ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾನ್‌ ಮಸಾಲ ತಯಾರಿಕಾ ಅಡ್ಡೆಗಳ ಮೇಲೆ ದಾಳಿ: 21 ಲಕ್ಷ ದಂಡ

Last Updated 8 ಜೂನ್ 2020, 14:42 IST
ಅಕ್ಷರ ಗಾತ್ರ

ಬೆಂಗಳೂರು: ತುಮಕೂರು ಹಾಗೂ ಚಿಕ್ಕಬಳ್ಳಾಪುರದ ತೋಟದ ಮನೆಗಳಲ್ಲಿ ಅನಧಿಕೃತವಾಗಿ ಪಾನ್‌ ಮಸಾಲ ತಯಾರಿಸುತ್ತಿದ್ದ ಅಡ್ಡೆಗಳ ಮೇಲೆ ದಾಳಿ ನಡೆಸಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ₹ 21 ಲಕ್ಷ ದಂಡ ವಿಧಿಸಿ, ಸ್ಥಳದಲ್ಲೇ ₹ 13 ಲಕ್ಷ ವಸೂಲು ಮಾಡಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಮೂರು ಕಡೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎರಡು ಕಡೆ ದಾಳಿ ನಡೆಸಲಾಗಿದೆ. ಶಿರಾ ತೋಟದ ಮನೆ ಗೋದಾಮೊಂದರಲ್ಲಿ 340 ಚೀಲ ಕಚ್ಚಾ ತಂಬಾಕನ್ನು ಪತ್ತೆ ಹಚ್ಚಲಾಗಿದ್ದು, ಹೆಚ್ಚಿನ ತನಿಖೆಗಾಗಿ ತೋಟದ ಮನೆಗೆ ಬೀಗಮುದ್ರೆ ಹಾಕಲಾಗಿದೆ.

ವಾಣಿಜ್ಯ ಇಲಾಖೆಯ ಹೆಚ್ಚುವರಿ ಆಯುಕ್ತ ನಿತೇಶ ಪಾಟೀಲರ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪಾನ್‌ ಮಸಾಲ ಉತ್ಪಾದನೆಗೆ ಬಳಸುತ್ತಿದ್ದ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಶ್ರೀಕರ್‌ ತಿಳಿಸಿದ್ದಾರೆ.

ಪಾನ್‌ ಮಸಾಲ ತಯಾರಕರು 2 ತಿಂಗಳಿಗೊಮ್ಮೆ ಜಾಗ ಬದಲಾಯಿಸುತ್ತಿದ್ದರು. ಒಂದು ಕಡೆ ಪಾನ್‌ ಮಸಾಲ ಉತ್ಪಾದಿಸಿದರೆ ಮತ್ತೊಂದೆಡೆ ಪ್ಯಾಕಿಂಗ್‌ ಮಾಡುತ್ತಿದ್ದರು. ಕಾರ್ಯಾಚರಣೆಗೆ ತೋಟದ ಮನೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅಧಿಕ ಪ್ರಮಾಣದಲ್ಲಿ ಕಚ್ಚಾ ವಸ್ತುಗಳು ಹಾಗೂ ಸಿದ್ಧ ಉತ್ಪನ್ನಗಳನ್ನು ದಾಸ್ತಾನಿಡುತ್ತಿರಲಿಲ್ಲ ಎನ್ನಲಾಗಿದೆ.

2019ರ ಡಿಸೆಂಬರ್‌ನಿಂದ ಪಾನ್‌ ಮಸಾಲ ತಯಾರಿಸುತ್ತಿದ್ದುದ್ದಾಗಿ ಆರೋಪಿಗಳು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಕಚ್ಚಾವಸ್ತುಗಳನ್ನು ಪೂರೈಸಿ, ಪ್ಯಾಕೆಟ್‌ಗಳನ್ನು ಕೊಂಡೊಯ್ದು ವಿತರಿಸುತ್ತಿದ್ದ ಪ್ರಮುಖ ಆರೋಪಿ ಸಿಗಬೇಕಾಗಿದೆ.

ಪಾನ್‌ ಮಸಾಲ ತಯಾರಿಕೆ ಮತ್ತು ಸಾಗಣೆ ಮೇಲೆ ವಾಣಿಜ್ಯ ಇಲಾಖೆ ಅಧಿಕಾರಿಗಳು ನಿಗಾ ಇಟ್ಟಿದ್ದು, ಜಿಎಸ್‌ಟಿ ತೆರಿಗೆ ತಪ್ಪಿಸುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಮಾಹಿತಿಗಳಿದ್ದರೆ ಜಾರಿ ವಿಭಾಗ, ದಕ್ಷಿಣ ವಲಯದ ನಿಯಂತ್ರಣ ಕೊಠಡಿ ದೂರವಾಣಿ– 080– 25704970 ತಿಳಿಸಲು ವಾಣಿಜ್ಯ ಇಲಾಖೆ ಆಯುಕ್ತರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT