ ಎಂದು ಒಪ್ಪಿಕೊಳ್ಳುವ ಉದಾರ ಮನಸ್ಸು ನಮಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು