ಬುಧವಾರ, ಮೇ 18, 2022
23 °C
* ₹ 64 ಲಕ್ಷ ಸಮೇತ ಪರಾರಿಯಾಗಿದ್ದ ಪ್ರಕರಣ

ಅತ್ತೆ ಮಗಳ ಜೊತೆ ಸಿಕ್ಕಿಬಿದ್ದ ಆರೋಪಿ; ₹ 36 ಲಕ್ಷ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಟಿಎಂ ಯಂತ್ರಕ್ಕೆ ತುಂಬಬೇಕಿದ್ದ ₹ 64 ಲಕ್ಷದ ಸಮೇತ ಪರಾರಿಯಾಗಿದ್ದ ಆರೋಪಿ ಯೋಗೇಶ್ (35) ಎಂಬಾತ, ಅತ್ತೆ ಮಗಳ ಜೊತೆಯಲ್ಲಿ ಎಚ್‌.ಡಿ.ಕೋಟೆ ಬಸ್‌ ನಿಲ್ದಾಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

‘ಮಂಡ್ಯದ ಚಿಕ್ಕಬಿದ್ದರಕಲ್ಲು ನಿವಾಸಿಯಾದ ಯೋಗೇಶ್, ಎಟಿಎಂ ಯಂತ್ರಕ್ಕೆ ಹಣ ತುಂಬುವ ಗುತ್ತಿಗೆ ಪಡೆದಿದ್ದ ‘ಸೆಕ್ಯೂರ್ ವ್ಯಾಲಿ’ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಫೆ. 2ರಂದು ನವರಂಗ್ ವೃತ್ತದಲ್ಲಿರುವ ಎಟಿಎಂ ಘಟಕಕ್ಕೆ ತುಂಬಲು ತೆಗದುಕೊಂಡು ಹೊರಟಿದ್ದ ₹ 64 ಲಕ್ಷ ಕದ್ದುಕೊಂಡು, ಅತ್ತೆ ಮಗಳ ಜೊತೆಯಲ್ಲಿ ಪರಾರಿಯಾಗಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿ ಎಚ್‌.ಡಿ.ಕೋಟೆ ನಿಲ್ದಾಣದಲ್ಲಿ ಬುಧವಾರ ಅತ್ತೆ ಮಗಳ ಜೊತೆಯಲ್ಲಿ ಕಾಣಿಸಿಕೊಂಡಿದ್ದ. ಸ್ಥಳಕ್ಕೆ ಹೋಗಿದ್ದ ವಿಶೇಷ ತಂಡ, ಆತನನ್ನು ಬಂಧಿಸಿ ನಗರಕ್ಕೆ ಕರೆತಂದಿದೆ’ ಎಂದೂ ಮೂಲಗಳು ತಿಳಿಸಿವೆ.

‘₹ 64 ಲಕ್ಷ ಕದ್ದಿದ್ದ ಆರೋಪಿ ಬಳಿ ₹ 36 ಲಕ್ಷ ಮಾತ್ರ ಸಿಕ್ಕಿದೆ. ಉಳಿದ ಹಣವನ್ನು ಬಾಡಿಗೆ ಮನೆಯೊಂದರಲ್ಲಿ ಇರಿಸಿರುವುದಾಗಿ ಆತ ಹೇಳುತ್ತಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ, ಸ್ವಲ್ಪ ಹಣವನ್ನು ಪ್ರಕರಣದಲ್ಲಿ ಜಾಮೀನು ಪಡೆಯಲು ನೀಡಿರುವುದಾಗಿ ತಿಳಿಸುತ್ತಿದ್ದಾನೆ’ ಎಂದೂ ಮೂಲಗಳು ಹೇಳಿವೆ.

ಪತ್ನಿಗೆ ಖರ್ಚಿಗೆಂದು ₹ 50 ಸಾವಿರ ಕೊಟ್ಟಿದ್ದ: ‘ಹಣ ತುಂಬಲೆಂದು ಗನ್‌ಮ್ಯಾನ್ ಹಾಗೂ ಕ್ಯಾಷಿಯರ್‌, ಎಟಿಎಂ ಘಟಕದೊಳಗೆ ಹೋಗಿದ್ದರು. ಅದೇ ಸಂದರ್ಭದಲ್ಲಿ ಆರೋಪಿ ಯೋಗೇಶ್, ವಾಹನದಲ್ಲಿ ಉಳಿದಿದ್ದ ಹಣ ಕದ್ದುಕೊಂಡು ಪರಾರಿಯಾಗಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹಣ ತೆಗೆದುಕೊಂಡು ಮನೆಗೆ ಹೋಗಿದ್ದ ಆರೋಪಿ, ಪತ್ನಿಗೆ ಖರ್ಚಿಗೆಂದು ₹ 50 ಸಾವಿರ ಕೊಟ್ಟಿದ್ದ. ಕೆಲಸ ನಿಮಿತ್ತ ಬೇರೆ ಊರಿಗೆ ಹೋಗಬೇಕೆಂದು ಹೇಳಿ ಬ್ಯಾಗ್‌ ಸಮೇತ ಅಲ್ಲಿಂದ ಹೊರಟಿದ್ದ. ರೈಲ್ವೆ ನಿಲ್ದಾಣಕ್ಕೆ ಬಂದು, ಮೊದಲೇ ಅಲ್ಲಿಗೆ ಬಂದಿದ್ದ ತನ್ನ ಅತ್ತೆ ಮಗಳ ಜೊತೆ ಮೈಸೂರಿಗೆ ಹೋಗಿದ್ದ. ನಂತರ ಹಲವೆಡೆ ಇಬ್ಬರೂ ಸುತ್ತಾಡಿದ್ದರು. ಎಚ್‌.ಡಿ.ಕೋಟೆಗೆ ಬಂದಿದ್ದಾಗಲೇ ನಮಗೆ ಸಿಕ್ಕಿಬಿದ್ದರು’ ಎಂದೂ ತಿಳಿಸಿದರು.

‘ಯೋಗೇಶ್‌ಗೆ ಮದುವೆಯಾಗಿತ್ತು. ಆತನ ಅತ್ತೆ ಮಗಳಿಗೂ ಬೇರೊಬ್ಬರ ಜೊತೆ ವಿವಾಹವಾಗಿತ್ತು. ಆದರೂ ಅವರಿಬ್ಬರ ನಡುವೆ ಸಲುಗೆ ಇತ್ತು. ಅದೇ ಕಾರಣಕ್ಕೆ ಅತ್ತೆ ಮಗಳು, ಯೋಗೇಶ್ ಜೊತೆಯಲ್ಲಿ ಹೋಗಿದ್ದರು. ಹಣ ಕದ್ದಿದ್ದ ಸಂಗತಿಯೂ ಅತ್ತೆ ಮಗಳಿಗೆ ಗೊತ್ತಿತ್ತು. ಆದರೆ, ಪತ್ನಿಗೆ ಆ ಬಗ್ಗೆ ಮಾಹಿತಿ ಇರಲಿಲ್ಲ. ಪೊಲೀಸರು ಮನೆಗೆ ಹೋದಾಗ ವಿಷಯ ಗೊತ್ತಾಗಿದೆ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು