ಶನಿವಾರ, ನವೆಂಬರ್ 28, 2020
26 °C

ಎಟಿಎಂ ದುರಸ್ತಿ ಸೋಗಿನಲ್ಲಿ ₹30 ಲಕ್ಷ ಕದ್ದಿದ್ದವ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಟಿಎಂ ಘಟಕದಲ್ಲಿದ್ದ ಯಂತ್ರ ದುರಸ್ತಿ ಮಾಡುವ ಸೋಗಿನಲ್ಲಿ ₹ 30 ಲಕ್ಷ ಕದ್ದು ಪರಾರಿಯಾಗಿದ್ದ ಆರೋಪಿ ವಿನಯ್ ಜೋಗಿ ಎಂಬಾತನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಲಗ್ಗೆರೆ ನಿವಾಸಿಯಾದ ವಿನಯ್, ಎಟಿಎಂ ಘಟಕಗಳಿಗೆ ಹಣ ತುಂಬಿಸುವ ಜವಾಬ್ದಾರಿ ವಹಿಸಿಕೊಂಡಿದ್ದ ಸೆಕ್ಯೂರ್ ವ್ಯಾಲ್ಯೂ ಕಂಪನಿಯಲ್ಲಿ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ. ಆಗಸ್ಟ್ 24ರಂದು ಗೊಲ್ಲರಹಟ್ಟಿಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ‌ ಘಟಕದಲ್ಲಿ ಕೃತ್ಯ ಎಸಗಿ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.

‘ಯಂತ್ರಗಳನ್ನು ಆರೋಪಿಯೇ ದುರಸ್ತಿ ಮಾಡುತ್ತಿದ್ದ. ಆತನ ಬಳಿ ಗುರುತಿನ ಚೀಟಿಯೂ ಇತ್ತು. ಹೀಗಾಗಿ, ಆತ ಘಟಕಕ್ಕೆ ಹೋಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಹಾಗೂ ಗ್ರಾಹಕರು ಸಹ ಪ್ರಶ್ನಿಸಿರಲಿಲ್ಲ. ಕೃತ್ಯ ನಡೆದ ಮರುದಿನದಿಂದ ಆರೋಪಿ ಕೆಲಸಕ್ಕೆ ಬಂದಿರಲಿಲ್ಲ. ಅನುಮಾನಗೊಂಡ ಕಂಪನಿ ವ್ಯವಸ್ಥಾಪಕ, ಘಟಕದಲ್ಲಿ ಪರಿಶೀಲನೆ ನಡೆಸಿದಾಗ ಹಣ ಕದ್ದಿರುವುದು ಗಮನಕ್ಕೆ ಬಂದಿತ್ತು. ಬಳಿಕ ಠಾಣೆಗೆ ದೂರು ನೀಡಿದ್ದರು’ ಎಂದೂ ತಿಳಿಸಿದರು.

‘ಸಾಲ ಮಾಡಿಕೊಂಡಿದ್ದ ಆರೋಪಿ, ಅದನ್ನು ತೀರಿಸಿರಲಿಲ್ಲ. ಸಾಲ ಮರುಪಾವತಿಗಾಗಿ ಸಾಲಗಾರರು ನಿತ್ಯವೂ ಪೀಡಿಸುತ್ತಿದ್ದರು. ಅದೇ ಕಾರಣಕ್ಕೆ ಆರೋಪಿ, ಯಂತ್ರದಲ್ಲಿದ್ದ ಹಣ ಕದ್ದು ಹೋಗಿದ್ದ. ಅದರಲ್ಲಿ, ₹ 14.50 ಲಕ್ಷವನ್ನು ತಂದೆ- ತಾಯಿಗೆ ಕೊಟ್ಟಿದ್ದ. ₹ 11 ಲಕ್ಷವನ್ನು ಸಾಲಗಾರರಿಗೆ ನೀಡಿದ್ದ. ಹಣವನ್ನು ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.

‘ಆರೋಪಿಯು ವಿವಿಧ ಯಂತ್ರಗಳಿಂದ ₹50 ಲಕ್ಷ ಕದ್ದಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.