ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಟಿಗಾನಹಳ್ಳಿ ರಾಮಯ್ಯ ಮೇಲೆ ಹಲ್ಲೆ: ಪ್ರತಿಭಟನೆ

Published 15 ಏಪ್ರಿಲ್ 2024, 15:41 IST
Last Updated 15 ಏಪ್ರಿಲ್ 2024, 15:41 IST
ಅಕ್ಷರ ಗಾತ್ರ

ಬೆಂಗಳೂರು: ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ ಅವರ ಮೇಲಿನ ಹಲ್ಲೆಯನ್ನು ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಸೋಮವಾರ ಪ್ರತಿಭಟನೆ ನಡೆಸಿದೆ.

ವಿಶ್ವವಿದ್ಯಾಲಯದ ಆಡಳಿತ ಕಚೇರಿಯ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ವಿದ್ಯಾರ್ಥಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

‘ರಾಮಯ್ಯ ಅವರು ಈ ರಾಜ್ಯದ ಸಾಕ್ಷಿಪ್ರಜ್ಞೆ. ಶೋಷಿತರ ಗಟ್ಟಿ ಧ್ವನಿಯಾಗಿ ದುಡಿಯತ್ತಿರುವವರು. ಸಾಹಿತ್ಯ, ಬದುಕು, ಹೋರಾಟದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಿಕೊಡಲು ಶ್ರಮಿಸುತ್ತಿರುವ ಅವರ ಮೇಲೆ ವ್ಯವಸ್ಥಿತ ದಾಳಿ ನಡೆದಿದೆ’ ಎಂದು ಪ್ರಾಧ್ಯಾಪಕ ಪ್ರೊ.ಟಿ.ಎಚ್. ಮೂರ್ತಿ ಆರೋಪಿಸಿದರು.

‘ಇಂತಹ ದಾಳಿಗಳಿಂದ ಶೋಷಿತರ ಪರವಾದ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಸಮಾಜದ ಪ್ರಗತಿಗಾಗಿ, ಮಾನವ ಹಕ್ಕುಗಳಿಗಾಗಿ, ದಮನಿತರ ಪರವಾಗಿ ಧ್ವನಿ ಎತ್ತುತ್ತಿರುವ ಹೋರಾಟಗಾರರಿಗೆ ರಕ್ಷಣೆ ನೀಡಲು ಸಾಧ್ಯವಾಗದಿದ್ದರೆ, ಸರ್ಕಾರ ಹಿರಿಯ ಸಾಹಿತಿಗಳಿಗೆ ಮತ್ತು ಹೋರಾಟಗಾರರಿಗೆ ಆತ್ಮರಕ್ಷಣೆ ಮಾಡಿಕೊಳ್ಳಲು ಪಿಸ್ತೂಲುಗಳನ್ನು ನೀಡಬೇಕು’ ಎಂದು ಆಗ್ರಹಿಸಿದರು.

ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್‌ ರಾಮ್ ಮಾತನಾಡಿ, ‘ರಾಮಯ್ಯನವರ ಮೇಲಿನ ವ್ಯವಸ್ಥಿತ ದಾಳಿ ಪ್ರಗತಿಪರ ವರ್ಗದ ಮೇಲಿನ ದಾಳಿಯಂತೆ ಕಾಣುತ್ತಿದೆ. ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಬಂಧಿತ ಆರೋಪಿಗಳ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ರಾಮಯ್ಯನವರ ಜೊತೆಗೆ ನಾವೆಲ್ಲರೂ ಇದ್ದೇವೆ. ಇಂತದ ದಾಳಿ, ದಬ್ಬಾಳಿಕೆಗಳನ್ನು ಎದುರಿಸುತ್ತೇವೆ’ ಎಂದು ತಿಳಿಸಿದರು.

ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿ ಚಂದ್ರ ಪೆರಿಯಾರ್, ಪ್ರೊ.ಕೃಷ್ಣಮೂರ್ತಿ, ಪ್ರೊ.ಪಿ.ಸಿ. ನಾಗೇಶ್, ಪ್ರೊ. ರಮೇಶ್, ವಿದ್ಯಾರ್ಥಿ ನವೀನ್ ಕುಮಾರ್, ಪ್ರವೀಣ್ ಎಸ್.ಕೆ. ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT